ಕೆಲಸ ಮಾಡಲು ಆಗದವರು ಗಂಟುಮೂಟೆ ಕಟ್ಟಿ

7
ಹೊಳಲ್ಕೆರೆ: ಅಧಿಕಾರಿಗಳ ಸಭೆಯಲ್ಲಿ ಎಂ.ಚಂದ್ರಪ್ಪ ತಾಕೀತು

ಕೆಲಸ ಮಾಡಲು ಆಗದವರು ಗಂಟುಮೂಟೆ ಕಟ್ಟಿ

Published:
Updated:

ಹೊಳಲ್ಕೆರೆ: ‘ಕೆಲಸ ಮಾಡುವವರು ಮಾತ್ರ ಇಲ್ಲಿರಿ. ಕೆಲಸ ಮಾಡಲು ಆಗದವರು ಗಂಟುಮೂಟೆ ಕಟ್ಟಿ ಬೇರೆಡೆಗೆ ಹೊರಡಬಹುದು’ ಎಂದು ಚುನಾಯಿತ ಪ್ರತಿನಿಧಿ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದಿನ ಐದು ವರ್ಷ ಏನು ಮಾಡಿದ್ದೀರಿ ಎಂದು ಕೇಳುವುದಿಲ್ಲ. ಮುಂದೆ ಹೇಗೆ ಕೆಲಸ ಮಾಡಬೇಕು ಎಂಬುದನ್ನಷ್ಟೇ ನಾನು ಬಯಸುತ್ತೇನೆ. ಜನರ ತೆರಿಗೆ ಹಣದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನು ಮರೆಯಬೇಡಿ. ನಮ್ಮದು ಐದು ವರ್ಷಗಳ ಅಧಿಕಾರವಾದರೆ, ನಿಮಗೆ 60 ವರ್ಷ ಅಧಿಕಾರ ಇರುತ್ತದೆ. ಏನೋ ಜನಪ್ರತಿನಿಧಿಗಳು ಹೇಳುತ್ತಾರೆ ಎಂಬ ಉಡಾಫೆ ಬೇಡ. 30 ದಿನ ಕೆಲಸ ಮಾಡಿದರೆ ವೇತನ ಬರುತ್ತದೆ ಎಂಬ ಉದಾಸೀನತೆ ಬಿಟ್ಟುಬಿಡಿ. ಜವಾಬ್ದಾರಿ ಅರಿತು ಕೆಲಸ ಮಾಡಿ’ ಎಂದು ಹೇಳಿದರು.

‘ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರದೋ ಮುಲಾಜಿಗೆ ಒಳಗಾಗಿ ಕೆಲಸ ಮಾಡಬಾರದು’ ಎಂದರು.

‘ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕಳಪೆ ಯಂತ್ರ ಅಳವಡಿಸಲಾಗಿದೆ. ತಾಳಕಟ್ಟದಲ್ಲಿ ನೀರಿನ ಘಟಕ ಕೆಟ್ಟು 6 ತಿಂಗಳಾದರೂ ದುರಸ್ತಿ ಮಾಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ನಿರ್ಮಿತಿ ಕೇಂದ್ರದ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ‘ತಾಲ್ಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಕಳಪೆಯಾಗಿದೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಖಾಸಗಿ ಅಂಗಡಿಗೆ ಚೀಟಿ ಬರೆದು ಕೊಡುತ್ತಾರೆ’ ಎಂದು ಮಹೇಶ್ ಆರೋಪಿಸಿದರು.

‘ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಾಲಸ್ವಾಮಿ ದೇಶಪ್ಪ ಅವರಿಗೆ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ತಹಶೀಲ್ದಾರ್ ಭಾಗ್ಯಮ್ಮ ಇದ್ದರು.

ಪರ್ಸೆಂಟೇಜ್ ಕೇಳಲ್ಲ !

ನಾನು ನಿಮ್ಮಿಂದ ‘ಪರ್ಸೆಂಟೇಜ್ ಕೇಳುವುದಿಲ್ಲ. ಕೆಲಸದಲ್ಲಿ ನಿಮ್ಮ ಪರ್ಫಾರ್ಮೆನ್ಸ್ ಕೇಳುತ್ತೇನೆ’ ಎಂದು ಎಂ.ಚಂದ್ರಪ್ಪ ಹೇಳಿದರು.

‘ಐದು ವರ್ಷಗಳಿಂದ ತಾಲ್ಲೂಕು ಯಜಮಾನನಿಲ್ಲದ ಮನೆಯಂತಾಗಿತ್ತು. ಅಧಿಕಾರಿಗಳನ್ನು ಕೇಳುವವರೇ ಇರಲಿಲ್ಲ. ಅವರು ಆಡಿದ್ದೇ ಆಟ ಎಂಬ ಪರಿಸ್ಥಿತಿ ಇತ್ತು. ಆದರೆ ಇನ್ನು ಮುಂದೆ ಅದೆಲ್ಲ ನಡೆಯುವುದಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಎಡವಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಜನರೇ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ’ ಎಂದರು.

‘ಎಲ್ಲದಕ್ಕೂ ಮಿನಿಸ್ಟ್ರು ಹೇಳ್ಬೇಕು ಅಂತಿದ್ರು !’

ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದರೂ, ಎರಡು ವರ್ಷದಿಂದ ಒಂದು ಕೆಲಸ ಮಾಡಿಸಿಕೊಳ್ಳಲು ಆಗಲಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಹೇಳಿದರು.

‘ನಾನು 40 ಸಾವಿರ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಯಾದರೂ, ನಮ್ಮ ಕ್ಷೇತ್ರದ ಬಡವರಿಗೆ 2 ಮನೆ ಕೊಡಿಸಲು ಆಗಲಿಲ್ಲ. ಯಾವುದೇ ಇಲಾಖೆಯಲ್ಲಿ ನನ್ನ ಮಾತಿಗೆ ಕಿವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಏನು ಕೇಳಿದರೂ ‘ಮಿನಿಸ್ಸ್ರುಹೇಳ್ಬೇಕು’ ಅಂತಿದ್ರು. ಒಬ್ಬ ಪಿಡಿಒ ಕೂಡ ನಮ್ಮ ಮಾತು ಕೇಳುತ್ತಿರಲಿಲ್ಲ. ಅಧಿಕಾರ ಶಾಶ್ವತ ಅಲ್ಲ. ಇನ್ನು ಮುಂದೆ ನಿಮ್ಮ ಯಾವ ಆಟಗಳೂ ನಡೆಯುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry