ತರಕಾರಿ ಬೆಲೆ ಗಗನಮುಖಿ

7
ಆರಂಭದಲ್ಲಿ ನೀರಿನ ಕೊರತೆ; ಇತ್ತೀಚೆಗೆ ಮಳೆ ಹಾನಿಗೆ ಈಡಾಗುತ್ತಿರುವ ಬೆಳೆ

ತರಕಾರಿ ಬೆಲೆ ಗಗನಮುಖಿ

Published:
Updated:
ತರಕಾರಿ ಬೆಲೆ ಗಗನಮುಖಿ

ಹಾವೇರಿ: ತರಕಾರಿ ದರ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಬೆಲೆ ಏರಿಕೆ ಪರಿಣಾಮ ಜನ ಪರಿತಪಿಸುವಂತಾಗಿದೆ. ಕಳೆದೆರಡು ವಾರದಲ್ಲಿ ತರಕಾರಿ ಬೆಲೆ ಶೇ 10ರಿಂದ 20ರಷ್ಟು ಹೆಚ್ಚಳವಾಗಿದೆ. ಕೆಲ ತಿಂಗಳ ಹಿಂದೆ ಕೆ.ಜಿ.ಗೆ ₹ 2ರಿಂದ ₹ 5 ಇದ್ದ ಟೊಮೆಟೊ ಬೆಲೆ ₹ 30ರಿಂದ ₹ 40ಕ್ಕೆ ಏರಿದೆ.

ಟೊಮೆಟೊ, ಮೆಣಸಿನಕಾಯಿ, ಸೌತೆಕಾಯಿ, ಹೂಕೋಸು, ಕ್ಯಾರೆಟ್, ಹೀರೆಕಾಯಿ, ಹಾಗಲಕಾಯಿ ಸೇರಿ ಬಹುತೇಕ ತರಕಾರಿ ಬೆಲೆಗಳು ಏರಿವೆ. ಕೆ.ಜಿ.ಗೆ ₹ 30ರಿಂದ ₹ 40ಕ್ಕೆ ಸಿಗುತ್ತಿದ್ದ ತರಕಾರಿಗಳ ಬೆಲೆಯು ಈಗ ₹ 50ರಿಂದ ₹ 60ಕ್ಕೆ

ಏರಿದೆ. ಬೀನ್ಸ್, ಬೆಂಡೆಕಾಯಿ, ಕ್ಯಾರೆಟ್ಗಳನ್ನು ಕಾಲು ಕೆ.ಜಿ.ಗೆ ₹ 12ರಿಂದ ₹ 15ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಕಾಡಿದ ಟೊಮೆಟೊ: ಟೊಮೆಟೊ ಬೆಲೆಯನ್ನು ಅಂದಾಜಿಸುವುದೇ ಅಸಾಧ್ಯ ಎನ್ನುವ ಮಾತುಗಳು ರೈತರು ಹಾಗೂ ವ್ಯಾಪಾರಿಗಳ ಮಧ್ಯೆಯೇ ಕೇಳಿಬರುತ್ತಿದೆ. ಟೊಮೆಟೊದ ಮಾರುಕಟ್ಟೆ ಬೆಲೆಯೇ ಜೂಜಾಟದಂತೆ. ಫೆಬ್ರುವರಿ ಆರಂಭದಲ್ಲಿ ಕೆ.ಜಿ.ಗೆ ₹ 2ರಿಂದ ₹ 3 ಇತ್ತು. ಸರಿಯಾದ ಬೆಲೆ ಸಿಗದ ಪರಿಣಾಮ ರೈತರು ಟೊಮೆಟೊವನ್ನು ರಸ್ತೆಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಮಾರ್ಚ್‌ನಲ್ಲಿ ಸ್ವಲ್ಪ ಬೆಲೆ ಏರಿಕೆ ಆಗಿತ್ತು. ಕೆ.ಜಿಗೆ ₹ 5 ರಿಂದ ₹ 10ರವರೆಗೆ ತಲುಪಿತ್ತು. ಮೇ ಮೊದಲ ವಾರದಲ್ಲಿ ಮತ್ತಷ್ಟು ಬೆಲೆ ಏರಿಕೆ ಕಂಡಿದೆ. ಆದರೆ, ಈಗ ಮತ್ತಷ್ಟು ಬೆಲೆ ಏರಿದೆ.

‘ನೀರಿನ ಕೊರತೆಯ ಕಾರಣ ಹೆಚ್ಚಿನ ರೈತರು ಏಪ್ರಿಲ್‌ನಲ್ಲಿ ಟೊಮೆಟೊ ನಾಟಿ ಮಾಡಿರಲಿಲ್ಲ. ಇದರಿಂದಾಗಿ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಸದ್ಯ ಬೆಲೆ ಇಳಿಯುವ ಲಕ್ಷಣ ಕಾಣುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಶರೀಫ್ ಕನವಳ್ಳಿ.

‘ಜಿಲ್ಲೆಯಲ್ಲಿ ವರ್ಷದ ಆರಂಭದಲ್ಲಿ ನೀರಿನ ಕೊರತೆ ಕಾರಣ ಹೆಚ್ಚಿನ ರೈತರು ಅಷ್ಟಾಗಿ ತರಕಾರಿ ಬೆಳೆಯಲಿಲ್ಲ. ಕೆಲವರು ಅಲ್ಲಲ್ಲಿ ಅಲ್ಪಸ್ವಲ್ಪ ಬೆಳೆದಿದ್ದರು. ಇದು ಈಚೆಗೆ ಸುರಿದ ಮುಂಗಾರು ಪೂರ್ವ ಮಳೆ, ಆಲಿಕಲ್ಲು ಬಿದ್ದು ಹಾನಿಯಾಗಿದೆ. ಹೀಗಾಗಿ ಜಿಲ್ಲೆಯಿಂದ ಮಾರುಕಟ್ಟೆಗೆ ಟೊಮೆಟೊ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಸದ್ಯ ತುಮಕೂರು, ಪುಣೆ ಮತ್ತಿತರ ಕಡೆಗಳಿಂದ ಟೊಮೆಟೊ ಬರುತ್ತಿದೆ’ ಎಂದು ವ್ಯಾಪಾರಸ್ಥರು ತಿಳಿಸಿದರು.

‘ಟೊಮೆಟೊಗೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಉತ್ತಮ ಬೆಲೆ ದೊರೆಯುತ್ತದೆ. ಇದ್ದಕ್ಕಿದ್ದಂತೆ ಬೆಲೆ ಕುಸಿಯುತ್ತದೆ. ರೈತರಿಗೆ ಮಾಡಿದ ಖರ್ಚೂ ಕೈಗೆ ಬರುವುದಿಲ್ಲ. ಆದರೆ, ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ರೈತ ಶಂಕ್ರಪ್ಪ.

**

ತರಕಾರಿ ಬೆಲೆ ಏರಿಕೆಯಾದರೆ, ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಾರೆ. ನಷ್ಟವಾದರೆ, ರೈತರ ಮೇಲೆ ಹೊರೆ ಹಾಕಲಾಗುತ್ತದೆ

– ಸಿದ್ಧಪ್ಪ ಮಾಳಣ್ಣನವರ, ಕೃಷಿಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry