ಮತ ಗಳಿಕೆಯಲ್ಲೂ ಬಿಜೆಪಿ ಮುಂದು

7
ಎರಡೂ ರಾಷ್ಟ್ರೀಯ ಪಕ್ಷಗಳಿಗೂ ‘ದುಬಾರಿ’ಯಾದ ಬಂಡಾಯ!

ಮತ ಗಳಿಕೆಯಲ್ಲೂ ಬಿಜೆಪಿ ಮುಂದು

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಬಿಜೆಪಿ ಮುಂದಿದೆ. 18 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನ ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷವು ತನ್ನ ಸ್ಥಾನಗಳನ್ನು ‘ಭದ್ರ’ಪಡಿಸಿಕೊಂಡಿದೆ. ಹೋದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ 2 ಸ್ಥಾನಗಳನ್ನು (6ರಿಂದ 8ಕ್ಕೆ)ಹೆಚ್ಚಿಸಿಕೊಂಡಿದೆ. ಆದರೆ, ಎರಡು ರಾಷ್ಟ್ರೀಯ ಪಕ್ಷಗಳಿಗೂ ಮತ ಗಳಿಕೆ ಮೇಲೆ ‘ಬಂಡಾಯ’ ಪರಿಣಾಮ ಬೀರಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ.

ಎಲ್ಲ ಕ್ಷೇತ್ರಗಳಲ್ಲೂ ತೊಡೆ ತಟ್ಟಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕ್ರಮವಾಗಿ 12,46,303 ಹಾಗೂ 11,03,179 ಮತಗಳು ಸಿಕ್ಕಿವೆ. ಕೆಲವೆಡೆ ಬಿಎಸ್‌ಪಿ ಜೊತೆಗೆ ದೋಸ್ತಿ ಮಾಡಿಕೊಂಡಿದ್ದ ಜೆಡಿಎಸ್‌ ಗಳಿಸಿರುವುದು 70,542 ಮತಗಳು ಮಾತ್ರ. ಶಿವಸೇನಾ 1,648, ಎನ್‌ಸಿಪಿ 1,589 ಹಾಗೂ ಎಐಎಂಇಪಿ ಅಭ್ಯರ್ಥಿಗಳು 11,247 ಮತಗಳನ್ನು ಪಡೆದಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಪಕ್ಷೇತರರಿಗಿಂತಲೂ ಕಡಿಮೆ ಮತಗಳನ್ನು ಗಳಿಸಿರುವ ಜೆಡಿಎಸ್‌ಗೆ ಈ ಭಾಗದಲ್ಲಿ ‘ನೆಲೆ’ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಕಾಂಗ್ರೆಸ್‌ಗೆ ಕುಡಚಿ, ರಾಯಬಾಗ, ಸವದತ್ತಿ ಯಲ್ಲಮ್ಮ, ಬಿಜೆಪಿಗೆ ಬೈಲಹೊಂಗಲದಲ್ಲಿ ಕಂಡುಬಂದಿದ್ದ ಬಂಡಾಯ ‘ಬಿಸಿ’ ಮುಟ್ಟಿಸಿದೆ. ಏಕೆಂದರೆ, ಈ ಕ್ಷೇತ್ರಗಳಲ್ಲಿ ಆ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಮತ ವಿಭಜನೆಯ ‘ಹೊಡೆತ’ ನೀಡಿದೆ. ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದವರು ಪ್ರತಿಸ್ಪರ್ಧಿ ಪಕ್ಷಗಳಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ!

ಹೀಗಿದೆ ಲೆಕ್ಕಾಚಾರ: ಸವದತ್ತಿಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ವಿಶ್ವಾಸ ವೈದ್ಯ 30,018 ಮತಗಳನ್ನು ಪಡೆದರೆ, ಬಂಡಾಯವಾಗಿ ಸ್ಪರ್ಧಿಸಿದ್ದ ಆನಂದ ಛೋಪ್ರಾ ಅವರಿಗೆ ದಕ್ಕಿದ್ದು 56,189 ಮತಗಳು. ಈ ಇಬ್ಬರ ಮತಗಳೂ ಸೇರಿದರೆ 86,207 ಆಗುತ್ತವೆ. ಇಲ್ಲಿ ಬಿಜೆಪಿಯ ಆನಂದ ಮಾಮನಿ 62,480 ಮತ ಗಳಿಸಿ ಆಯ್ಕೆಯಾಗಿದ್ದಾರೆ.

ರಾಯಬಾಗದಲ್ಲಿ ಕಾಂಗ್ರೆಸ್‌ನ ಪ್ರದೀಪ ಮಾಳಗಿ 50,954 ಹಾಗೂ ಬಂಡಾಯ ಅಭ್ಯರ್ಥಿ ಮಹಾವೀರ ಮೋಹಿತೆ 18,614 ಮತ ಗಳಿಸಿದ್ದಾರೆ. ಇಬ್ಬರ ಮತಗಳೂ ಸೇರಿದರೆ 69,568 ಆಗುತ್ತದೆ. ಇಲ್ಲಿ ಗೆದ್ದ ಬಿಜೆಪಿಯ ದುರ್ಯೋಧನ ಐಹೊಳೆ ಪಡೆದದ್ದು 67,502 ಮತಗಳು. ಕುಡಚಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಮಿತ ಘಾಟಗೆ ಅವರಿಗೆ 52,773, ಬಂಡಾಯ ಅಭ್ಯರ್ಥಿ ಸುರೇಶ ತಳವಾರಗೆ 6,731 ಮತಗಳು ಬಂದಿವೆ.

ಬಿಜೆಪಿಗೂ ಬಿಸಿ: ಬೈಲಹೊಂಗಲದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ 37,498 ಹಾಗೂ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಗದೀಶ ಮೆಟಗುಡ್ಡ 41,918 ಮತಗಳನ್ನು ತೆಗೆದುಕೊಂಡಿದ್ದಾರೆ. ಇಬ್ಬರದೂ ಸೇರಿ 79,416 ಆಗುತ್ತದೆ. ಇಲ್ಲಿ ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ 47,040 ಮತ ಪಡೆದು ವಿಜಯದ ನಗೆ ಬೀರಿದ್ದಾರೆ.

ಕಿತ್ತೂರಿನಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳಿಂದಲೂ ಟಿಕೆಟ್‌ ವಂಚಿತವಾಗಿ ಕೊನೆ ಕ್ಷಣದಲ್ಲಿ

ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಾಬಾಸಾಹೇಬ ಪಾಟೀಲ 25,366 ಮತಗಳನ್ನು ಪಡೆದು ಗಮನಸೆಳೆದಿದ್ದಾರೆ. ಇದರಿಂದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರಿಗೂ ಒಳಪೆಟ್ಟು ಬಿದ್ದಿದೆ. ಇಲ್ಲಿ ಬಿಜೆಪಿಯ ಮಹಾಂತೇಶ ದೊಡ್ಡಗೌಡರ 32,862 ಮತಗಳ ಅಂತರಿಂದ (ಒಟ್ಟು 73,155 ಮತ) ಗೆದ್ದಿದ್ದಾರೆ.

ಪ್ರಮಾಣ ಕಡಿಮೆಯಾದರೂ: ಜಿಲ್ಲೆಯ 18 ಮತ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಅತಿ ಕಡಿಮೆಯಾಗಿದ್ದ ಕ್ಷೇತ್ರ ಬೆಳಗಾವಿ ದಕ್ಷಿಣ. ಇಲ್ಲಿ ಬಿಜೆಪಿ ಅಭಯಕುಮಾರ ಪಾಟೀಲ ಅತಿಹೆಚ್ಚು ಮತಗಳ (58,692) ಅಂತರದಿಂದ ಗೆಲುವು ಸಾಧಿಸಿದ್ದಾರೆ! ಅವರು ಪಡೆದ ಒಟ್ಟು ಮತಗಳು 84,498. ಅವರ ವಿರುದ್ಧ ಎಂಇಎಸ್‌ನವರು ಕಣಕ್ಕಿಳಿಸಿದ್ದ ಇಬ್ಬರು ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ! ಇಲ್ಲಿ ಎಂಇಎಸ್‌ ಪ್ರಭಾವದ ನಡುವೆಯೂ ಕಾಂಗ್ರೆಸ್‌ನ ಲಕ್ಷ್ಮಿನಾರಾಯಣ ಮತ ಗಳಿಕೆಯಲ್ಲಿ 2ನೇ ಸ್ಥಾನ ಗಳಿಸಿದ್ದಾರೆ.

ಜಿಲ್ಲೆಯಲ್ಲಿ ಲಕ್ಷ ಮತ (1,02,040) ಗಳಿಸಿದವರು, ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ

ಕರ ಮಾತ್ರ. ಅವರು ಪ್ರತಿ ಸ್ಪರ್ಧಿ ಬಿಜೆಪಿಯ ಸಂಜಯ ಪಾಟೀಲಗಿಂತ (50,316) ಭಾರಿ ಅಂತರ (51724)ದಿಂದ ಗೆದ್ದಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಅರಭಾವಿಯ ಬಾಲಚಂದ್ರ ಜಾರಕಿಹೊಳಿ (47328) 3ನೇ, ಕಾಗವಾಡದ ಶ್ರೀಮಂತ ಪಾಟೀಲ (32942), ಕಿತ್ತೂರಿನ ಮಹಾಂತೇಶ ದೊಡ್ಡಗೌಡರ (32862) ನಂತರದ ಸ್ಥಾನಗಳಲ್ಲಿದ್ದಾರೆ. ಅಥಣಿಯಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ಮತ ಗಳಿಕೆ ಅಂತರದಲ್ಲಿ ಕೊನೆ ಸ್ಥಾನ (2331 ಮತ)ದಲ್ಲಿದ್ದಾರೆ.

ಬೇರೆಡೆ ಪ್ರಚಾರ ಮಾಡಿಕೊಂಡು: ಸಹೋದರರಾದ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ತಮ್ಮ ಕ್ಷೇತ್ರಕ್ಕಿಂತಲೂ ಇತರ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ನಡುವೆಯೂ ಗೆಲುವು ಸಾಧಿಸಿದ್ದಾರೆ. ಸತೀಶಗೆ ಗೆಲುವಿನ ಅಂತರ ಕಡಿಮೆ ಆಗಿದೆ. ಗೋಕಾಕದಲ್ಲಿ ಬಿಜೆಪಿಯ ಅಶೋಕ ಪೂಜಾರಿ ಅವರ ಮತ ಗಳಿಕೆ

ಪ್ರಮಾಣವೂ ಹೆಚ್ಚಾಗಿದೆಯಾದರೂ, ರಮೇಶ ಜಾರಕಿಹೊಳಿ 14,280 ಮತಗಳ ಅಂತರದಿಂದ ಗೆದ್ದಿದ್ದಾರೆ. ಕ್ಷೇತ್ರ

ದಲ್ಲಿ ತಮ್ಮ ಹಿಡಿತ ಇನ್ನೂ ಇದೆ ಎಂಬ ಸಂದೇಶ ರವಾನಿಸಿದ್ದಾರೆ!

ಅರಭಾವಿ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಕಾಂಗ್ರೆಸ್‌ ಅಭ್ಯರ್ಥಿಗಿಂತಲೂ ಹೆಚ್ಚಿನ ಅಂದರೆ 48,816 ಮತ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry