ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಇಳಿಕೆ

ತಿಂಗಳ ಮುನ್ನವೇ ಜನ ಜಾಗೃತಿಗೆ ನಿರ್ಧಾರ, ಶುಚಿ ಪರಿಸರ ಕಾಯ್ದುಕೊಳ್ಳಲು ಸಲಹೆ
Last Updated 19 ಮೇ 2018, 9:52 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳಲ್ಲಿ ಗಣನೀಯ ಪ್ರಮಾಣ ದಲ್ಲಿ ಇಳಿಕೆಯಾಗಿದೆ. 2018ರ ಜನವರಿಯಿಂದ ಈವರೆಗೆ 5 ತಿಂಗಳಲ್ಲಿ 146 ಶಂಕಿತ ಪ್ರಕರಣಗಳು ವರದಿಯಾದರೂ 1 ಪ್ರಕರಣ ಮಾತ್ರ ದೃಢಪಟ್ಟಿದೆ. ಹೀಗಾಗಿ ಡೆಂಗಿ ಮುಕ್ತ ಜಿಲ್ಲೆಯನ್ನಾಗಿ ಮಾಡುವತ್ತ ಆರೋಗ್ಯ ಇಲಾಖೆ ಹೆಜ್ಜೆ ಇಟ್ಟಿದೆ.

ಜಿಲ್ಲೆಯಲ್ಲಿ 2017ರ ಒಂದೇ ವರ್ಷದಲ್ಲಿ 813 ಡೆಂಗಿ ಶಂಕಿತ ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾ ಗಿದ್ದರು. 8 ವರ್ಷಗಳ ಇತಿಹಾಸದಲ್ಲೇ ಅತಿಹೆಚ್ಚು 162 ರೋಗಿಗಳಲ್ಲಿ ಡೆಂಗಿ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡ ಕಾರಣ ಡೆಂಗಿ ನಿಯಂತ್ರಣ ಸಾಧ್ಯವಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 12 ಜನ ನಗರ ಆರೋಗ್ಯ ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು ಜನ ಜಾಗೃತಿ ಮೂಡಿಸಿತ್ತು. ಅತಿ ಹೆಚ್ಚು ಮಾಲಿನ್ಯ ಇರುವ ಬೀದರ್‌ ನಗರದಲ್ಲಿ 9 ಜನ ಹಾಗೂ ಬಸವಕಲ್ಯಾಣದಲ್ಲಿ 3 ಜನ ಸ್ವಯಂ ಸೇವಕರನ್ನು ನೇಮಕ ಮಾಡಿ ಮನೆ ಮನೆಗೆ ತಿಳಿವಳಿಕೆ ನೀಡಿತ್ತು.

ಬೀದರ್, ಬಸವಕಲ್ಯಾಣ, ಔರಾದ್‌ ತಾಲ್ಲೂಕಿನ ಡೊಣಗಾಂವ ಹಾಗೂ ಭಾಲ್ಕಿ ತಾಲ್ಲೂಕಿನ ಭಾತಂಬ್ರಾದಲ್ಲಿ
ಅತಿ ಹೆಚ್ಚು ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದವು. ಒಬ್ಬ ಸ್ವಯಂ ಸೇವಕ  ತಿಂಗಳಲ್ಲಿ ಎರಡು ಬಾರಿ 800 ಮನೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದರು. ಮೇಲ್ವಿಚಾರಕರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆರೋಗ್ಯ ಇಲಾಖೆಯು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗಿ ರೋಗಿಗಳ ತ್ವರಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು. ಕೆಲ ಖಾಸಗಿ ವೈದ್ಯರು ರೋಗಿಗಳಲ್ಲಿ ಭಯ ಮೂಡಿಸಿ ಹೈದರಾ ಬಾದ್‌ನ ಆಸ್ಪತ್ರೆಗಳಿಗೆ ಕಳಿಸಿಕೊ ಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರುವುದನ್ನು ಮನವರಿಕೆ ಮಾಡಿತ್ತು.

ಡೆಂಗಿ ನಿಯಂತ್ರಣಕ್ಕೆ ಕ್ರಮ: ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಕಚೇರಿಯ ಆವರಣದಲ್ಲಿರುವ ಪ್ರಯೋಗಾಲಯದಲ್ಲಿ ಉಚಿತ ರಕ್ತ ಮಾದರಿ ಪರೀಕ್ಷೆ ನಡೆಸಿ ರೋಗಿಗಳಿಗೆ ಉಪಚಾರ ನೀಡಲಾಗಿತ್ತು. ಖಾಸಗಿ ವೈದ್ಯರು ಸಹಿತ ಶಂಕಿತ ರೋಗಿಯ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸ ಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿರುವ ಕಾರಣ ಡೆಂಗಿ ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಹೇಳುತ್ತಾರೆ.

‘ಜುಲೈ ಹಾಗೂ ನವೆಂಬರ್‌ ಅವಧಿಯಲ್ಲಿ ಡೆಂಗಿ ಕಾಣಿಸಿಕೊಳ್ಳುತ್ತದೆ. ಟೈರ್‌ಗಳಲ್ಲಿ, ಎಳನೀರು ಮಾರಾಟ ಗಾರರು ಎಸೆದ ಎಳನೀರು ಸಿಪ್ಪೆ, ಶೌಚಾಲಯದ ಪಕ್ಕದಲ್ಲಿ ನೀರು ಸಂಗ್ರಹಿಸಿಡುವ ಡ್ರಮ್‌, ಕುಡಿಯುವ ನೀರಿನ ಟ್ಯಾಂಕ್‌ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇವುಗಳಿಂದಲೇ ಡೆಂಗಿ ಹರಡುತ್ತಿದೆ. ಹೀಗಾಗಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಿದರೆ ಸಾಕು ಡೆಂಗಿ ಬರುವುದನ್ನು ತಡೆಯಬಹುದು’ ಎನ್ನುತ್ತಾರೆ ಅವರು.

**
ಮೂರು ದಿನಗಳಿಗಿಂತ ಹೆಚ್ಚು ದಿನ ಜ್ವರ ಇದ್ದರೆ ರಕ್ತ, ಮೂತ್ರ ಪರೀಕ್ಷೆ ಮಾಡಿಸಿ, ಡೆಂಗಿ ಜ್ವರದ ಲಕ್ಷಣಗಳು ಇವೆಯೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು
– ಡಾ.ಎಂ.ಎ.ಜಬ್ಬಾರ್‌, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT