ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟೆಬೆನ್ನೂರಲ್ಲಿ ನೀರಿಗೆ ಬರ

Last Updated 19 ಮೇ 2018, 11:44 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಮೋಟೆಬೆನ್ನೂರ. ಗ್ರಾಮಕ್ಕೆ ತುಂಗಭದ್ರಾ ನದಿಯಿಂದ 5 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ. ಹೀಗಾಗಿ, ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದ ಗ್ರಾಮ ಪಂಚಾಯ್ತಿ ವಿರುದ್ಧ ಗ್ರಾಮ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮದಲ್ಲಿ 3 ಶುದ್ಧ ನೀರಿನ ಘಟಕಗಳಿದ್ದರೂ ಅವುಗಳ ಪೈಕಿ ಕೋಟೆ ಬೈಲ್ ಹಾಗೂ ಹರಿಜನ ಕೇರಿ ಬಳಿ ಇರುವ ಘಟಕಗಳು ಕೊಳವೆ ಬಾವಿಯಲ್ಲಿ ನೀರಿಲ್ಲದೆ ಸ್ಥಗಿತಗೊಂಡಿವೆ. ಒಟ್ಟು 16 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ ಬಹುತೇಕ ಫ್ಲೋರೈಡ್‌ಯುಕ್ತ ಗಡಸು ನೀರಿದೆ. ಚರ್ಚ್ ಬಳಿ ಇರುವ ಒಂದು ಶುದ್ಧ ನೀರಿನ ಘಟಕ ಮಾತ್ರ ಸುಸ್ಥಿತಿಯಲ್ಲಿದೆ.

‘ಗ್ರಾಮಕ್ಕೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಯೋಜನೆ ರೂಪಿಸುವುದು ಅಗತ್ಯವಾಗಿದೆ’ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಾಲತೇಶ ಕುರಿಯವರ ಆಗ್ರಹಿಸಿದರು. ‘ಬ್ಯಾಡಗಿ ರಸ್ತೆಗೆ ಹೊಂದಿಕೊಂಡಿರುವ ಮೈಲಾರ ಮಹದೇವ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಜನರು ಸಾರ್ವಜನಿಕ ನಳದಲ್ಲಿ ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ’ ಎಂದು ನಾಗಪ್ಪ ಹೊಂಬರಡಿ ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ಬಾರಿ ಬೆಳಿಗ್ಗೆ ನೀರು ಬಿಟ್ಟರೆ ಮತ್ತೊಂದು ದಿನ ಸಂಜೆ ಅಥವಾ ಮಧ್ಯಾಹ್ನ ಬಿಡಲಾಗುತ್ತಿದೆ. ಇದರಿಂದ ಬೇರೆ ಕೆಲಸ ಬಿಟ್ಟು ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿದೆ’ ಎಂದು ಪರಮೇಶಪ್ಪ ಮೈಲಾರ ಹೇಳಿದರು.

‘ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕುರಿತು ಮುಂದಿನ ಸಭೆಯಲ್ಲಿ ನಿರ್ಣಯ ಮಂಡಿಸುವ ಉದ್ದೇಶವಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ ತಳವಾರ, ಸಾವಕ್ಕ ಕೂರಗುಂದ, ನಿಂಬಮ್ಮ ಬೂದಗಟ್ಟಿ ಹಾಗೂ ನೀಲಮ್ಮ ಬ್ಯಾಟಪ್ಪನವರ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ವಿ.ಆರ್.ಕುಲಕರ್ಣಿ, ‘ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಒಂದು ವಾರದಲ್ಲಿ ಕೊಳವೆ ಬಾವಿಯೊಡನೆ ಜೋಡಣೆ ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನಾ ವರದಿ ತಯಾರಿಸಲಾಗುವುದು’ ಎಂದು ಹೇಳಿದರು.

ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT