ತಾಲ್ಲೂಕು ಕೇಂದ್ರವಾಗದ ಮಾಯಕೊಂಡ

7
ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ಊರು

ತಾಲ್ಲೂಕು ಕೇಂದ್ರವಾಗದ ಮಾಯಕೊಂಡ

Published:
Updated:
ತಾಲ್ಲೂಕು ಕೇಂದ್ರವಾಗದ ಮಾಯಕೊಂಡ

ಮಾಯಕೊಂಡ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನ. ನಾಡ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಪದವಿ ಕಾಲೇಜು, ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣ, ಉಪ ಖಜಾನೆ, ಎಪಿಎಂಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರತ್ಯೇಕ ವಿದ್ಯಾರ್ಥಿ ನಿಲಯ ಹೀಗೆ ಹತ್ತು ಹಲವು ಕಚೇರಿಗಳನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಮೆ ಈ ಊರಿನದ್ದು.

ತಾಲ್ಲೂಕು ಹೋರಾಟದ ಹೆಜ್ಜೆಗುರುತು

ತಾಲ್ಲೂಕು ರಚಿಸಲು ಸರ್ಕಾರ ರಚಿಸಿದ ಹುಂಡಿಕಾರ್, ವಾಸುದೇವರಾವ್ ಮತ್ತು ಗದ್ದಿಗೌಡರ್ ಸಮಿತಿಗಳ ಮುಂದೆ ಗ್ರಾಮಸ್ಥರು ತಾಲ್ಲೂಕು ರಚಿಸಲು ಮನವಿ ಮಾಡಿದ್ದರು. ಈಚೆಗೆ ರಚಿತವಾದ ಎಂ.ಬಿ. ಪ್ರಕಾಶ್ ಸಮಿತಿಯ ಮುಂದೂ ಅಹವಾಲು ಸಲ್ಲಿಸಲಾಗಿತ್ತು. ಆದರೆ ಯಾವುದೇ ಸಮಿತಿಗಳು ಮಾಯಕೊಂಡ ತಾಲ್ಲೂಕು ಮಾಡಲು ಶಿಫಾರಸು ಮಾಡಿಲ್ಲ ಎಂದು ಮಾಜಿ ಶಾಸಕ ಕೆ. ಶಿವಮೂರ್ತಿ ಅವರಿಗೆ ಸದನದಲ್ಲಿ ವಿಧಾನಸಭಾ ಕಾರ್ಯದರ್ಶಿ ಉತ್ತರಿಸಿದ್ದರು.

2005ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಎಂ.ಪಿ. ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. 2008ರಲ್ಲಿ ಅಂದಿನ ಶಾಸಕ ಬಸವರಾಜ ನಾಯ್ಕ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಳಿ ನಿಯೋಗ ತೆರಳಿ ತಾಲ್ಲೂಕು ರಚನೆಗೆ ಕೋರಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಸರ್ಕಾರ ರಚಿಸಿದ 42 ತಾಲ್ಲೂಕುಗಳ ಪಟ್ಟಿಯಿಂದ ಮಾಯಕೊಂಡ ಹೊರಗುಳಿಯಿತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೂ ಒತ್ತಡ ತರುವ ಯತ್ನ ನಡೆಯಿತಾದರೂ 49 ತಾಲ್ಲೂಕುಗಳ ಪಟ್ಟಿಯಲ್ಲಿ ಮಾಯಕೊಂಡ ಸೇರಲಿಲ್ಲ. ಕೊನೆವರೆಗೂ ಕಾದು ಮಾಯಕೊಂಡ ಜನತೆ ಕಂಗಾಲಾದರು.

