ಸ್ಪರ್ಧಾತ್ಮಕ ಪರೀಕ್ಷೆ: ಸರ್ಕಾರದಿಂದ ತರಬೇತಿ

7
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: ಜಿಲ್ಲಾ ಪಂಚಾಯ್ತಿ ಸಿಇಒ ಹೇಳಿಕೆ

ಸ್ಪರ್ಧಾತ್ಮಕ ಪರೀಕ್ಷೆ: ಸರ್ಕಾರದಿಂದ ತರಬೇತಿ

Published:
Updated:

ಬೆಳಗಾವಿ: 'ಯುಪಿಎಸ್‌ಸಿ, ಕೆಪಿಎಸ್‌ಸಿ ಹಾಗೂ ಬ್ಯಾಂಕ್ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ' ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್‌ ತಿಳಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ, ಇದೇ ಆಗಸ್ಟ್‌ಗೆ 21 ವರ್ಷ ಪೂರೈಸಲಿರುವ ಪದವೀಧರರು ಅರ್ಜಿ ಸಲ್ಲಿಸಬಹುದು’ ಎಂದು ‍ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

‘ಲೋಕಸೇವೆಗೆ ಬರಬೇಕು, ಸರ್ಕಾರಿ ಅಧಿಕಾರಿಯಾಗಬೇಕು ಎಂದು ಬಯಸುವ ಪದವೀಧರರಿಗೆ ಇದೊಂದು ಸುವರ್ಣಾವಕಾಶ. ಖಾಸಗಿ ಸಂಸ್ಥೆಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಈ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ಗುಣಮಟ್ಟದ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ಕೊಡಿಸುತ್ತದೆ. ರಾಜ್ಯದಲ್ಲಿ 50 ಮಂದಿಯನ್ನು ನವದೆಹಲಿಗೂ ಕಳುಹಿಸಲಾಗುತ್ತದೆ. ಆಯ್ಕೆಯಾದವರಿಗೆ ಭತ್ಯೆಯನ್ನೂ ಕೊಡಲಾಗುತ್ತದೆ. ಇಂತಹ ಅವಕಾಶ ಬೇರಾವ ರಾಜ್ಯದಲ್ಲೂ ಇಲ್ಲ. ಇದನ್ನು ಜಿಲ್ಲೆಯ ಪದವೀಧರರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೋರಿದರು.

ತರಬೇತಿಗೆ ಆಯ್ಕೆಯಾಗಲು: ‘ವಿವಿಧ ಇಲಾಖೆಗಳಿಂದ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದವರು http://www.backwardclasses.kar.nic.in, ಸಮಾಜ ಕಲ್ಯಾಣ ಇಲಾಖೆಯಡಿ www.sw.kar.nic.in ಜಾಲತಾಣದಲ್ಲಿ ಇದೇ 30ರ ಸಂಜೆ 5.30ರ ಒಳಗೆ ಅರ್ಜಿ ಸಲ್ಲಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ https://gokdom.kar.nic.in ಜಾಲತಾಣದಲ್ಲಿ ಜೂನ್‌ 6ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ’ ಎಂದರು.

‘ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ (9 ತಿಂಗಳು), ಕೆಪಿಎಸ್‌ಸಿ (7 ತಿಂಗಳು), ಬ್ಯಾಂಕಿಂಗ್‌ (2 ತಿಂಗಳು), ಗ್ರೂಪ್‌ 'ಸಿ' (3 ತಿಂಗಳು) ಹಾಗೂ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (3 ತಿಂಗಳು) ತರಬೇತಿ ನೀಡಲಾಗುವುದು. ವಾರ್ಷಿಕ ಆದಾಯ ₹ 6 ಲಕ್ಷ ಮೀರಿರದ, 21ರಿಂದ 35 ವರ್ಷ ವಯಸ್ಸಿನವರು ಅರ್ಜಿ ಹಾಕಬಹುದು' ಎಂದು ಅವರು ತಿಳಿಸಿದರು.

’ಸಮಾಜ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಪ್ರವರ್ಗ–1, 2ಎ, 3ಎ ಹಾಗೂ 3ಬಿಗೆ ಸೇರಿದವರು ಪೂರ್ವಭಾವಿ ತರಬೇತಿ ಪಡೆಯಬಹುದು. ಅಂತೆಯೇ, ಅಲ್ಪಸಂಖ್ಯಾತರಿಗೂ ತರಬೇತಿ ದೊರೆಯಲಿದೆ. ದೆಹಲಿಗೆ ಆಯ್ಕೆಯಾದವರು ₹ 13ಸಾವಿರ, ಹೈದರಾಬಾದ್‌, ಚೆನ್ನೈನಲ್ಲಿ ₹ 6 ಸಾವಿರ ಹಾಗೂ ಬೆಂಗಳೂರು, ಧಾರವಾಡದಲ್ಲಿ ₹ 3 ಸಾವಿರ ತರಬೇತಿ ಭತ್ಯೆ ದೊರೆಯಲಿದೆ’ ಎಂದು ವಿವರಣೆ ನೀಡಿದರು.

‘ಈ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕಿಂಗ್‌ ಪಡೆದವರಿಗೆ (ಯಾವುದೇ ಜಿಲ್ಲೆಯವರಾಗಿರಲಿ) ಅವಕಾಶ ದೊರೆಯುತ್ತದೆ. ಪರೀಕ್ಷೆ ಸ್ವರೂಪ ಹೇಗಿರುತ್ತದೆ ಎಂಬ ಕುರಿತು ಜಿಲ್ಲಾ ಪಂಚಾಯ್ತಿಯಿಂದ ಕಾರ್ಯಾಗಾರ ನಡೆಸಲಾಗು

ವುದು ಎಂದರು.

ಅಧಿಕಾರಿಗಳಾದ ಶಂಕರಾನಂದ ಬನಶಂಕರಿ, ಮುನಿರಾಜು, ಉಮಾ ಸಾಲಿಗೌಡರ ಇದ್ದರು.

**

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳು ದುಬಾರಿಯಾಗುತ್ತಿವೆ. ಬಡ ವಿದ್ಯಾರ್ಥಿ ಗಳು ದೂರ ಉಳಿಯುತ್ತಿದ್ದಾರೆ. ಪ್ರತಿಭಾವಂತರಿಗೆ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ

- ಆರ್‌. ರಾಮಚಂದ್ರನ್‌, ಸಿಇಒ, ಜಿಲ್ಲಾ ಪಂಚಾಯ್ತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry