‘ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ರಾಜ್ಯಪಾಲರು’

7
ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

‘ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ರಾಜ್ಯಪಾಲರು’

Published:
Updated:

ಮೈಸೂರು: ‘ಬಹುಮತ ಸಿಗದ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡುವ ಮೂಲಕ ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಕಾರ್ಯಕರ್ತರು, ನಗರದ ಜಿಲ್ಲಾ ನ್ಯಾಯಾಲಯದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

‘ಬಿಜೆಪಿ 104 ಸ್ಥಾನ ಗಳಿಸಿದ್ದರೂ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನಗಳು ಸಿಕ್ಕಿಲ್ಲ. 78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು 38 ಸ್ಥಾನ ಗಳಿಸಿರುವ ಜೆಡಿಎಸ್‌ ಪಕ್ಷಕ್ಕೆ ಬೇಷರತ್‌ ಬೆಂಬಲ ನೀಡಿರುವುದು ಸ್ವಾಗತಾರ್ಹ. ಆದರೆ, ರಾಜ್ಯಪಾಲರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಹೆಚ್ಚು ಸ್ಥಾನ ಪಡೆದಿರುವ ಕಾರಣಕ್ಕೆ ಬಿಜೆಪಿಗೆ ಅವಕಾಶ ನೀಡಿರುವುದು ನ್ಯಾಯಸಮ್ಮತವಲ್ಲ’ ಎಂದು ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ದೂರಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಸ್ವಹಿತಾಸಕ್ತಿಗಾಗಿ ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೆ, ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ರಚನೆಗ ಅವಕಾಶ ಕೊಡುವುದಿಲ್ಲ ಎಂದು ಮೋದಿ ಹೇಳಿರುವುದು ಪ್ರಧಾನಿ ಹುದ್ದೆಗೆ ಮಾಡಿದ ಅಪಮಾನ. ಯಾವುದೇ ವಾಮಮಾರ್ಗ ಹಿಡಿಯಲು ಸಿದ್ಧ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ’ ಎಂದು ಆರೋಪಿಸಿದರು.

ಸಿಪಿಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ರಾಜು, ‘ಕಾಂಗ್ರೆಸ್‌ 1.37 ಕೋಟಿ, ಬಿಜೆಪಿ 1.31 ಕೋಟಿ ಹಾಗೂ ಜೆಡಿಎಸ್‌ 66.46 ಲಕ್ಷ ಮತಗಳನ್ನು ಪಡೆದಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತಗಳು ಸೇರಿದಂತೆ 2.03 ಕೋಟಿ ಆಗುತ್ತದೆ. ಸಂಖ್ಯಾಬಲದಲ್ಲಿ ಕಡಿಮೆ ಇರುವ ಬಿಜೆಪಿಯು ಸರ್ಕಾರ ರಚಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ವರ್ತಿಸಿದ್ದಾರೆ’ ಎಂದು ಕಿಡಿಕಾರಿದರು.

ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ನಿಂತಿದ್ದಾರೆ. ಆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಕೋಮುವಾದಿ ಪಕ್ಷವನ್ನು ದೂರವಿಡಲು ಒಗ್ಗಟ್ಟಿನ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಸವರಾಜ್‌, ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry