ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮೇಲುಗೈ

7
ಮೂರು ಕ್ಷೇತ್ರಗಳಲ್ಲಿ ಪೈಪೋಟಿ ನೀಡಿದ ಜೆಡಿಎಸ್‌; ಎರಡು ಕ್ಷೇತ್ರದಲ್ಲಿ ಬಿಜೆಪಿ ಹಣಾಹಣಿ

ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮೇಲುಗೈ

Published:
Updated:

ವಿಜಯಪುರ: 2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಗಳಿಸಿದ್ದ ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಳ್ಳುವಲ್ಲಿ ‘ಕೈ’ ಪಡೆ ವಿಫಲವಾಗಿದ್ದರೂ; ಒಟ್ಟಾರೆ ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ ಮೂರು ಸ್ಥಾನ ಗಳಿಸಿದ್ದರೆ, ಜೆಡಿಎಸ್‌ ಎರಡು ಸ್ಥಾನ ಪಡೆದಿದೆ. ಒಟ್ಟಾರೆ ಮತ ಗಳಿಕೆಯಲ್ಲಿ ಕಾಂಗ್ರೆಸ್‌ ತನ್ನ ಅಗ್ರಸ್ಥಾನವನ್ನು ಈ ಚುನಾವಣೆಯಲ್ಲೂ ಮುಂದುವರೆಸಿದ್ದು, ಬಿಜೆಪಿ ದ್ವಿತೀಯ ಸ್ಥಾನ ಪಡೆದಿದೆ. ಜೆಡಿಎಸ್‌ ಮೂರನೇ ಸ್ಥಾನದಲ್ಲಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳು ಸ್ಥಾನ ‘ಕೈ’ ವಶ ಪಡಿಸಿಕೊಂಡಿದ್ದ ಕಾಂಗ್ರೆಸ್‌ ಮತಗಳಿಕೆಯಲ್ಲೂ ಮುಂಚೂಣಿಯಲ್ಲಿತ್ತು. ನಾಲ್ಕು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡಿದ್ದ ಜೆಡಿಎಸ್‌ ಯಾವುದೇ ಸ್ಥಾನ ಗಳಿಸದಿದ್ದರೂ; ಹೆಚ್ಚಿನ ಮತ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 9,19,875 ಪುರುಷ ಮತದಾರರು, 8,70,976 ಮಹಿಳಾ ಮತದಾರರು ಸೇರಿದಂತೆ 233 ಇತರೆ ಮತದಾರರನ್ನೊಳಗೊಂಡು ಒಟ್ಟು 17,91,084 ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.

ಮೇ 12ರಂದು ನಡೆದ ಮತದಾನದಲ್ಲಿ 9,19,875 ಪುರುಷ ಮತದಾರರಲ್ಲಿ 6,50,787 ಮತದಾರರು, 8,70,976 ಮಹಿಳಾ ಮತದಾರರಲ್ಲಿ 5,96,064 ಮತದಾರರು, 233 ಇತರೆ ಮತದಾರರಲ್ಲಿ ಎಂಟು ಮತದಾರರಷ್ಟೇ ಮತ ಚಲಾಯಿಸಿದ್ದು, ಒಟ್ಟು 12,46,859 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಚಲಾವಣೆಗೊಂಡ 12.46.859 ಮತಗಳಲ್ಲಿ ಕಾಂಗ್ರೆಸ್‌ ಅಗ್ರಸ್ಥಾನ ಪಡೆದಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿಂದ 4,47,080 ಮತಗಳನ್ನು ತನ್ನ ‘ಕೈ’ ವಶ ಮಾಡಿಕೊಂಡಿದೆ. ಇಂಡಿ, ಬಬಲೇಶ್ವರ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಗಠಾಣ ಮೀಸಲು, ವಿಜಯಪುರ ನಗರ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿದೆ.

ಟಿಕೆಟ್‌ ಹಂಚಿಕೆಯ ಗೊಂದಲದಿಂದ ಆರಂಭದಿಂದಲೂ ಅಷ್ಟೇನು ನಿರೀಕ್ಷೆಯಿಲ್ಲದ ಸಿಂದಗಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಸಿಂದಗಿಯಲ್ಲಿ ಎರಡು ದಶಕದಿಂದಲೂ ಕಾಂಗ್ರೆಸ್‌ಗೆ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇವರಹಿಪ್ಪರಗಿಯಲ್ಲಿ ಪಕ್ಷಕ್ಕೆ ಅಹಿಂದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿವೆ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಮತ ಗಳಿಕೆ ಸೇರಿದಂತೆ ಕ್ಷೇತ್ರ ಗೆಲುವಿನಲ್ಲೂ ಬಿಜೆಪಿ ಈ ಬಾರಿ ತನ್ನ ಸ್ಥಾನ ಸುಧಾರಿಸಿಕೊಂಡಿದೆ. ಹಿಂದಿನ ಬಾರಿ ಕೇವಲ ಒಂದು ಸ್ಥಾನವನ್ನಷ್ಟೇ ಗಳಿಸಿತ್ತು. ಪ್ರಸ್ತುತ ಮೂರು ಸ್ಥಾನ ಗಳಿಸುವ ಜತೆಗೆ, ಮತ ಗಳಿಕೆಯಲ್ಲೂ ಸಾಕಷ್ಟು ಮುಂದಿದೆ. ಕಾಂಗ್ರೆಸ್‌ಗಿಂತ ಕೇವಲ 10458 ಮತಗಳನ್ನಷ್ಟೇ ಕಡಿಮೆ ಗಳಿಸಿದೆ.

ಎಂಟು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಒಟ್ಟು 4,36,622 ಮತಗಳನ್ನು ಗಳಿಸಿದೆ. ವಿಜಯಪುರ ನಗರ, ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ; ಬಬಲೇಶ್ವರ, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯೊಡ್ಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲ ಕೊನೆಯವರೆಗೂ ಪರಿಹಾರವಾಗದಿದ್ದುದರಿಂದ ನಿರೀಕ್ಷೆಯಂತೆ ನಾಗಠಾಣ ಮೀಸಲು, ಇಂಡಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ನಿಂತಿದೆ.

ಜೆಡಿಎಸ್‌ ಪರಿಸ್ಥಿತಿ ಈ ಚುನಾವಣೆಯಲ್ಲಿ ಸುಧಾರಿಸಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡಿ ಎರಡನೇ ಸ್ಥಾನಕ್ಕೆ ಸೀಮಿತವಾಗಿತ್ತು. ಬಬಲೇಶ್ವರ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಬ್ಬರೂ ‘ಕಮಲ’ ಪಾಳೆಯ ಸೇರಿದ್ದರಿಂದ ಜನತಾದಳದ ಬಲ ದಿನೇ ದಿನೇ ಕುಸಿದಿತ್ತು.

ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ 2,83,377 ಮತಗಳನ್ನು ಪಡೆದಿದ್ದು, ಸಿಂದಗಿ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ದೇವರಹಿಪ್ಪರಗಿ, ಇಂಡಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಚುನಾವಣಾ ಪೂರ್ವ ಮೈತ್ರಿಯಂತೆ ಬಿಎಸ್‌ಪಿಗೆ ಬಿಟ್ಟುಕೊಟ್ಟಿತ್ತು. ಇಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಅಡಿವೆಪ್ಪ ಸಾಲಗಲ್ಲ ನಾಮಪತ್ರ ವಾಪಸ್‌ ಪಡೆದಿದ್ದರು. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಕೇವಲ 2083 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದರು.

ಬಿಜೆಪಿಗೆ ಸೆಡ್ಡು ಹೊಡೆದು ಜೆಡಿಎಸ್‌ ಅಭ್ಯರ್ಥಿಯಾಗಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಗಳಾದೇವಿ ಬಿರಾದಾರ 9845 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry