4

ರೋಗಗಳ ಪೆಟ್ಟಿಗೆ

Published:
Updated:

ಇಪೀಮಿಥಿಯಸ್ ಎಂಬುವವ, ಸುಂದರ ಯುವತಿ ಪಂಡೋರಾಳನ್ನು ಒಮ್ಮೆ ಭೇಟಿಯಾದ. ಇಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಜೊತೆಯಲ್ಲಿ ವಾಸ ಮಾಡಲು ಆರಂಭಿಸಿದರು. ಒಂದು ದಿನ ಒಬ್ಬ ವೃದ್ಧ ಅವರ ಮನೆಗೆ ಬಂದ. ಅವನು ತನ್ನ ಸೊಂಟದಲ್ಲಿ ಒಂದು ದೊಡ್ಡ ಪೆಟ್ಟಿಗೆ ಹೊತ್ತುಕೊಂಡಿದ್ದ.

‘ವತ್ಸ, ನನ್ನ ಈ ಪೆಟ್ಟಿಗೆ ನಿನ್ನ ಬಳಿ ಇಟ್ಟುಕೋ. ನಾನೊಂದು ಅಗತ್ಯ ಕೆಲಸದ ಮೇರೆಗೆ ಬೇರೆ ಊರಿಗೆ ಹೋಗಬೇಕಿದೆ. ನಾನು ಮರಳಿ ಬಂದಾಗ ಇದನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಆ ವೃದ್ಧ, ಇಪೀಮಿಥಿಯಸ್‍ನಲ್ಲಿ ಪ್ರಾರ್ಥಿಸಿದ.

‘ಆಗಲಿ ಅಜ್ಜ, ನೀವು ನಿಮ್ಮ ಕೆಲಸ ಪೂರೈಸಿಕೊಂಡು ಬನ್ನಿ. ನಿಮಗೆ ನಿಮ್ಮ ಪೆಟ್ಟಿಗೆ ಆಗ ಖಂಡಿತ ಸುರಕ್ಷಿತವಾಗಿ ಸಿಗುವುದು’ ಎಂದು ಇಪೀಮಿಥಿಯಸ್ ಆ ವೃದ್ಧನಿಗೆ ಆಶ್ವಾಸನೆ ನೀಡಿದ. ಆ ವೇಳೆಯಲ್ಲಿ ಪಂಡೋರಾ ಮನೆಯಿಂದ ಹೊರಗಿದ್ದಳು. ಮನೆಗೆ ಬಂದಾಗ ಅವಳ ದೃಷ್ಟಿ ಪೆಟ್ಟಿಗೆಯ ಮೇಲೆ ಬಿತ್ತು.

‘ಈ ಪೆಟ್ಟಿಗೆ ಯಾರದ್ದು? ಇದನ್ನು ತಂದವರು ಯಾರು?’ ಎಂದು ಪಂಡೋರಾ ಪತಿಯಲ್ಲಿ ಕೇಳಿದಳು. ‘ವೃದ್ಧರೊಬ್ಬರು ಈ ಪೆಟ್ಟಿಗೆಯನ್ನು ಬಿಟ್ಟು ಹೋಗಿದ್ದಾರೆ, ಅವರು ಕೆಲವು ದಿನಗಳ ನಂತರ ಬಂದು ತೆಗೆದುಕೊಂಡು ಹೋಗುತ್ತಾರೆ’ ಎಂದು ಇಪೀಮಿಥಿಯಸ್, ಪಂಡೋರಾಳಿಗೆ ಉತ್ತರ ನೀಡಿದೆ. ‘ಈ ಪೆಟ್ಟಿಗೆಯಲ್ಲಿ ಏನಿದೆ? ವೃದ್ಧರು ಇದನ್ನು ಇಲ್ಲಿ ಬಿಟ್ಟು ಎಲ್ಲಿಗೆ ಹೋದರು?’ ಎಂದು ಪ್ರಶ್ನಿಸಿದಳು ಪಂಡೋರಾ. ಆಕೆಗೆ ಪೆಟ್ಟಿಗೆಯ ಬಗ್ಗೆ ಕುತೂಹಲ ಮೂಡಿತು.

ಈ ಬಗ್ಗೆ ನಾವು ಯೋಚಿಸುವುದು ಬೇಡ. ನಾವು ನಮ್ಮ ಕೆಲಸ ಮಾಡೋಣ. ವೃದ್ಧ ಬಂದು ತಮ್ಮ ಪೆಟ್ಟಿಗೆಯನ್ನು ಮರಳಿ ಒಯ್ಯುತ್ತಾರೆ. ಆದರೆ ನೀನು ಮಾತ್ರ ಇದನ್ನು ತೆರೆಯುವ ಪ್ರಯತ್ನ ಎಂದಿಗೂ ಮಾಡಬೇಡ. ಇದು ಆ ವೃದ್ಧರ ಪಾಲಿಗೆ ಠೇವಣಿ ಇದ್ದಂತೆ’ ಎಂದು ಇಪೀಮಿಥಿಯಸ್ ತನ್ನ ಹೆಂಡತಿಗೆ ಎಚ್ಚರಿಸಿದ.

ಆದರೆ ಪಂಡೋರಾಗೆ ಆ ಪೆಟ್ಟಿಗೆಯನ್ನು ತೆರೆಯಬೇಕು ಎನ್ನುವ ಆಸೆ ಕ್ರಮೇಣ ಗಟ್ಟಿಯಾಯಿತು. ಅವಳು ಇಪೀಮಿಥಿಯಸ್‍ಗೆ ಪದೇ-ಪದೇ ಅದನ್ನು ತೆರೆಯುವಂತೆ ಆಗ್ರಹಿಸಿದಳು. ಆದರೆ ಅವನು ಕಠಿಣವಾಗಿ ಉತ್ತರಿಸಿ ಅವಳ ಬಾಯಿ ಮುಚ್ಚಿಸಿದ್ದ. ಈಗ ಪಂಡೋರಾ, ಇಪೀಮಿಥಿಯಸ್ ಮನೆಯಿಂದ ಹೊರಗೆ ಹೋಗುವ ಹಾಗೂ ತಾನೊಬ್ಬಳೇ ಪೆಟ್ಟಿಗೆಯನ್ನು ತೆರೆಯುವ ಅವಕಾಶಕ್ಕಾಗಿ ಕಾದಳು. ಕಡೆಗೆ ಆ ದಿನವೂ ಬಂತು. ಅದೊಂದು ದಿನ ಇಪೀಮಿಥಿಯಸ್ ಅಗತ್ಯ ಕೆಲಸವೊಂದರ ಕಾರಣ ಇನ್ನೊಂದು ನಗರಕ್ಕೆ ಹೋಗಬೇಕಾಯಿತು. ಆದರೆ ಅವನು ಹೋಗುವುದಕ್ಕೂ ಮೊದಲು ಪಂಡೋರಾ ಬಳಿ, ಪೆಟ್ಟಿಗೆಯನ್ನು ತೆರೆಯಬಾರದೆಂದು ಮತ್ತೊಮ್ಮೆ ಎಚ್ಚರಿಸಿದ.

ಇಪೀಮಿಥಿಯಸ್ ಹೋಗುತ್ತಲೇ ಪಂಡೋರಾ ತನ್ನೆಲ್ಲ ಕೆಲಸಗಳನ್ನು ಬಿಟ್ಟು ಪೆಟ್ಟಿಗೆ ತೆರೆಯಲು ಕೂತಳು. ಪೆಟ್ಟಿಗೆಯ ಮೇಲೆ ಸುತ್ತಿದ್ದ ಬಂಗಾರದ ದಾರದ ಗಂಟನ್ನು ಮೊದಲು ಬಿಚ್ಚಿದಳು. ಇನ್ನು ಪೆಟ್ಟಿಗೆಯ ಮುಚ್ಚಳವನ್ನು ತೆಗೆಯುವುದು ಬಾಕಿ ಇತ್ತು. ಪೆಟ್ಟಿಗೆಯೊಳಗೆ ಇಣಿಕಿ ನೋಡಿ, ನಂತರ ಅದಕ್ಕೆ ಮೊದಲಿನಂತೆಯೇ ಬಂಗಾರದ ದಾರದ ಗಂಟನ್ನು ಕಟ್ಟಬಹುದು, ಇಪೀಮಿಥಿಯಸ್‍ಗೆ ಏನೂ ತಿಳಿಯುವುದಿಲ್ಲ ಎಂದು ಪಂಡೋರಾ ಆಲೋಚಿಸಿದಳು. ಆದರೆ ಅವಳು ಪೆಟ್ಟಿಗೆಯ ಮುಚ್ಚಳ ತೆಗೆಯಬೇಕೆಂದಿರುವಾಗ, ಪೆಟ್ಟಿಗೆ ಒಳಗಿನಿಂದ ಚಿತ್ರ-ವಿಚಿತ್ರ ಧ್ವನಿಗಳು ಕೇಳಿ ಬಂದವು.

ಆ ಧ್ವನಿಗಳು ಒಟ್ಟಾಗಿ, ‘ನಮ್ಮನ್ನು ಸ್ವತಂತ್ರಗೊಳಿಸು’ ಎನ್ನುತ್ತಿದ್ದವು. ಈ ಧ್ವನಿಯನ್ನು ಕೇಳಿ ಪಂಡೋರಾ ಗಾಬರಿಗೊಂಡಳು. ಕಡೆಗೆ ಅವಳು ಏನೋ ಯೋಚಿಸಿ, ಆ ಧ್ವನಿಗಳನ್ನು ನೋಡಲು ನಿರ್ಧರಿಸಿದಳು. ಅವಳು ಪೆಟ್ಟಿಗೆಯ ಮುಚ್ಚಳವನ್ನು ಮೇಲಕ್ಕೆತ್ತಿದಾಗ, ತನ್ನ ಮುಖದ ಮೇಲೆ ಬಿಸಿ ಮತ್ತು ವಿಷಯುಕ್ತ ಗಾಳಿಯ ಏಟು ಬೀಳುತ್ತಿದೆ ಎಂಬುದನ್ನು ಮನಗಂಡಳು. ನಂತರ ಪೆಟ್ಟಿಗೆಯಿಂದ ಅನೇಕ ವಿಚಿತ್ರ ಆಕಾರಗಳ ಚಿಕ್ಕ-ಚಿಕ್ಕ ಜೀವಿಗಳು ಹೊರಬಂದು ಹಾರಿಬರಲಾರಂಭಿಸಿದವು.

ಇದನ್ನು ನೋಡಿ ಪಂಡೋರಾ ಭಯಭೀತಳಾದಳು. ಮುಚ್ಚಳ ಅವಳ ಕೈಯಿಂದ ದೂರಕ್ಕೆ ಹೋಗಿ ಬಿತ್ತು. ಆಗಲೇ ಅವಳ ದೃಷ್ಟಿ ಬಾಗಿಲ ಬಳಿ ಹರಿಯಿತು. ಇಪೀಮಿಥಿಯಸ್ ಏನೋ ಮರೆತು ಆಗತಾನೇ ಮನೆಗೆ ಮರಳಿ ಬಂದಿದ್ದ. ಆ ವಿಚಿತ್ರ ಜೀವಿಗಳು ಇಬ್ಬರ ಮೇಲೂ ಆಕ್ರಮಣವೆಸಗಿದವು. ಈಗ ಇಪೀಮಿಥಿಯಸ್‍ಗೆ ಎಲ್ಲ ವಿಷಯಗಳೂ ಅರ್ಥವಾಗಿದ್ದವು. ಆಗ ಅವನು ತನ್ನ ಹಣೆ ಚಚ್ಚಿಕೊಳ್ಳುತ್ತಾ ಹೇಳಿದ, ‘ಪಂಡೋರಾ, ಇದೇನು ಅನರ್ಥ ಎಸಗಿಬಿಟ್ಟೆ? ಈ ಜೀವಿಗಳು ಏನೆಂಬುದು ನಿನಗೆ ಗೊತ್ತೇ? ಇವು ಇಡೀ ವಾತಾವರಣದಲ್ಲಿ ಆಗಲೇ ಹಬ್ಬಿಕೊಂಡಿವೆ’ಎಂದು ಹೇಳಿದೆ.

ವಾಸ್ತವವಾಗಿ ಆ ಪೆಟ್ಟಿಗೆಯಲ್ಲಿ ರೋಗಾಣುಗಳನ್ನು ಬಂಧಿಸಿ ಇಡಲಾಗಿತ್ತು. ಪಂಡೋರಾ ತನ್ನ ತಪ್ಪಿನಿಂದಾಗಿ ಅವುಗಳನ್ನು ಸ್ವತಂತ್ರಗೊಳಿಸಿ, ಅವುಗಳನ್ನು ಇಡೀ ಪೃಥ್ವಿಯಲ್ಲಿ ಹರಡಿದ್ದಳು. ಮೊದಲು ಈ ಪೃಥ್ವಿಯಲ್ಲಿ ಯಾರಿಗೂ ರೋಗಗಳೇ ಇರಲಿಲ್ಲ. ಆದರೆ ಈ ಘಟನೆ ನಡೆದ ನಂತರ ಕಾಯಿಲೆಗಳು ಮತ್ತು ಸೋಂಕು ರೋಗಗಳು ಎಲ್ಲೆಲ್ಲೂ ಹರಡಿದವು, ಜನ ಕಾಯಿಲೆಗಳಿಂದ ಸಾಯಲಾರಂಭಿಸಿದರು.

ಈ ಕಥೆ ತುಂಬಾ ಹಳೆಯದು. ಕಾಯಿಲೆ ಇಲ್ಲದಿದ್ದ ಕಾರಣ ಆಗ ಮನುಷ್ಯನ ಜೀವನ ಸುಖಮಯವಾಗಿತ್ತು. ಆದರೆ ರೋಗಾಣುಗಳು ಹರಡಿದ ನಂತರ ಮಕ್ಕಳು ಮತ್ತು ಯುವಕರು ಕೂಡ ರೋಗಗಳಿಗೆ ತುತ್ತಾಗಿ, ಅಕಾಲದಲ್ಲೇ ಸಾಯಲಾರಂಭಿಸಿದರು. ಆದರೆ ಆ ವೃದ್ಧ ಪೆಟ್ಟಿಗೆಯಲ್ಲಿ ರೋಗಾಣುಗಳನ್ನು ತುಂಬಿ ಪಂಡೋರಾ ಮತ್ತು ಇಪೀಮಿಥಿಯಸ್‍ನ ಬಳಿ ಏಕೆ ಬಿಟ್ಟುಹೋಗಿದ್ದ ಎಂಬುದು ಯಾರಿಗೂ ತಿಳಿದಿಲ್ಲ.

(ಹಿಂದಿಯಿಂದ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry