ಕೃಷಿಕರಲ್ಲಿ ಮಂದಹಾಸ ಮೂಡಿಸಿದ ‘ಕೃತ್ತಿಕಾ’

7
ಮುಂಗಾರು ಪೂರ್ವ ವರ್ಷಧಾರೆ; ಕೃಷಿ ಚಟುವಟಿಕೆ ಚುರುಕು

ಕೃಷಿಕರಲ್ಲಿ ಮಂದಹಾಸ ಮೂಡಿಸಿದ ‘ಕೃತ್ತಿಕಾ’

Published:
Updated:
ಕೃಷಿಕರಲ್ಲಿ ಮಂದಹಾಸ ಮೂಡಿಸಿದ ‘ಕೃತ್ತಿಕಾ’

ವಿಜಯಪುರ: ಮುಂಗಾರು ಪೂರ್ವ ವರ್ಷಧಾರೆ ಜಿಲ್ಲೆಗೆ ಪಾದಾರ್ಪಣೆ ಮಾಡಿದೆ. ಮೇ 8ರಿಂದ 18ರವರೆಗೂ (ಮೇ 10, 16 ಹೊರತು ಪಡಿಸಿ) ನಿತ್ಯವೂ ಒಂದಿಲ್ಲ ಒಂದೆಡೆ ಮಳೆ ಸುರಿಯುತ್ತಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

‘ಕೃತ್ತಿಕಾ’ ಮಳೆ ಆರಂಭಗೊಂಡ ಬೆನ್ನಿಗೆ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆದಿವೆ. ಗುರುವಾರ ಜಿಲ್ಲೆಯ ವಿವಿಧೆಡೆ ಹದ ಮಳೆ ಸುರಿದಿದ್ದು, ರೈತ ಸಮೂಹ ಖುಷಿಯಿಂದ ಹೊಲದತ್ತ ಹೆಜ್ಜೆ ಹಾಕಿದೆ.

ಮುಂಗಾರು ಬಿತ್ತನೆಗಾಗಿ ಭೂಮಿ ಹದಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದಕ್ಕೆ ಪೂರಕವಾಗಿ ಹೆಸರುಕಾಳು ಬಿತ್ತನೆ ಬೀಜ ಖರೀದಿ ಸೇರಿದಂತೆ ಇನ್ನಿತರೆ ಕೃಷಿ ಸಲಕರಣೆ ಸಂಗ್ರಹಣೆಯ ಸಿದ್ಧತೆ ನಡೆದಿದೆ.

‘ಸಮಯಕ್ಕ ಸರಿಯಾಗಿ ಮಳಿ ಸುರಿಯದಿದ್ದಕ್ಕ ಹಿಂದಿನ ವರ್ಸಗಳಲ್ಲಿ ತೋಟದಾಗ ಬಿತ್ತಾಕ ಹಸಿ ಮಾಡಿದ್ವಿ. ಆದ್ರೆ ಈ ವರ್ಸ ಮಳಿ ಆಗಿದ, ಹಸಿ ಮಾಡೋ ಶ್ರಮ ತಪ್ಪೈತ. ಇದೀಗ ಸುರಿದ ಮಳಿ ಹೆಸರು ಬಿತ್ಲಾಕ ಒಳ್ಳೆಯ ತಿಥಿ ಒದಗಿಸಿದೆ.

ನಾಲ್ಕೈದು ವರ್ಸದಿಂದ ಮಳಿ ಬೀಳೋದೇ ಕಮ್ಮಿ ಆಗಿದ್ರಿಂದ ಹೊಲದಾಗಿನ ಬೋರ್‌ಗಳು ನೀರಿಲ್ಲದೆ ನಿಂತಿದ್ವು. ಇದ್ರಿಂದ ಬಾಳಾ ಮಂದಿ ದ್ರಾಕ್ಷಿ, ನಿಂಬಿ, ದಾಳಿಂಬೆ ಹಾಳ್ ಮಾಡ್ಕೊಂಡಾರ. ಈ ಬಾರಿ ಮುಂಗಾರಿಗೂ ಮುನ್ನವೇ ಮಳಿ ಚಾಲೂ ಆಗಿರೋದು ನಮ್ ಖುಷಿ ಹೆಚ್ಚಿಸೈತಿ’ ಎಂದು ಬಸವನಬಾಗೇವಾಡಿ ತಾಲ್ಲೂಕು ಮಸಬಿನಾಳ ಗ್ರಾಮದ ಚಂದ್ರಶೇಖರ ಬೈಚಬಾಳ ತಿಳಿಸಿದರು.

‘ಹೋದ ವರ್ಷ ಮಳೆಗಾಲ ಬಂದ್ರೂ ಮಳೆ ಆಗಿರಲಿಲ್ಲ. ಭೂಮಿ ಹದಗೊಳಿಸಿ ಬಿತ್ತನೆಗೆ ಸನ್ನದ್ಧ ಮಾಡಿಕೊಂಡು ಮಳೆಗಾಗಿ ಕಾಯುವ ಪರಿಸ್ಥಿತಿ ಉಂಟಾಗಿತ್ತು. ಆದ್ರ ಈ ವರ್ಷ ದೇವರು ನಮ್ಮ ಮೇಲೆ ಕರುಣೆ ತೋರಿದ್ದರಿಂದ ಈಗಾಗಲೇ ಮಳೆ ಆರಂಭವಾಗಿದೆ.

ತೊಗರಿ ರಾಶಿ ಮಾಡಿದ ತಕ್ಷಣ ಟ್ರ್ಯಾಕ್ಟರ್‌ನಿಂದ ಹೊಲಕ್ಕೆ ನೇಗಿಲು ಹೊಡಿಸಿದ್ದೆ. ಇದೀಗ ಮಳೆ ಆಗಿದ್ರಿಂದ ಹೆಂಟಿಗಳು ಕರಗಿದ್ದು, ಒಂದೆರೆಡು ದಿನಗಳಲ್ಲಿ ಟ್ರ್ಯಾಕ್ಟರ್‌ನಿಂದಲೇ ಹರಗಿಸಿ ಬಿತ್ತನೆಗೆ ಹೊಲ ಸಜ್‌ ಮಾಡ್ತೀವಿ’ ಎನ್ನುತ್ತಾರೆ ಸಿಂದಗಿ ತಾಲ್ಲೂಕು ಕೋರವಾರ ಗ್ರಾಮದ ಗುರಣ್ಣ ಯತ್ನಾಳ ಹೇಳಿದರು. ‘ಎರಡ್‌ ದಿನದ ಹಿಂದೆ ಮಳಿ ಆಗಿದ್ದು ಬಾಳ ಚಲೋ ಆಗ್ಯಾದ. ರಾಬ ಮಾಡಾಕ ನಾಳೆಯಿಂದ ಸಾಮಾನ ರೆಡಿ ಮಾಡಿಕೊಳ್ಳಾಕ ಚಾಲು ಮಾಡ್ತೀವಿ. ಹೊಲ ರೆಡಿ ಆದ ಮೇಲೆ ಇನ್ನೊಮ್ಮೆ ಮಳಿ ಆಯ್ತು ಅಂದ್ರ ಹೆಸರ ಬಿತ್ತಾಕ ಒಳ್ಳೆಯ ತಿಥಿ ಸಿಗ್ತಾದ.

ವರ್ಷಾ ಮಳೆ ತಡ ಮಾಡಿ ಬೀಳ್ತಿದ್ದುದರಿಂದ ಹೆಸರ ಬಿತ್ತಾಕ ಬಾಳ ಲೇಟಾಗುತ್ತಿತ್ತು. ಈ ವರ್ಷ ಚಲೋ ತಿಥಿಯಾಗ ಬಿತ್ತಾಕ ಬರ್ತಿರುವುದರಿಂದ ಐದು ಎಕರೆ ಹೆಸರು ಬಿತ್ತುತೀನಿ. ಉಳಿದ ಐದ ಎಕರೆ ತೊಗರಿ ಬಿತ್ತಾಕ ರೆಡಿ ಆಗ್ವೀನಿ’ ಎಂದು ಮುದ್ದೇಬಿಹಾಳ ತಾಲ್ಲೂಕು ತಂಗಡಗಿ ಗ್ರಾಮದ ಶ್ರೀಶೈಲ ಹೂಲಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂವಿನ ಹಿಪ್ಪರಗಿಯಲ್ಲಿ ಹೆಚ್ಚು ಮಳೆ

ಜಿಲ್ಲೆಯ ವಿವಿಧೆಡೆ ಗುರುವಾರ ವರ್ಷಧಾರೆಯಾಗಿದ್ದು, ಬಸವನಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿಯಲ್ಲಿ 7.73 ಸೆಂ.ಮೀ. ಮಳೆಯಾಗಿದೆ. ಬಸವನಬಾಗೇವಾಡಿಯಲ್ಲಿ 4.91 ಸೆಂ.ಮೀ. ವರ್ಷಧಾರೆಯಾಗಿದ್ದರೆ, ಮನಗೂಳಿಯಲ್ಲಿ 0.51, ಆಲಮಟ್ಟಿಯಲ್ಲಿ 2.65, ಅರೇಶಂಕರದಲ್ಲಿ 3.98, ಮಟ್ಟಿಹಾಳದಲ್ಲಿ 0.60 ಸೆಂ.ಮೀ. ಮಳೆ ಸುರಿದಿದೆ.

ವಿಜಯಪುರ ನಗರ ವ್ಯಾಪ್ತಿಯಲ್ಲಿ 0.72, ನಾಗಠಾಣದಲ್ಲಿ 0.22, ಹಿಟ್ನಳ್ಳಿಯಲ್ಲಿ 1.10, ಕುಮಟಗಿ 0.48, ಕನ್ನೂರ 0.97, ಮುದ್ದೇಬಿಹಾಳದಲ್ಲಿ 2, ನಾಲತವಾಡ 1.64, ತಾಳಿಕೋಟೆಯಲ್ಲಿ 2.14, ಢವಳಗಿಯಲ್ಲಿ 3.10, ದೇವರಹಿಪ್ಪರಗಿ ಪಟ್ಟಣದಲ್ಲಿ 1.94, ಕೊಂಡಗೂಳಿಯಲ್ಲಿ 1.20 ಸೆಂ.ಮೀ. ಮಳೆ ಸುರಿದಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry