ಪ್ರಾಚ್ಯ ವಸ್ತುಗಳ ಸಂರಕ್ಷಣೆ ಆಗಲಿ

7
ಕುವೆಂಪು ವಿವಿ ಇತಿಹಾಸ, ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಜರಾಂ ಹೆಗೆಡೆ ಅಭಿಮತ

ಪ್ರಾಚ್ಯ ವಸ್ತುಗಳ ಸಂರಕ್ಷಣೆ ಆಗಲಿ

Published:
Updated:

ಶಿವಮೊಗ್ಗ: ದೇಶದ ಸಂಸ್ಕೃತಿ, ಸಮಾಜ, ಜೀವನ ಪದ್ಧತಿ, ಸಾಹಿತ್ಯ ಮುಂತಾದ ಸಂಗತಿಗಳನ್ನು ಪರಿಚಯಿಸುವ ಪ್ರಾಚ್ಯ ವಸ್ತುಗಳನ್ನು ಪ್ರತಿಯೊಬ್ಬರೂ ಸಂರಕ್ಷಿಸಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಜಾರಾಂ ಹೆಗೆಡೆ ಹೇಳಿದರು.

ನಗರದ ಶಿವಪ್ಪನಾಯಕ ಅರಮನೆಯಲ್ಲಿ ಪುರಾತತ್ವ ಮತ್ತು ಪರಂಪರೆ ಇಲಾಖೆ ಹಾಗೂ ಡಿವಿಎಸ್ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ವಸ್ತು ಸಂಗ್ರಹಾಲಯಗಳು ನಮ್ಮ ಕಣ್ಣ ಮುಂದೆ ಇತಿಹಾಸವನ್ನು ತೆರೆದಿಡುವ ಕೆಲಸ ಮಾಡುತ್ತಿದ್ದು, ಹಾಗಾಗಿ ಗತಕಾಲದ ಇತಿಹಾಸ ಮತ್ತು ವಾಸ್ತುಶಿಲ್ಪ ಕಲೆಗಳು ಮತ್ತು ಹಳೆಯ ಪಳೆಯುಳಿಕೆಗಳನ್ನು ಸಂರಕ್ಷಿಸುವ ಹಾಗೂ ಪೀಳಿಗೆಯುದ್ದಕ್ಕೂ ಪರಿಚಯಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ. ಅದಕ್ಕಾಗಿ ವಿಶ್ವದಾದ್ಯಂತ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ’ ಎಂದರು

ಐತಿಹಾಸಿಕ ಸಂಗತಿಗಳ ಬಗ್ಗೆ ಮುಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲು ಪ್ರಾಚ್ಯವಸ್ತು ಸಂರಕ್ಷಣೆ ಅವಶ್ಯಕ. ಈ ನಿಟ್ಟಿನಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹ ಹಾಗೂ ಸಂರಕ್ಷಣೆ ನಡೆಯುತ್ತಿದೆ. ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು, ಈ ಕಾರ್ಯ ಕೇವಲ ಇಲಾಖೆಗಳಿಗೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬ ವ್ಯಕ್ತಿಯಿಂದ ಆಗಬೇಕಿದೆ. ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಜಾಗೃತಿ ಸಮಾಜದಲ್ಲಿ ಮೂಡ ಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸಬೇಕಿದೆ’ ಎಂದರು.

ಡಿವಿಎಸ್ ಇತಿಹಾಸ ಉಪನ್ಯಾಸಕ ಡಾ.ಎಸ್.ಜಿ.ಸಾಮಕ ಮಾತನಾಡಿ, ‘ಇತಿಹಾಸವನ್ನು ನೆನೆಯುವುದು ಮತ್ತು ತಿಳಿಯುವುದು ಹಾಗೂ ಪ್ರಾಚೀನ ವಸ್ತುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ತಲುಪಿಸುವುದು ಈ ಆಚ ರಣೆಯ ಉದ್ದೇಶವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದ ಖಂಡೋಬರಾವ್ ಅಧ್ಯಕ್ಷತೆ ವಹಿಸಿದ್ದರು. ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ, ಭಾರತೀಯ ಇತಿಹಾಸ ಸಂಕಲನ ಸಮಿತಿ ಕಾರ್ಯದರ್ಶಿ ನಿಧಿನ್ ಒಲಿಕಾರ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry