ಕುಲ್ಲೇಟಿರ ಹಾಕಿ ಫೈನಲ್‌ಗೆ ಸಕಲ ಸಿದ್ಧತೆ

7

ಕುಲ್ಲೇಟಿರ ಹಾಕಿ ಫೈನಲ್‌ಗೆ ಸಕಲ ಸಿದ್ಧತೆ

Published:
Updated:

ನಾಪೋಕ್ಲು: 33 ದಿನಗಳಿಂದ ಇಲ್ಲಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಕುಲ್ಲೇಟಿರ ಕಪ್ ಫೈನಲ್ ಪಂದ್ಯ ಮೇ.20ರಂದು ನಡೆಯಲಿದ್ದು, ಇದಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕುಲ್ಲೇಟಿರ ಕಪ್ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ತಿಳಿಸಿದರು.

ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇ. 20ರ ಭಾನುವಾರ 11.30 ಗಂಟೆಗೆ ಚೇಂದಂಡ ಮತ್ತು ಅಂಜಪರವಂಡ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯವನ್ನು ಕೇಂದ್ರ ಮಂತ್ರಿ ರಾಜವರ್ಧನ್ ಸಿಂಗ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಶಂಭು ಮಂದಪ್ಪ ವಹಿಸಲಿದ್ದಾರೆ.

ಕುಲ್ಲೇಟಿರ ಕುಟುಂಬದ ಅಧ್ಯಕ್ಷ ಕೆ.ಎಸ್.ಮಾದಪ್ಪ ಅವರ ಉಪಸ್ಥಿತಿಯಲ್ಲಿ ಸಂಸದ ಪ್ರತಾಪ್ ಸಿಂಹ, ಐಎಎಸ್ ಶಿವಶಂಕರ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಎಸ್.ವೈ ಕುಲಕರ್ಣಿ, ಎಂಎಲ್‌ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮೇಚಿಯಂಡ ಸಿ.ಮುತ್ತಣ್ಣ, ಚೇಂದಿರ ಕಿಶನ್, ಎಂ.ಎ.ಪೊನ್ನಪ್ಪ, ಎಂ.ಬಿ.ಗಣಪತಿ, ಅರೆಯಡ ಪವಿನ್ ಪೊನ್ನಣ್ಣ, ಉಪಸ್ಥಿತರಿರುವರು ಎಂದರು.

ಹಾಕಿ ಹಬ್ಬದ ಸಂಚಾಲಕ ಕುಲ್ಲೇಟಿರ ಅರುಣ ಬೇಬ ಮಾತನಾಡಿ, ‘ಕುಲ್ಲೇಟಿರ ಹಾಕಿ ಹಬ್ಬದಲ್ಲಿ 334 ತಂಡಗಳು ನೋಂದಣಿ ಮಾಡಿದ್ದು, 6 ತಂಡಗಳು ಬಾರದ ಹಿನ್ನೆಲೆಯಲ್ಲಿ ವಾಕ್ ಓವರ್ ನೀಡಲಾಗಿದೆ. ಟೂರ್ನಿಯಲ್ಲಿ ನಿರ್ಗಮಿತ ಪ್ರತಿ ತಂಡಗಳಿಗೆ ಕುಲ್ಲೇಟಿರ ಪಡೆಬೀರ ಪೊನ್ನಣ್ಣ ಮತ್ತು ಮಾಣಿಚ್ಚ ಅವರ ಹೆಸರಿನಲ್ಲಿ ಒಡಿಕತ್ತಿ ನೀಡಲಾಗಿದೆ. ಪಂದ್ಯದಲ್ಲಿ ಜಯಗಳಿಸಿದ ತಂಡಕ್ಕೆ ಮಧುಮಗಳ ಕೊಡವ ಸಾಂಪ್ರದಾಯಿಕ ವಸ್ತ್ರಾಭರಣ ಮತ್ತು ರನ್ನರ್ಸ್ ತಂಡಕ್ಕೆ ಮಧುಮಗನ ಕೊಡವ ಸಾಂಪ್ರದಾಯಿಕ ವಸ್ತ್ರಾಭರಣವನ್ನು ನೀಡಲಾಗುವುದು’ ಎಂದರು.

‘ಮ್ಯಾನ್ ಆಫ್‌ ದ ಮ್ಯಾಚ್’, ‘ಮ್ಯಾನ್ ಆಫ್‌ ದಿ ಸಿರೀಸ್’, ‘ಬೆಸ್ಟ್ ಫಾರ್ವರ್ಡ್‌’, ‘ಬೆಸ್ಟ್ ಗೋಲ್‌ ಕೀಪರ್’, ‘ಬೆಸ್ಟ್ ಫೀಮೇಲ್ ಪ್ಲೇಯರ್’, ‘ಬೆಸ್ಟ್ ಬ್ಯಾಕ್’, ‘ಬೆಸ್ಟ್ ಹಾಫ್’ ಪ್ರಶಸ್ತಿಗಳನ್ನು ಇದರೊಂದಿಗೆ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಕುಲ್ಲೇಟಿರ ಶಂಕರಿ ಚಂಗಪ್ಪ, ವಿಠಲ ಚಿಣ್ಣಪ್ಪ, ನಂದಾ ನಾಚಪ್ಪ, ಉತ್ತಯ್ಯ, ಪರಶು ಚಂಗಪ್ಪ, ಶ್ಯಾಮ್ ಪೊನ್ನಪ್ಪ ಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry