ಸೋಮವಾರ, ಮಾರ್ಚ್ 1, 2021
20 °C
ಚಿತ್ರದುರ್ಗ: ಕ್ರೀಡಾಪಟುಗಳ, ತರಬೇತುದಾರರ ಬಹು ವರ್ಷಗಳ ಬೇಡಿಕೆ ಮರೀಚಿಕೆ

ನನಸಾಗುವುದೇ ಪ್ರತ್ಯೇಕ ಕ್ರಿಕೆಟ್ ಕ್ರೀಡಾಂಗಣದ ಕನಸು?

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ನನಸಾಗುವುದೇ ಪ್ರತ್ಯೇಕ ಕ್ರಿಕೆಟ್ ಕ್ರೀಡಾಂಗಣದ ಕನಸು?

ಚಿತ್ರದುರ್ಗ: ಕೋಟೆನಾಡಲ್ಲಿ ಪ್ರತ್ಯೇಕ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ದಶಕಗಳಿಂದ ಒತ್ತಾಯ ಕೇಳಿ ಬರುತ್ತಿದ್ದು, ಮೂರು ಬಾರಿ ಚಿತ್ರದುರ್ಗ ಕ್ರಿಕೆಟ್ ಕ್ಲಬ್‌ನವರು, ಅಭಿಮಾನಿಗಳು ನಡೆಸಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಈ ಕನಸು ಈಗಲಾದರೂ ನನಸಾಗುವುದೇ ಎಂಬುದು ಕ್ರೀಡಾಭಿಮಾನಿಗಳ ನಿರೀಕ್ಷೆ.

ಇಲ್ಲಿ ನಿತ್ಯವೂ ಸುಮಾರು 40 ರಿಂದ 50 ಮಂದಿ ಕ್ರೀಡಾಪಟುಗಳು ಅಭ್ಯಾಸದಲ್ಲಿ ತೊಡಗುತ್ತಾರೆ. ಚಿಕ್ಕ ಮಕ್ಕಳಿಂದ ಸರ್ಕಾರಿ ಅಧಿಕಾರಿಗಳವರೆಗೂ ಕ್ರಿಕೆಟ್ ಆಟವಾಡುವವರು ಇದ್ದಾರೆ. ಇಲ್ಲಿ ಕ್ರಿಕೆಟ್ ಆಸಕ್ತರ ಸಂಖ್ಯೆ ಕಡಿಮೆ ಇಲ್ಲ. ಆದರೆ, ಸುಸಜ್ಜಿತವಾದ ಕ್ರೀಡಾಂಗಣ ಇಲ್ಲ ಎಂಬ ಕೊರತೆ ಕ್ರಿಕೆಟಿಗರನ್ನು ಕಾಡುತ್ತಿದೆ.

ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗದಿಂದ ಗೂಳಿಹಟ್ಟಿ ಡಿ.ಶೇಖರ್ ಗೆಲುವು ಸಾಧಿಸಿರುವುದು ಕೂಡ ಎಲ್ಲೋ ಒಂದು ಕಡೆ ಕ್ರಿಕೆಟ್ ಕ್ರೀಡಾಪಟುಗಳಲ್ಲಿ, ತರಬೇತುದಾರರಲ್ಲಿ ಕ್ರೀಡಾಂಗಣದ ಕನಸು ಚಿಗುರೊಡೆಯಲು ಪ್ರಾರಂಭಿಸಿದೆ.

‘ದಶಕದ ಹಿಂದೆ ಇಲ್ಲಿನ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣವನ್ನು ಕ್ರಿಕೆಟ್ ತರಬೇತುದಾರರು, ಕ್ರೀಡಾಪಟುಗಳು ಬಳಸಿಕೊಳ್ಳುತ್ತಿದ್ದರು. ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದ ನಂತರ ಅಲ್ಲಿ ಕ್ರಿಕೆಟ್ ಅಭ್ಯಾಸ ಸ್ಥಗಿತಗೊಂಡಿತು’ ಎನ್ನುತ್ತಾರೆ ಪ್ರಸ್ತುತ ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಅಧ್ಯಕ್ಷ ಎಲ್.ರಮೇಶ್‍ ರಾವ್.

ದರ ನಿಗದಿ ಪಡಿಸದೆ ತರಬೇತಿ: ‘ಜಿಲ್ಲೆಯಲ್ಲಿ ಹತ್ತು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಪರ್ಯಾಯವಾಗಿ ಮುರುಘಾ ರಾಜೇಂದ್ರ ಕ್ರೀಡಾಂಗಣವನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಅಂದಿನಿಂದ ಈವರೆಗೂ ಅದನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಕ್ರೀಡಾಸಕ್ತಿ ಕಡಿಮೆ ಆಗುತ್ತಿದ್ದು, ಜಿಲ್ಲೆಯಲ್ಲಿ ಕ್ರೀಡಾಭಿಮಾನ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಕ್ರೀಡಾಪಟುಗಳಿಗೆ ದರ ನಿಗದಿ ಪಡಿಸದೆ ತರಬೇತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಎಲ್.ರಮೇಶ್‍ ರಾವ್.

ಎರಡು ಭರವಸೆ ಈಡೇರಲಿಲ್ಲ: ‘ಬಿಸ್ವಾಸ್ ಅವರ ಕಾಲದಲ್ಲಿ ಗುಡ್ಡದರಂಗವ್ವನಹಳ್ಳಿ ಸಮೀಪ, ಶ್ರೀರಂಗಯ್ಯ ಅವಧಿಯಲ್ಲಿ ರಾಷ್ಟ್ರನಾಯಕ ನಿಜಲಿಂಗಪ್ಪ ಸ್ಮಾರಕದ ಹಿಂಭಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ಸಿಕ್ಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅಂದಿನಿಂದ ಈವರೆಗಿನ ಶಾಸಕರು, ಸಂಸದರು, ಸಚಿವರ ಗಮನಕ್ಕೆ ತಂದರೂ ಬೇಡಿಕೆ ಈಡೇರಿಲ್ಲ’ ಎಂದು ಅವರು ದೂರುತ್ತಾರೆ.

ನಿರಂತರ ತರಬೇತಿ, ಪಂದ್ಯಾವಳಿ, ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲ್ಲಿನ ಮುರುಘಾ ರಾಜೇಂದ್ರ ಕ್ರೀಡಾಂಗಣ ಅನಿವಾರ್ಯವಾಗಿದೆ. ಆದರೆ, ಆಗಿಂದಾಗ್ಗೆ ಸಮಾವೇಶ, ಗಣ್ಯರ ಮಕ್ಕಳ ಮದುವೆ, ಹೆಲಿಪ್ಯಾಡ್ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೂ ಬಳಸಿಕೊಳ್ಳುತ್ತಿರುವ ಕಾರಣ ಪ್ರತ್ಯೇಕ ಕ್ರೀಡಾಂಗಣ ಇದ್ದರೆ ಉತ್ತಮ ಎಂಬುದು ಕ್ರೀಡಾಪಟುಗಳ ಅಭಿಪ್ರಾಯ.

‘ಇದೇ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆದಾಗ ವೇದಿಕೆ ನಿರ್ಮಾಣ, ವಾಹನಗಳ ನಿಲುಗಡೆ ಸಂಬಂಧ ಮೈದಾನ ಹಾಳು ಮಾಡುತ್ತಾರೆ. ಬಳಿಕ ಅದನ್ನು ಸರಿಪಡಿಸುವುದಿಲ್ಲ. ನಾವೇ  ಮೈದಾನ ಸಮತಟ್ಟು ಮಾಡುತ್ತಿದ್ದೇವೆ’ ಎನ್ನುತ್ತಾರೆ ಕ್ಲಬ್ ಕಾರ್ಯದರ್ಶಿ ಎನ್.ಅಶೋಕ್.

‘ಬಳ್ಳಾರಿ, ತುಮಕೂರು, ಚಿತ್ರದುರ್ಗ, ದಾವಣಗೆರೆ ಈ ನಾಲ್ಕು ಜಿಲ್ಲೆಯ ಕ್ರಿಕೆಟ್‍ ವಲಯಕ್ಕೆ ಪ್ರತಿ ವರ್ಷ ಚಿತ್ರದುರ್ಗದಿಂದ 19, 16 ಹಾಗೂ 14 ವರ್ಷದೊಳಗಿನ ತಲಾ ಐದು ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಕಳಿಸುತ್ತೇವೆ. ರಾಜ್ಯಮಟ್ಟಕ್ಕೂ ಎರಡು ವರ್ಷದ ಹಿಂದೆ ಕೆಲವರು ಚಿತ್ರದುರ್ಗದಿಂದ ಆಯ್ಕೆಯಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕ್ರೀಡಾಪಟುಗಳು ಆಯ್ಕೆಯಾಗಲು ಪ್ರತ್ಯೇಕ ಕ್ರೀಡಾಂಗಣ ಬೇಡವೇ’ ಎಂಬುದು ಅವರ ಪ್ರಶ್ನೆ.

ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಿಸಲು ಸೂಕ್ತ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮತ್ತೊಮ್ಮೆ  ಮನವಿ ಸಲ್ಲಿಸುತ್ತೇವೆ ಎಂದು ಹೇಳುತ್ತಾರೆ ಅವರು.

ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು, ಹಾಸನ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳು ಈಗಾಗಲೇ ಅಭಿವೃದ್ಧಿಯಾಗಿವೆ. ಜಿಲ್ಲೆಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಬೇಕು ಎಂಬುದು ಕ್ರೀಡಾಭಿಮಾನಿಗಳ ಒತ್ತಾಯ.

ಗೂಳಿಹಟ್ಟಿ ಶೇಖರ್‌ಗೆ ಮನವಿ

2008 ರಲ್ಲಿ ಕ್ರೀಡಾ ಸಚಿವರಾಗಿದ್ದಾಗ ಗೂಳಿಹಟ್ಟಿ ಡಿ.ಶೇಖರ್ ರಾಜ್ಯದ ವಿವಿಧೆಡೆ ಕ್ರೀಡಾಪಟುಗಳ ಅನುಕೂಲಕ್ಕಾಗಿ ನಿರ್ಮಿಸಿದ ಸಿಂಥೆಟಿಕ್ ಟ್ರ್ಯಾಕ್, ಈಜು ಕೊಳ, ಒಳಾಂಗಣ ಕ್ರೀಡಾಂಗಣ ಹೀಗೆ ವಿವಿಧ ರೀತಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಇಂದಿಗೂ ಜಿಲ್ಲೆಯ ಜನತೆ ಮರೆತಿಲ್ಲ. ಈ ಕಾರಣ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲು ನಮಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ ಎನ್ನುತ್ತಾರೆ ಎನ್.ಅಶೋಕ್.

ಕ್ರೀಡಾಂಗಣದ ಭರವಸೆ

‘ಮುರುಘಾ ರಾಜೇಂದ್ರ ಕ್ರೀಡಾಂಗಣ ನಮ್ಮ ಸ್ವಂತ ಜಾಗವೇನಲ್ಲ. ಹೆಲಿಪ್ಯಾಡ್‍ಗೆ ಸೂಕ್ತ ಸ್ಥಳ ಯಾವುದು ಎಂಬುದನ್ನು ಅಧಿಕಾರಿಗಳೇ ನಿರ್ಧರಿಸುವ ಕಾರಣ ಅದನ್ನು ಪ್ರಶ್ನಿಸುವ ಹಕ್ಕು ನಮಗೆ ಇಲ್ಲ. ಆದರೆ, ಸ್ವಂತ ಕ್ರೀಡಾಂಗಣ ನಿರ್ಮಿಸಲು ಜಾಗದ ಅವಶ್ಯಕತೆ ಇದ್ದು, ಸರ್ಕಾರದಿಂದ ಈ ಸೌಲಭ್ಯ ಒದಗಿಸಿ ಎಂದು ಜಿಲ್ಲಾಡಳಿತಕ್ಕೂ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಸ್ಥಳ ನೀಡಿದರೆ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಉತ್ತಮ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದೆ’ ಎಂದು ಎಲ್.ರಮೇಶ್‍ ರಾವ್ ತಿಳಿಸಿದರು.

**

ಚಿತ್ರದುರ್ಗ ರಾಜ್ಯದ ಮಧ್ಯಭಾಗದಲ್ಲಿದ್ದು, ಎಲ್ಲಿಗೆ ಹೋಗಬೇಕಾದರೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳು ಅಗತ್ಯ. ಕ್ರೀಡಾಂಗಣವಾದರೆ ಎಲ್ಲರಿಗೂ ಅನುಕೂಲ

- ಎನ್.ಅಶೋಕ್, ಕ್ರಿಕೆಟ್ ಕ್ಲಬ್‍ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.