ಮಾಜಿ ಶಾಸಕರಿಗೆ ಬಿಸಿತುಪ್ಪ

ಶಾಸಕರ ನಿರ್ಲಕ್ಷವೇ ತಾಲ್ಲೂಕು ಘೋಷಣೆಯಾಗದಿರಲು ಕಾರಣ ಎಂದು ಆರೋಪಿಸಿ, ಮಾಯಕೊಂಡ ಗ್ರಾಮಸ್ಥರು ಅಂದಿನ ಶಾಸಕರಾದ ಬಸವರಾಜ ನಾಯ್ಕ ಮತ್ತು ಕೆ. ಶಿವಮೂರ್ತಿ ವಿರುದ್ಧ ಹರಿಹಾಯ್ದರು. ಅನೇಕ ಹಳ್ಳಿಗಳಲ್ಲಿ ತೀವ್ರ ಪ್ರತಿಭಟನೆ ಎದುರಾಗಿತ್ತು. ಕೆಲವರು ಮಾಯಕೊಂಡಕ್ಕಿಂತ ದಾವಣಗೆರೆ ಹತ್ತಿರವಾಗುವುದರಿಂದ ನಮ್ಮನ್ನು ಅಲ್ಲಿಗೇ ಸೇರಿಸಿ ಎಂದೂ ಒತ್ತಾಯಿಸಿದ್ದರು. ಈ ಚುನಾವಣೆಯಲ್ಲಿ ಪ್ರೊ.ಲಿಂಗಪ್ಪ ಶಾಸಕರಾಗಿ ಆಯ್ಕೆಯಾಗಿರುವುದು ಗ್ರಾಮಸ್ಥರಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಪೂರಕವಾಗಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವೂ ಗ್ರಾಮಸ್ಥರಲ್ಲಿದೆ.

ತಾಲ್ಲೂಕು ಕೇಂದ್ರಗಳಿಗೆ ಸಮೀಪದಲ್ಲಿರುವ, ಯಾವ ಸಮಿತಿ ಶಿಫಾರಸು ಇಲ್ಲದ ಅಜ್ಜಂಪುರ ಮತ್ತು ನ್ಯಾಮತಿ ತಾಲ್ಲೂಕು ಮಾಡಿ ಮಾಯಕೊಂಡದ ಮನವಿ ತಿರಸ್ಕರಿಸಲಾಗಿದೆ. ಎಚ್‌.ಡಿ. ಕುಮಾರಸ್ವಾಮಿಗೆ ಮಾತ್ರ ನೈಜ ಕಳಕಳಿಯಿದೆ. ಜಾತ್ಯತೀತ ಜನತಾದಳ ಸರ್ಕಾರ ರಚಿಸಿದರೆ ಕುಮಾರಸ್ವಾಮಿ ಬಳಿ ನಿಯೋಗ ತೆರಳಿ ತಾಲ್ಲೂಕು ರಚನೆಗೆ ಒತ್ತಾಯಿಸುತ್ತೇವೆ ಎನ್ನುತ್ತಾರೆ ಜಾತ್ಯತೀತ ಜನತಾದಳದ ಮುಖಂಡ ಕೆ. ರವಿ.

ತಾವು ಮುಖ್ಯಮಂತ್ರಿಯಾದರೆ, ಪ್ರೊ. ಲಿಂಗಪ್ಪ ಶಾಸಕರಾಗಿ ಆಯ್ಕೆಯಾದರೆ ಅವರಿಗೆ ಉನ್ನತ ಹುದ್ದೆ ನೀಡಿ, ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. ಅದರಂತೆ ನಾವು ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ರಾಜಶೇಖರ ಸಂಡೂರು.

ದಶಕಗಳ ಸಮಸ್ಯೆಗಳು...

ದಶಕಗಳಿಂದಲೂ ಬಗೆಹರಿಯದ ಮಾಯಕೊಂಡ ತಾಲ್ಲೂಕು ರಚನೆ, ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ, ಶಾಶ್ವತ ಕುಡಿಯುವ ನೀರಿನ ಯೋಜನೆ ಹೀಗೆ ಹತ್ತು ಹಲವು ಸಮಸ್ಯೆ ಕ್ಷೇತ್ರವನ್ನು ಕಾಡುತ್ತಿವೆ. ಶಾಸಕರು ಹೋರಾಟಕ್ಕೆ ಮುಂದಾಗಿ ನಮ್ಮ ಸಮಸ್ಯೆ ನೀಗಬೇಕಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ. ಆರ್‌. ಲಕ್ಷ್ಮಣ ಮತ್ತು ಉಪಾಧ್ಯಕ್ಷೆ ಸುಲೋಚನಮ್ಮ.

ಜಿ. ಜಗದೀಶ ಮಾಯಕೊಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry