ಸೋಮವಾರ, ಮಾರ್ಚ್ 1, 2021
31 °C
ವಾಡಿಕೆಗಿಂತ ಹೆಚ್ಚು ಮಳೆ: ಬಿತ್ತನೆಗೆ ಅಣಿಯಾದ ರೈತ ಸಮೂಹ

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು

ರಾಮನಗರ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಮಾಗಡಿ ತಾಲ್ಲೂಕಿನ ವಿವಿಧೆಡೆ ಸದ್ಯ ರೈತರು ಹೊಲಗಳನ್ನು ಹಸನು ಮಾಡಿ ಅಲಸಂದೆ ಬಿತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ತೊಗರಿ ಬಿತ್ತನೆ ಕಾರ್ಯವೂ ನಡೆದಿದೆ. ಕನಕಪುರ ಭಾಗದಲ್ಲಿ ರೈತರು ಮುಂಗಾರು ಪೂರ್ವದಲ್ಲಿ ಎಳ್ಳಿನ ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ಮುಂಗಾರು ಪೂರ್ವ ಬಿತ್ತನೆ ಗುರಿಯ ಪ್ರದೇಶದ ಪೈಕಿ ಶೇ 50–60 ರಷ್ಟು ಭೂಮಿಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ನಡೆದಿದೆ. ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರದ ದಾಸ್ತಾನು ಇದ್ದು ರೈತ ಕೇಂದ್ರಗಳ ಮೂಲಕ ವಿತರಣೆ ನಡೆದಿದೆ’ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಸ್.ಎಂ. ದೀಪಜಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕಳೆದ ವರ್ಷದಂತೆಯೇ ಈ ಬಾರಿಯೂ ಮುಂಗಾರು ಪೂರ್ವ ಮಳೆಯು ರೈತರ ಕೈ ಹಿಡಿಯುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸುಮಾರು 150 ಮಿ.ಮೀ. ನಷ್ಟು ಮಳೆಯ ಪ್ರಮಾಣ ದಾಖಲಾಗಿತ್ತು. ಅದರಲ್ಲೂ ಕನಕಪುರ ತಾಲ್ಲೂಕು ಅತಿ ಹೆಚ್ಚು ಮಳೆ ಪ್ರಮಾಣ ದಾಖಲಿಸಿತ್ತು.

ಮುಂಗಾರು ಪೂರ್ವ ಅವಧಿಯಲ್ಲಿ ಅಂದರೆ ಇದೇ ವರ್ಷ ಮಾರ್ಚ್‌ 1ರಿಂದ ಈವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 125 ಮಿ.ಮೀ.ಗೆ ಪ್ರತಿಯಾಗಿ 195 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ 59ರಷ್ಟು ಹೆಚ್ಚಿಗೆ ಮಳೆ ಬಿದ್ದಿದೆ.

ಈ ಬೇಸಿಗೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ನಂತರದಲ್ಲಿ ರಾಮನಗರ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳೂ ವಾಡಿಕೆಗಿಂತ ಹೆಚ್ಚು ಮಳೆಯನ್ನೇ ಪಡೆದಿವೆ.

ಮಾವಿಗೆ ಮಿಶ್ರಫಲ

ಈ ಬಾರಿಯ ಮುಂಗಾರು ಪೂರ್ವ ಮಳೆಯಿಂದಾಗಿ ಮಾವಿನ ಫಸಲು ಉತ್ತಮವಾಗಿ ಬಂದಿದ್ದು, ಕಾಯಿಗಳು ಹೆಚ್ಚು ಗಾತ್ರಕ್ಕೆ ಹಿಗ್ಗಿವೆ. ಆದರೆ ಈಚಿನ ಮಳೆ ಗಾಳಿಯಿಂದಾಗಿ ಅಲ್ಲಲ್ಲಿ ಕಾಯಿ ಉದುರತೊಡಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.‘ಸದ್ಯ ಬೇಸಿಗೆ ಮಳೆ ಫಲಪ್ರದವಾಗಿದೆ. ಆದರೆ ಹೆಚ್ಚು ಮಳೆಯಾದರೆ ಕಾಯಿ ಉದುರುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ರೈತರು ಆತಂಕದಿಂದಲೇ ಕಾಯಿಗಳನ್ನು ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದಾಗಿ ಅವರಿಗೆ ಯೋಗ್ಯ ಬೆಲೆ ಸಿಗದಂತಾಗಿದೆ’ ಎನ್ನುತ್ತಾರೆ ರಾಮನಗರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು.

ಮುಂಗಾರು ಪೂರ್ವ ಮಳೆಯು ಜಿಲ್ಲೆಯಲ್ಲಿ ಫಲಪ್ರದವಾಗಿದೆ. ಈ ಅವಧಿಯಲ್ಲಿನ ಕೃಷಿ ಬಿತ್ತನೆ ಗುರಿ ಶೇ 50–60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ

- ಎಸ್.ಎಂ. ದೀಪಜಾ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.