ದುಶ್ಚಟಗಳಿಂದ ದೂರವಿರಲು ಸಲಹೆ

7
ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಅಭಿಮತ

ದುಶ್ಚಟಗಳಿಂದ ದೂರವಿರಲು ಸಲಹೆ

Published:
Updated:

ಮಂಡ್ಯ: ವ್ಯಸನಗಳಿಂದ ದೂರವಿದ್ದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಹೇಳಿದರು.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಶುಕ್ರವಾರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ವತಿಯಿಂದ ನಡೆದ ಬೇಸಿಗೆ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.

‘ಸಂಸ್ಥೆ ವತಿಯಿಂದ ನಾಲ್ಕು ಲಕ್ಷ ಸ್ವ–ಸಹಾಯ ಸಂಘಗಳ ರಚನೆ ಮಾಡಲಾಗಿದ್ದು, ಸಂಘಗಳಲ್ಲಿ 40 ಲಕ್ಷ ಕುಟುಂಬಗಳು ಪಾಲ್ಗೊಂಡಿವೆ. ಈ ಎಲ್ಲ ಕುಟುಂಬಗಳು ಅಲ್ಪ ಮಟ್ಟಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸುತ್ತಿವೆ. ಜತೆಗೆ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಜನರಿಗೆ ಯೋಗ ಶಿಬಿರಗಳನ್ನು ಹಾಗೂ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ’ ಎಂದರು.

‘ಯೋಗ ಮಾಡುವುದರ ಜೊತೆ ವ್ಯಸನಗಳಿಂದ ದೂರು ಇರುವುದು ಅವಶ್ಯ. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಆದರೆ, ಯಾವ ಪಕ್ಷಗಳೂ ಇದರ ಬಗ್ಗೆ ಪ್ರಣಾಳಿಕೆ ಹೊರಡಿಸುವ ಅಥವಾ ಪೂರ್ಣ ಮದ್ಯಪಾನ ನಿಷೇಧ ಮಾಡುವ ಬಗ್ಗೆ ಆಸಕ್ತಿ ತೋರಿಸಿಲ್ಲ’ ಎಂದರು.

ಯೋಗವನ್ನು ಮಕ್ಕಳು, ವಯಸ್ಕರು, ವೃದ್ಧರು, ರೋಗಿಗಳು ಹಾಗೂ ಎಲ್ಲರೂ ಮಾಡಬಹುದು. ಆದರೆ ಯೋಗದಲ್ಲಿರುವ ಕಠಿಣ ಹಾಗೂ ಸರಳ ಆಸನಗಳನ್ನು ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕಾಗುತ್ತದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತರಬೇತಿ ಶಿಬಿರಗಳ ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಎರಡು ಅವಧಿಯಲ್ಲಿ ಇವು ನಡೆಯುತ್ತವೆ. ಶಿಬಿರದ ನಂತರ ಯೋಗವನ್ನು ನಿತ್ಯ ಕಾರ್ಯವಾಗಿ ಮುಂದುವರಿಸಿದಾಗ ಮಾತ್ರ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗಪಟುಗಳು ವಿವಿಧ ಬಗೆಯ ಕಠಿಣ ಯೋಗಾಸನಗಳನ್ನು ಪ್ರದರ್ಶಿಸಿದರು. ವೆಂಕಟೇಶ್ವರ ಧ್ಯಾನ ಕೇಂದ್ರದ ಅಧ್ಯಕ್ಷ ಅನಂತಕುಮಾರ ಸ್ವಾಮೀಜಿ, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಸ್‌.ಶಿವರಾಮು ಬೆಳ್ಳೂರು, ಎ.ಯೋಗೀಶ್‌, ಎಸ್‌.ನಾರಾಯಣ, ಡಾ.ಎಸ್‌.ಶ್ರೀನಿವಾಸ ಶೆಟ್ಟಿ, ಎ.ಸಿ.ರಮೇಶ್, ಡೇವಿಡ್ ಇದ್ದರು.

**

ಯೋಗದಿಂದ ಆರೋಗ್ಯಯುತ ಜೀವನ ಹಾಗೂ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಿದೆ

ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry