ಮಾರುಕಟ್ಟೆಗೆ ಬಂದ ರುಚಿಕಟ್ಟಾದ ಮಾವು

7
ಚಿಟಗುಪ್ಪ: ಮಾವುಪ್ರಿಯರಿಗೆ ಬಲು ಖುಷಿ

ಮಾರುಕಟ್ಟೆಗೆ ಬಂದ ರುಚಿಕಟ್ಟಾದ ಮಾವು

Published:
Updated:
ಮಾರುಕಟ್ಟೆಗೆ ಬಂದ ರುಚಿಕಟ್ಟಾದ ಮಾವು

ಚಿಟಗುಪ್ಪ: ಬಿಸಿಲಿನ ಬೇಗೆ ನೀಗಿಸಿ ಕೊಳ್ಳಲು ಹಣ್ಣುಗಳ ರಾಜ ಮಾವು ಮಾರುಕಟ್ಟೆ ಪ್ರವೇಶಿಸಿದ್ದು, ಮಾವು ಪ್ರಿಯರಿಗೆ ಸಂತಸ ಉಂಟು ಮಾಡಿದೆ.

ಇಲ್ಲಿಯ ಪ್ರಮುಖ ರಸ್ತೆ ಬದಿಗಳಲ್ಲಿ, ಬಸವರಾಜ್ ವೃತ್ತದ ಎದುರು, ಹಣ್ಣು ಮಾರುಕಟ್ಟೆ ಹಾಗೂ ಅಂಗಡಿಗಳಲ್ಲಿ ಜೋಡಿಸಿ ಇಡಲಾಗಿರುವ ವಿವಿಧ ಬಗೆಯ ಮಾವಿನ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಓಣಿಗಳಲ್ಲಿ ತಳ್ಳುವ ಗಾಡಿಗಳಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ತಾಲ್ಲೂಕಿನ ನಿರ್ಣಾ, ಮನ್ನಾ ಎಖ್ಖೇಳಿ, ಬೇಮಳಖೇಡಾ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ತರೇಹವಾರಿ ತಳಿಗಳ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ‘ತಳಿ, ರುಚಿ, ಗಾತ್ರ, ಬಣ್ಣ, ಪಕ್ವತೆ (ಮಾಗಿರುವುದು) ಆಧರಿಸಿ ಬೆಲೆ ನಿಗದಿಯಾಗುತ್ತದೆ. ರಸಪುರಿ ಹಣ್ಣು ಕೆಜಿಗೆ ₹ 60, ಬಾದಾಮಿ ₹ 80 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಬಿಸಿಲು ಹೆಚ್ಚಿರುವುದರಿಂದ ಮಾರುಕಟ್ಟೆಗೆ ಗ್ರಾಹಕರು ಬರುತ್ತಿಲ್ಲ. ಕೆಲದಿನಗಳಿಂದ ಸಂಜೆಯೂ ಮಳೆ ಬರುತ್ತಿರುವ ಕಾರಣ ವ್ಯಾಪಾರದಲ್ಲಿ ಹೆಚ್ಚಿನ ವೃದ್ಧಿ ಕಂಡು ಬಂದಿಲ್ಲ. ಹೀಗಾಗಿ ವ್ಯಾಪಾರವೂ ಅಷ್ಟಕಷ್ಟೆ’ ಎಂದು ವ್ಯಾಪಾರಿ ಪಾಶಾಮಿಯ್ಯ ಹೇಳುತ್ತಾರೆ.

‘ಪುಟ್ಟ ಮಕ್ಕಳಿಂದ ವೃದ್ಧರವರೆಗೂ ಗ್ರಾಹಕರು ಮಾವು ಖರೀದಿಸುತ್ತಿದ್ದು, ಉತ್ತಮ ಲಾಭ ಸಿಗುವ ನಿರೀಕ್ಷೆಯಿದೆ’ ಎಂದು ಹಣ್ಣು ವ್ಯಾಪಾರಿ ಶಂಕರ್ ತಿಳಿಸಿದ್ದಾರೆ.

ರಾಮಪುರ, ಕುಡಂಬಲ್, ಇಟಗಾ, ವಳಖಿಂಡಿ, ಬೆಳಕೇರಾ ವಿವಿಧ ಗ್ರಾಮಗಳಿಂದ ಮಹಿಳೆಯರು ಮುಂಜಾನೆ ಮಾವಿನ ಹಣ್ಣುಗಳು ತಂದು ಮಾರಾಟ ಮಾಡಿ, ಸಂಜೆ ಗ್ರಾಮಕ್ಕೆ ಮರಳುತ್ತಾರೆ.

ಗ್ರಾಹಕರು ತೋತಾಪುರಿ ಕಾಯಿಯನ್ನು ಉಪ್ಪಿನಕಾಯಿಗೆ ಹೆಚ್ಚು ಬಳಸುತ್ತಾರೆ. ಅವುಗಳ ಮಾರಾಟ ಆರಂಭವಾದಾಗ ಮತ್ತಷ್ಟು ಹೆಚ್ಚಿನ ಆದಾಯ ಪಡೆಯಬಹುದು’ ವ್ಯಾಪಾರಿ ಸಿದ್ದಣ್ಣ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ವೀರೇಶ್ ಕುಮಾರ್.ಎನ್.ಮಠಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry