4
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಂಗಾಧರ್ ಹೇಳಿಕೆ

ಒಗ್ಗಟ್ಟಿನ ಪರಿಶ್ರಮದಿಂದ ಕಾಂಗ್ರೆಸ್‌ ಗೆಲುವು

Published:
Updated:

ನರಸಿಂಹರಾಜಪುರ: ಕ್ಷೇತ್ರದಲ್ಲಿ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಗೆಲುವು ಸಾಧ್ಯವಾಯಿತು ಎಂದು ಶೃಂಗೇರಿ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಂಗಾಧರ್ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘15 ವರ್ಷಗಳಲ್ಲಿ 3 ಅವಧಿ

ಯಲ್ಲೂ ಕಾಂಗ್ರೆಸ್ ಕ್ಷೇತ್ರದಿಂದ ಗೆಲುವು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸದಿದ್ದರೂ ಪಕ್ಷ ಸಂಘಟನೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಪಕ್ಷ ಮಾಡಿತ್ತು. ಟಿ.ಡಿ.ರಾಜೇಗೌಡರು ಕಳೆದ ಚುನಾವಣೆಯಲ್ಲಿ ಸೋತರೂ ಸಹ ಪಕ್ಷದನೇತೃತ್ವ ವಹಿಸಿಕೊಂಡು ಜನಸಾಮಾನ್ಯರ ನಡುವೆ ಇದ್ದು ಅವರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಿದರು’ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜವಾಬ್ಧಾರಿ ವಹಿಸಿಕೊಂಡ ಎಲ್ಲ ಸಂಘಟನೆಗಳು ಒಂದೇ ಮನಸ್ಸಿನಿಂದ ಹೋರಾಟ ಮಾಡಿದ್ದರಿಂದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರು ಕಾಂಗ್ರೆಸ್‌ಗೆ ಸೇರಿಕೊಂಡು ಶಕ್ತಿ ತುಂಬುವ ಕೆಲಸ ಮಾಡಿದರು. ಇದು ಸಹ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು. ಎನ್.ಆರ್.ಪುರ ಕಸಬಾ ವ್ಯಾಪ್ತಿಯಲ್ಲಿ 2,616, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ 1,339, ಹಾಗೂ ಖಾಂಡ್ಯ ವ್ಯಾಪ್ತಿಯಲ್ಲಿ 1,155 ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿಗಿಂತ ಪಡೆಯಲು ಸಾಧ್ಯವಾಯಿತು ಎಂದರು.

ಯಾವುದೇ ಒಂದು ಪಕ್ಷದ ಪರವಾಗಿ ಜನಾದೇಶ ಬರದಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟುಗೂಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಪತ್ರ ನೀಡಿದರೂ ತಮ್ಮ ಘನತೆಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದರು ದೂರಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಂಜುಮ್ ಮಾತನಾಡಿ, ‘ಮೂರು ಬಾರಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿಯ ಎದುರು ಗೆಲುವು ಸುಲಭವಾಗಿರಲಿಲ್ಲ. ಎನ್.ಆರ್.ಪುರ ಪಟ್ಟಣದ ಜನರು ಕಾಂಗ್ರೆಸ್ ಮೇಲೆ ಇಟ್ಟ ಭರವಸೆ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ತರುವುದರ ಮೂಲಕ ಗೆಲುವಿಗೆ ಕಾರಣವಾಗಿದೆ’ ಎಂದರು.

ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಲಕ್ಷ್ಮಣ್‌ಶೆಟ್ಟಿ ಮಾತನಾಡಿ, ‘ಪಟ್ಟಣದ ಅಂಬೇಡ್ಕರ್ ನಗರ, ಅಜಾದ್ ಗಲ್ಲಿ, ಹಳೇಹೆಬ್ಬೆರಸ್ತೆ, ಪೌರಕಾರ್ಮಿಕರ ಕಾಲೋನಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದು, ಇದನ್ನು ಈಡೇರಿಸುವ ಹೊಣೆ ನೂತನ ಶಾಸಕರ ಮೇಲೆ ಹಾಗೂ ಮುಖಂಡರ ಮೇಲಿದೆ’ ಎಂದರು.

ಮುಖಂಡರಾದ ಎನ್.ಎಚ್.ಅಹಮ್ಮದ್, ಉಪೇಂದ್ರ, ಸೈಯದ್ ಸಿಗ್ಬತುಲ್ಲಾ, ಪಾಪಚ್ಚ, ಕೆ.ಎಂ.ಸುಂದರೇಶ್, ಅನಿದ್, ಶಂಕರ್, ಅಬೂಬಕರ್, ಸುರಯ್ಯಬಾನು, ಅನಿದ್ ಜುಬೇದ, ಶಿವಕುಮಾರ್ ಇದ್ದರು.

ಶೀಘ್ರದಲ್ಲೇ ಅಭಿನಂದನೆ

ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಟಿ.ಡಿ.ರಾಜೇಗೌಡರು ಶೀಘ್ರದಲ್ಲೇ ಬಂದು ಮತದಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಂಗಾಧರ್ ತಿಳಿಸಿದರು.

ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟುವುಂಟಾಗಿದ್ದರಿಂದ ಬೆಂಗಳೂರಿನಲ್ಲಿ ಉಳಿಯುವ ಸ್ಥಿತಿ ಇದೆ. ಶೀಘ್ರದಲ್ಲೇ ಕ್ಷೇತ್ರಕ್ಕೆ ಬಂದು ಎಲ್ಲ ಭಾಗಗಳಿಗೂ ಭೇಟಿ ನೀಡಿ ಮತದಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry