ಮಣ್ಣಲ್ಲಿ ಮುಚ್ಚಿದ ರಾಜಕಾಲುವೆ

7
ಗಂಗನಮಿದ್ದೆ ವಾರ್ಡ್‌ 7ರಲ್ಲಿ ಚರಂಡಿ ಒತ್ತುವರಿ: ಸಾರ್ವಜನಿಕರಿಂದ ದೂರು

ಮಣ್ಣಲ್ಲಿ ಮುಚ್ಚಿದ ರಾಜಕಾಲುವೆ

Published:
Updated:
ಮಣ್ಣಲ್ಲಿ ಮುಚ್ಚಿದ ರಾಜಕಾಲುವೆ

ಚಿಕ್ಕಬಳ್ಳಾಪುರ: ‘ನಗರದ ಗಂಗನಮಿದ್ದೆ ವಾರ್ಡ್‌ 7ರಲ್ಲಿರುವ ರಾಜಕಾಲುವೆಯನ್ನು ಜಿ.ಎಂ.ಮುನಿಬೈರಪ್ಪ ಮತ್ತು ಅವರ ಮಗ ಒತ್ತುವರಿ ಮಾಡಿಕೊಂಡು ಮಣ್ಣು ಸುರಿದು ಮುಚ್ಚಿ, ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರಶ್ನಿಸಲು ಹೋದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಅಧಿಕಾರಿಗಳು ಮುನಿಬೈರಪ್ಪ ಅವರಿಗೆ ನೋಟಿಸ್ ನೀಡಿ, ಸ್ಥಳಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಈವರೆಗೆ ಒತ್ತುವರಿ ತೆರವಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಜೋರಾಗಿ ಮಳೆ ಸುರಿದರೆ ಕಾಲುವೆ ತುಂಬಿ ಮನೆಗಳಿಗೆ ಹರಿದು ತೀವ್ರ ತೊಂದರೆಯಾಗಲಿದೆ ಎಂದು ದೂರುದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘50 ವರ್ಷಗಳ ಹಿಂದಿನ ರಾಜಕಾಲುವೆಯಲ್ಲಿ ಸ್ಥಳೀಯ ಮನೆಗಳ ತ್ಯಾಜ್ಯದ ನೀರು, ಮಳೆ ನೀರು ಹರಿದು ಹೋಗುತ್ತಿತ್ತು. ಆದರೆ, ಮುನಿಬೈರಪ್ಪ ಕುಟುಂಬದವರು ಇತ್ತೀಚೆಗೆ ಕಟ್ಟಡ ಒಡೆದ ತ್ಯಾಜ್ಯ, ಮಣ್ಣು ತಂದು ಚರಂಡಿಗೆ ಸುರಿದು ಮುಚ್ಚಿ ಹಾಕಿ ಒತ್ತುವರಿಗೆ ಮುಂದಾಗಿದ್ದಾರೆ. ಪ್ರಶ್ನಿಸಲು ಹೋದರೆ ಹಲ್ಲೆ ಮಾಡಲು ಬರುತ್ತಾರೆ. ಈ ಬಗ್ಗೆ ಎಸ್ಪಿ ಅವರಿಗೆ ಎರಡು ವಾರಗಳ ಹಿಂದೆಯೇ ದೂರು ನೀಡಿರುವೆ’ ಎಂದು ಸ್ಥಳೀಯ ನಿವಾಸಿ ಎಸ್‌.ಎನ್.ಅಮೃತ್‌ಕುಮಾರ್ ಆರೋಪಿಸಿದರು.

‘ಜಿಲ್ಲಾಧಿಕಾರಿ ಅವರ ಗಮನಕ್ಕೆ ಈ ವಿಚಾರ ತರುತ್ತಿದ್ದಂತೆ ಅವರು ನಗರಸಭೆ ಆಯುಕ್ತರಿಗೆ ಕೂಡಲೇ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಆಯುಕ್ತರು ಆಗ ಮನಿಬೈರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದರು. ನಗರಸಭೆ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ತೆರವುಗೊಳಿಸಿ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ಇದುವರೆಗೂ ಮುಚ್ಚಿದ ಕಾಲುವೆಯಲ್ಲಿನ ತ್ಯಾಜ್ಯ, ಮಣ್ಣು ತೆರವುಗೊಳಿಸುವ ಕೆಲಸ ಮಾಡಿಲ್ಲ’ ಎಂದು ದೂರಿದರು.

‘ಯಾರಾದರೂ ಪ್ರಶ್ನಿಸಿದರೆ ಮುನಿಬೈರಪ್ಪ ಕಾಲುವೆ ನಮ್ಮ ಜಾಗದಲ್ಲಿದೆ ಎಂದು ವಾದಿಸುತ್ತಾರೆ. ದಾಖಲೆ ತಂದು ತೋರಿಸಿ ಎಂದರೆ ತೋರಿಸುವುದಿಲ್ಲ. ಅಧಿಕಾರಿಗಳು ಸಹ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುತ್ತಿಲ್ಲ. ಮಳೆಗಾಲಕ್ಕೂ ಮುನ್ನ ಚರಂಡಿ ತೆರವುಗೊಳಿಸದಿದ್ದರೆ ತೀವ್ರ ತೊಂದರೆಯಾಗಲಿದೆ’ ಎಂದು ಅವರು ಹೇಳಿದರು.

ಮುನಿಬೈರಪ್ಪ ಹೇಳುವುದೇನು?

ತಮ್ಮ ವಿರುದ್ಧದ ಆರೋಪ ಕುರಿತು ಮುನಿಬೈರಪ್ಪ ಅವರನ್ನು ವಿಚಾರಿಸಿದರೆ, ನಾನು ಯಾವ ಸರ್ಕಾರಿ ಸ್ವತ್ತನ್ನು ಅತಿಕ್ರಮಿಸಿಲ್ಲ. ಸರ್ಕಾರಿ ಸರ್ವೇಯರ್ ನಮ್ಮ ಜಾಗ ಎಂದು ಗುರುತಿಸಿದ ಜಾಗದಲ್ಲಿಯೇ ಮಣ್ಣು ಹಾಕಲಾಗಿದೆ. ನಮ್ಮ ವಿರುದ್ಧ ಕೆಲವರು ಸುಳ್ಳು ದೂರು ನೀಡಿದ್ದಾರೆ. ಅಮೃತ್ ಕುಮಾರ್ ಅವರೇ ತಮ್ಮ ನಿವೇಶನದ ಹೊರಗಡೆ ಸರ್ಕಾರಿ ಜಾಗ ಅತಿಕ್ರಮಿಸಿ ಕಾಂಪೌಂಡ್ ಮತ್ತು ಮೆಟ್ಟಿಲು ನಿರ್ಮಿಸಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry