3

ಕಚೇರಿಗೆ ಗೈರಾಗುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಗುಜರಾತ್‌ನ ಈ ಅಧಿಕಾರಿಯ ಉತ್ತರವೇನು ಗೊತ್ತೇ?

Published:
Updated:
ಕಚೇರಿಗೆ ಗೈರಾಗುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಗುಜರಾತ್‌ನ ಈ ಅಧಿಕಾರಿಯ ಉತ್ತರವೇನು ಗೊತ್ತೇ?

ಅಹಮದಾಬಾದ್: ‘ನಾನು ಭಗವಾನ್ ಮಹಾವಿಷ್ಣುವಿನ ಹತ್ತನೇ ಅವತಾರ ಕಲ್ಕಿ. ಜಗತ್ತನ್ನು ಪರಿವರ್ತನೆ ಮಾಡಲು ಪ್ರಾಯಶ್ಚಿತ್ತ ಮಾಡುತ್ತಿರುವುದರಿಂದ ಕಚೇರಿಗೆ ಬರಲಾಗದು’.

ಕಚೇರಿಗೆ ಹಾಜರಾಗದೇ ಇರುವುದನ್ನು ಪ್ರಶ್ನಿಸಿ ನೀಡಲಾದ ಶೋಕಾಸ್ ನೋಟಿಸ್‌ಗೆ ಗುಜರಾತ್‌ನ ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ಉತ್ತರವಿದು!

ಗುಜರಾತ್‌ನ ‘ಸರ್ದಾರ್ ಸರೋವರ ಪುನರ್‌ವಸತಿ ಏಜೆನ್ಸಿಯ (ಎಸ್‌ಎಸ್‌ಪಿಎ)’ ಸುಪರಿಂಟೆಂಡಿಂಗ್ ಎಂಜಿನಿಯರ್ ರಮೇಶ್ಚಂದ್ರ ಫೆಫಾರ್ ಕಳೆದ ಎಂಟು ತಿಂಗಳುಗಳಲ್ಲಿ ಕೇವಲ 16 ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬಗ್ಗೆ ಪ್ರಶ್ನಿಸಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

‘ಇಂಥ ಗೈರುಹಾಜರಿ ಪತ್ರಾಂಕಿತ ಅಧಿಕಾರಿಯೊಬ್ಬರಿಗೆ ತಕ್ಕುದಲ್ಲ. ನಿಮ್ಮ ಗೈರುಹಾಜರಿಯಿಂದಾಗಿ ಏಜೆನ್ಸಿಯ ಕೆಲಸಗಳು ಸ್ಥಗಿತಗೊಂಡಿವೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿತ್ತು.

ಇದಕ್ಕುತ್ತರಿಸಿದ ರಮೇಶ್ಚಂದ್ರ, ‘ನೀವು ನಂಬದಿದ್ದರೂ ನಾನು ಮಹಾವಿಷ್ಣುವಿನ ಹತ್ತನೇ ಅವತಾರ. ಇದನ್ನು ಮುಂದಿನ ದಿನಗಳಲ್ಲಿ ಸಾಬೀತುಪಡಿಸಲಿದ್ದೇನೆ’ ಎಂದಿದ್ದಾರೆ.

‘ಜಗತ್ತಿನ ಪರಿವರ್ತನೆಗಾಗಿ ನಾನು ಮನೆಯಲ್ಲಿ ಪ್ರಾಯಶ್ಚಿತ್ತ ಮಾಡುತ್ತಿದ್ದು, ಐದನೇ ಹಂತಕ್ಕೆ ತಲುಪಿದ್ದೇನೆ. ಇಂಥ ಪ್ರಾಯಶ್ಚಿತ್ತ ಕಾರ್ಯವನ್ನು ಕಚೇರಿಯಲ್ಲಿ ಕುಳಿತುಕೊಂಡು ಮಾಡಲು ಸಾಧ್ಯವಿಲ್ಲ’ ಎಂದು ಎರಡು ಪುಟಗಳ ಪ್ರತಿಕ್ರಿಯೆಯಲ್ಲಿ ರಮೇಶ್ಚಂದ್ರ ಹೇಳಿದ್ದಾರೆ.

ತಾವು ನಡೆಸುತ್ತಿರುವ ಪ್ರಾಯಶ್ಚಿತದಿಂದಾಗಿಯೇ ಕಳೆದ 19 ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ತಾವು ಕಚೇರಿಯಲ್ಲಿ ಕುಳಿತು ಸಮಯ ಕಳೆಯಬೇಕೇ ಅಥವಾ ಮನೆಯಲ್ಲಿ ಕುಳಿತು ಇಂತಹ ಉತ್ತಮ ಕಾರ್ಯ ಮಾಡಿ ದೇಶವನ್ನು ಬರದಿಂದ ರಕ್ಷಿಸಬೇಕೇ ಎಂದು ಸರ್ದಾರ್ ಸರೋವರ ಪುನರ್‌ವಸತಿ ಏಜೆನ್ಸಿಗೇ ಮರುಪ್ರಶ್ನೆ ಹಾಕಿದ್ದಾರೆ.

‘2010ರಲ್ಲಿ ಕಚೇರಿಯಲ್ಲಿ ನಾನು ಕಲ್ಕಿ ಅವತಾರ ಎಂಬುದನ್ನು ಕಂಡುಕೊಂಡೆ. ಅಲ್ಲಿಂದ ನಂತರ ನನ್ನಲ್ಲಿ ದೇವತಾ ಶಕ್ತಿ ಇದೆ’ ಎಂದು ರಾಜ್‌ಕೋಟ್‌ನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ ರಮೇಶ್ಚಂದ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry