ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ–ಮುಂಬೈ ರೈಲಿಗೆ ಅದ್ಧೂರಿ ಸ್ವಾಗತ

ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಸ್ಥಳೀಯರು
Last Updated 19 ಮೇ 2018, 9:24 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಮುಂಬೈ–ಗದಗ ನಡುವೆ ನೇರ ರೈಲು ಓಡಾಟ ಗುರುವಾರ ಆರಂಭವಾಗಿದೆ.

ಗದುಗಿನಿಂದ–ಮುಂಬೈನಿಂದ ಹೊರಟ ರೈಲು ಮಧ್ಯಾಹ್ನ 3.30ಕ್ಕೆ ಬಾಗಲಕೋಟೆಗೆ ಬಂದಾಗ ಬಾಗಲಕೋಟೆ ಜಿಲ್ಲಾ ವಾಣಿಕ್ಯೋದ್ಯಮ ಸಂಸ್ಥೆ ಪ್ರತಿನಿಧಿಗಳು, ರೈಲ್ವೆ ಬಳಕೆದಾರರ ಸಂಘದ ಸದಸ್ಯರು ಹಾಗೂ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಸೇರಿ ಸಂಭ್ರಮದಿಂದ ಬರಮಾಡಿಕೊಂಡು ಪೂಜೆ ಸಲ್ಲಿಸಿದರು. ರೈಲು ಚಾಲಕ, ಸಿಬ್ಬಂದಿಗೆ ಹಾರ ಹಾಕಿ, ಸಿಹಿ ವಿತರಿಸಿ ಸ್ವಾಗತಿಸಿದರು. ನಂತರ ಕೆಲವರು ಪಟಾಕಿ ಸಿಡಿ ಸಂಭ್ರಮಿಸಿದರು.

ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತ ರೈಲಿನ ಮುಂದೆ ನಿಂತುಕೊಂಡು ಸೆಲ್ಫಿ ತೆಗೆದುಕೊಂಡು ಮೊದಲ ಓಡಾಟದ ಸ್ಮರಣೆಯನ್ನು ಚಿತ್ರಪಟವಾಗಿಸಿಕೊಂಡರು.10 ನಿಮಿಷ ಕಾಲ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲು ಆಲಮಟ್ಟಿಯತ್ತ ಮುಂದಡಿ ಇಟ್ಟಿತು.

ಮೊದಲು ಈ ಭಾಗದ ಜನತೆ ಮುಂಬೈಗೆ ತೆರಳಬೇಕಾದರೆ ಸೊಲ್ಲಾಪುರಕ್ಕೆ ತೆರಳಿ ರೈಲು ಬದಲಿಸಬೇಕಿತ್ತು. ಇಲ್ಲದಿದ್ದರೆ ವಾಡಿ ಜಂಕ್ಷನ್‌ಗೆ ತೆರಳಿ ಅಲ್ಲಿ ಹಾದಿ ಬದಲಿಸಬೇಕಿತ್ತು. ಈಗ ನೇರ ರೈಲು ಆರಂಭವಾಗಿರುವುದು ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ ಎಂದು ಸ್ಥಳೀಯ ರೈಲು ಬಳಕೆದಾರರ ಸಂಘದ ಸದಸ್ಯರು ಹಾಗೂ ಬಾಗಲಕೋಟೆ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಸಂತಸಪಟ್ಟರು.

ಮೊದಲ ದಿನದ ಓಡಾಟದ ವೇಳೆ ರೈಲು ಬಹುತೇಕ ಖಾಲಿ ಇತ್ತು. ರೈಲ್ವೆ ಇಲಾಖೆಯಿಂದ ಪ್ರಚಾರದ ಕೊರತೆಯೂ ಪ್ರಯಾಣಿಕರ ನೀರಸ ಪ್ರತಿಕ್ರಿಯೆಗೆ ಕಾರಣವಾಗಿತ್ತು.

ಉದ್ಯಮ–ವ್ಯಾಪಾರಕ್ಕೂ ಅನುಕೂಲ:

ಇಳಕಲ್, ಕಮತಗಿ, ಗುಳೇದಗುಡ್ಡ ಹಾಗೂ ರಬಕವಿ–ಬನಹಟ್ಟಿಯ ಜವಳಿ ಉದ್ಯಮ ನೇರವಾಗಿ ಮುಂಬೈನೊಂದಿಗೆ ವಹಿವಾಟು ಹೊಂದಿದೆ. ಜೊತೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರವಾಡಿ ಸಮುದಾಯದವರು ವ್ಯಾಪಾರ ಹಾಗೂ ಕೌಟುಂಬಿಕ ಸಂಬಂಧಗಳನ್ನು ಮುಂಬೈನೊಂದಿಗೆ ಹೊಂದಿದ್ದಾರೆ. ಇದೀಗ ನೇರ ರೈಲು ಓಡಾಟದಿಂದ ಜಿಲ್ಲೆಯ ಉದ್ಯಮ–ವ್ಯಾಪಾರ ವಲಯದವರಿಗೂ ನೆರವಾಗಲಿದೆ’ ಎಂದು ದಾಮೋದರ ದಾಸ್ ಹೇಳುತ್ತಾರೆ.

ನೂತನ ರೈಲಿಗೆ ಸ್ವಾಗತದ ವೇಳೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ತಾಂಡೂರ, ನಿರ್ದೇಶಕರಾದ ಎಸ್.ಎಸ್.ಲಾತೂರಕರ, ಶ್ರೀಶೈಲ ಹಿರೇಮಠ, ಸಿ.ಎಸ್.ಶೆಟ್ಟರ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಸಂತೋಷ ತೋಳನವರ, ಫುಕರಾಜ್ ಬೇತಾಳ್, ಗಿರಿಧರಲಾಲ್ ಶರ್ಮಾ, ರೈಲ್ವೆ ಹೋರಾಟ ಸಮಿತಿಯ ಕುತ್ಬುದ್ದೀನ್ ಖಾಜಿ ಮತ್ತಿತರರು ಇದ್ದರು.

ಶೀಘ್ರ ಹಮ್‌ಸಫರ್ ಎಕ್ಸ್‌ಪ್ರೆಸ್..

ಬಾಗಲಕೋಟೆ–ದೆಹಲಿ ನಡುವೆ ನೇರ ರೈಲು ಸಂಪರ್ಕಕ್ಕೆ ನೈರುತ್ಯ ರೈಲ್ವೆ ಬಳಕೆದಾರರ ಸಂಘದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ರೈಲ್ವೆ ಸಚಿವ ಪಿಯೂಷ್ ಗೋಯಲ್ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಯಶವಂತಪುರ–ಹುಬ್ಬಳ್ಳಿ–ಗದಗ– ಬಾಗಲಕೋಟೆ–ವಿಜಯಪುರ–ಸೊಲ್ಲಾಪುರ ಮೂಲಕ ದೆಹಲಿಗೆ ಶೀಘ್ರ ಹಮ್‌ಸಫರ್ ರೈಲು ಓಡಾಟ ಆರಂಭವಾಗಲಿದೆ ಎಂದು ದಾಮೋದರ ದಾಸ್ ರಾಠಿ ತಿಳಿಸಿದರು.

**
ಮುಂಬೈ–ಗದಗ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಕೆಗೆ ಇಲ್ಲವೇ ಹೆಚ್ಚಿನ ಆಸನ ಮೀಸಲಿಡುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇವೆ
ದಾಮೋದರ ದಾಸ್ ರಾಠಿ, ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT