ಗುರುವಾರ , ಫೆಬ್ರವರಿ 25, 2021
29 °C
ಎಲ್ಲ ಹೋಬಳಿಗಳಲ್ಲಿ ಉತ್ತಮ ಮಳೆ– ಬಿತ್ತನೆ ಕಾರ್ಯಕ್ಕೆ ಸಿದ್ಧತೆ

ಕೃತ್ತಿಕ ಮಳೆ: ರೈತರಲ್ಲಿ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃತ್ತಿಕ ಮಳೆ: ರೈತರಲ್ಲಿ ಹರ್ಷ

ಕಡೂರು: ಮೂರು ವರ್ಷಗಳ ಬರಗಾಲದಿಂದ ತತ್ತರಿಸಿದ್ದ ಕಡೂರು ಪ್ರದೇಶಕ್ಕೆ ಕೊಂಚ ನಿರಾಳ ಭಾವನೆ ಮೂಡಿದೆ. 15 ದಿನಗಳಲ್ಲಿ ಮೂರು ಭಾರಿ ಉತ್ತಮ ಮಳೆಯಾಗಿರುವುದು, ಕಳೆದ ಶುಕ್ರವಾರ ತಾಲ್ಲೂಕಿನಾದ್ಯಂತ ಬಿರುಸಾಗಿ ಸುರಿದ ಕೃತ್ತಿಕೆ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ. ಈ ಬಾರಿ ಕೆರೆ ಕಟ್ಟೆಗಳು ತುಂಬಿ ನೆಮ್ಮದಿ ಸಿಗಬಹು ದೆಂಬ ಆಶಾಭಾವನೆ ಮೂಡಿದೆ.

ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಜೋಡಿಹೋಚಿಹಳ್ಳಿ (28ಮಿ. ಮೀ), ಉಡುಗೆರೆ (4ಮಿ.ಮೀ), ನಾಗೇನಹಳ್ಳಿ (16 ಮಿ.ಮೀ), ತಂಗಲಿ (46 ಮಿ.ಮೀ), ಕೆರೆಸಂತೆ (29 ಮಿ.ಮೀ), ಕಾಮನಕೆರೆ (10.ಮೀ.ಮೀ), ಚಿಕ್ಕದೇವನೂರು (22ಮಿ.ಮೀ), ಜಿಗಣೇಹಳ್ಳಿಯಲ್ಲಿ (34ಮಿ.ಮೀ) ಮಳೆಯಾಗಿದೆ. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ನಾಟಿಗೆ ಭೂಮಿ ಸಿದ್ದತೆ ಮುಗಿಸಿ ಮಳೆಯಾಗುವುದನ್ನೇ ಕಾಯುತ್ತಿದ್ದ ರೈತರು, ಇದೀಗ ಮಳೆ ಬಂದಿರುವುದರಿಂದ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.

ಸಾಮಾನ್ಯವಾಗಿ ಭರಣಿ ಮಳೆಗೆ ಈ ಭಾಗದಲ್ಲಿ ವಾಣಿಜ್ಯ ಬೆಳೆಯಾದ ಹತ್ತಿ ಬೀಜವನ್ನು ನಾಟಿ ಮಾಡುತ್ತಾರೆ. ಈ ಬಾರಿ ಕೃಷಿ ಇಲಾಖೆ ಹತ್ತಿ ಬೆಳೆ ವಿಸ್ತೀರ್ಣ 550 ಹೆಕ್ಟೇರ್ ಹೊಂದಿತ್ತು. ಪ್ರಸ್ತುತ ಕೇವಲ 35 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನು ಮತ್ತೊಂದು ವಾಣಿಜ್ಯ ಬೆಳೆಯಾದ ಈರುಳ್ಳಿ ಬೆಳೆಯನ್ನು ಸುಮಾರು 2500 ಹೆಕ್ಟೇರ್ ನಲ್ಲಿ ಬೆಳೆಯುವ ಗುರಿಯಿದೆ. ಮುಂದಿನ ಹತ್ತು– ಹದಿನೈದು ದಿನಗಳಲ್ಲಿ ಈರುಳ್ಳಿ ಬಿತ್ತನೆ ಆರಂಭವಾಗಲಿದೆ.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಭತ್ತ (350 ಹೆಕ್ಟೇರ್), ರಾಗಿ (31,500 ಹೆಕ್ಟೇರ್), ಹೈಬ್ರೀಡ್ ಜೋಳ (300 ಹೆ.), ಮುಸುಕಿನಜೋಳ (12,000 ಹೆ.), ತೃಣಧಾನ್ಯಗಳು (2500 ಹೆ.), ದ್ವಿದಳ ಧಾನ್ಯಗಳನ್ನು 9,750 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದೆ.

ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು ಮತ್ತು ಸಾಸಿವೆ ಸೇರಿದಂತೆ 11,650 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆ ಬೆಳೆಯುವ ಗುರಿ ಹೊಂದಲಾಗಿದ್ದು, 795 ಹೆಕ್ಟೇರ್ ಗುರಿ ಸಾಧನೆಯಾಗಿದೆ. ಉದ್ದು (125 ಹೆಕ್ಟೇರ್), ತೊಗರಿ (75 ಹೆ.), ಅಲಸಂದೆ ( 100 ಹೆ.), ಹೆಸರು (675 ಹೆ,) ಎಳ್ಳು (310 ಹೆ.) ಹಾಗೂ ನೆಲಗಡಲೆಯನ್ನು 440 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಮಳೆ ಬಂದಿರುವುದು ಅನುಕೂಲಕರವಾಗಿದೆ.

ಒಟ್ಟಾರೆಯಾಗಿ 68,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದ್ದು, 1870 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನಷ್ಟೇ ಬಿತ್ತನೆ ಕಾರ್ಯಗಳು ಚುರುಕುಗೊಳ್ಳಲಿವೆ ಎನ್ನುತ್ತಾರೆ ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಟಿ.ಸಿ.ಚಂದ್ರು.

ಒಟ್ಟಾರೆಯಾಗಿ ಕಡೂರಿನಾದ್ಯಂತ ಬಂದಿರುವ ಮಳೆ ರೈತಾಪಿ ವರ್ಗದಲ್ಲಿ ಹೊಸ ಹುರುಪು ಮೂಡಿಸಿದೆ. ಈ ಬಾರಿ ಮುಂಗಾರು ಮಳೆ ಕೈ ಹಿಡಿಯಲಿದೆ ಎಂಬ ನಂಬಿಕೆ ಮೂಡಿಸಿದೆ.

ರೈತರು ಉತ್ಸುಕ

ಬರದಿಂದ ಹಾಳಾಗಿ ಹೋಗಿರುವ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಮತ್ತೆ ಗಿಡಗಳನ್ನು ನಾಟಿ ಮಾಡಲು ರೈತರು ಉತ್ಸುಕರಾಗಿದ್ದಾರೆ. ತೋಟಗಾರಿಕಾ ಇಲಾಖೆಯಿಂದ ಸಹಾಯಧನದಡಿ ತೆಂಗು ಮತ್ತು ಅಡಿಕೆ ಗಿಡಗಳನ್ನು ರಿಯಾಯಿತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ನೀಡುವ ಅವಕಾಶವಿದ್ದು, ಈ ಕುರಿತು ಇನ್ನಷ್ಟೇ ಅಧಿಸೂಚನೆ ಬರಬೇಕಿದೆ.

ತಾಲ್ಲೂಕಿನ ತೋಟಗಾರಿಕಾ ನರ್ಸರಿಗಳಲ್ಲಿ 17,600 ತೆಂಗಿನ ಸಸಿಗಳಿದ್ದು, ಸರ್ಕಾರಿ ಯೋಜನೆ ಹೊರತುಪಡಿಸಿ 1 ಗಿಡಕ್ಕೆ ₹ 50ರಂತೆ ರೈತರು ಖರೀದಿಸಬಹುದು ಎನ್ನುತ್ತಾರೆ ಹಿರಿಯ ತೋಟಗಾರಿಕಾ ನಿರ್ದೇಶಕ ಸಿ. ಮಂಜುನಾಥ್.

**

ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಬೀಜಗಳು ಲಭ್ಯವಿದ್ದು, ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು

– ಟಿ.ಸಿ.ಚಂದ್ರು, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ 

ಬಾಲುಮಚ್ಚೇರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.