ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಬಕಾಸುರನಂತೆ ಬೆಳೆದ ಕಳೆ

ಉಳುಮೆ ಮುನ್ನವೇ ಬೆಳೆ ಹಂಗಿಸುತ್ತಿರುವ ಕಳೆ
Last Updated 19 ಮೇ 2018, 12:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮತ್ತೆ ಮತ್ತೆ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಎಲ್ಲೆಲ್ಲೂ ಕಳೆ ಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ. ಇದರಿಂದ ಕೃಷಿಕ ಸಮುದಾಯ ಚಿಂತೆಗೀಡಾಗಿದೆ.

ಕಳೆ ಗಿಡಗಳು ನೆಲದ ಸಾರವನ್ನು ಹೀರಿ ಬೆಳೆಯುತ್ತವೆ. ರೈತ ಹಾಕಿದ ಗೊಬ್ಬರ ಕಳೆ ಗಿಡಗಳ ಪಾಲಾಗುತ್ತದೆ. ಫಲವತ್ತತೆ ಕೊರತಿಯಿಂದ ಇಟ್ಟ ಬೆಳೆ ಸಮೃದ್ಧವಾಗಿ ಬೆಳೆಯುವುದಿಲ್ಲ. ನಿರೀಕ್ಷಿತ ಫಸಲು ಕೈಗೆ ಸಿಗುವುದಿಲ್ಲ. ಆದ್ದರಿಂದಲೇ ರೈತರು ಯಾವುದೇ ಬೆಳೆಯಲ್ಲಿ ಕಳೆ ಇಲ್ಲದಂತೆ ಎಚ್ಚರ ವಹಿಸುತ್ತಾರೆ. ಆದರೆ ಈಗ ಜಮೀನು ಉಳುಮೆ ಮಾಡುವ ಮುನ್ನವೇ ಕಳೆ ಗಿಡಗಳು ಹಚ್ಚಗೆ ಬೆಳೆದು ಬೆಳೆಯನ್ನು ಹಂಗಿಸುತ್ತಿವೆ.

ತಾಲ್ಲೂಕಿನ ವಿಶಾಲವಾದ ಮಾವಿನ ತೊಟಗಳು, ಹೊಲ, ಗದ್ದೆ ಬಯಲು, ಸರ್ಕಾರಿ ಜಮೀನು ಕಳೆಗಿಡದ ಆವಾಸವಾಗಿ ಪರಿಣಮಿಸಿದೆ. ಹೊಳಗೆ ಕಾಲಿಡಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜಾತಿಯ ಗಿಡಗಳು ಬೆಳೆದಿದ್ದರೂ, ಆ ಎಲ್ಲ ಗಿಡಗಳ ಮೇಲೆ ರಾಕ್ಷಸನಂತೆ ಪಾರ್ಥೇನಿಯಂ ಬೆಳೆದುನಿಂತಿದೆ. ಕೆಲವು ರೈತರು ಬಿಡುವಿನ ವೇಳೆಯಲ್ಲಿ ಈ ಕಳೆ ಗಿಡಗಳನ್ನು ಕಿತ್ತು ಹೊರಗೆ ಹಾಕುತ್ತಿದ್ದಾರೆ.

ಕೃಷಿ ಕಾರ್ಮಿಕರು ಪಾರ್ಥೇನಿಯಂ ಗಿಡ ಕೀಳಲು ಹೋಗುವುದಿಲ್ಲ. ಕಾರಣ ಅಲರ್ಜಿ. ಕೆಲವರಿಗೆ ಈ ಗಿಡದ ವಾಸನೆಯೇ ಆಗುವುದಿಲ್ಲ. ಮುಟ್ಟಿದರೆ ಮೈ ತುರಿಕೆ ಬರುತ್ತದೆ. ಗಿಡ ತಾಕಿದ ಕಡೆ ಹುಣ್ಣಾಗುತ್ತದೆ. ಆದ್ದರಿಂದಲೇ ಕೃಷಿ ಕಾರ್ಮಿಕರು ಈ ಗಿಡದಿಂದ ದೂರ ಉಳಿದಿದ್ದಾರೆ. ಇನ್ನು ಜಮೀನು ಹೊಂದಿರುವ ರೈತರು ಅನಿವಾರ್ಯವಾಗಿ ಕಳೆ ಗಿಡ ಕೀಳಬೇಕಾದ ಒತ್ತಡಕ್ಕೆ ಸಿಕ್ಕಿದ್ದಾರೆ. ಹಾಗಾಗಿ ಕೀಳುವ ಕೆಲಸದಲ್ಲಿ ನಿರತರಾಗಿದ್ದಾರೆ.

‘ರೈತರು ತಮ್ಮ ಜಮೀನಲ್ಲಿ ಬೆಳೆದಿರುವ ಕಳೆಗಿಡ ಕಿತ್ತು ಆರೋಗ್ಯ ಕೆಡಿಸಿಕೊಳ್ಳಬಾರದು. ಹದ ನೋಡಿ ಕಟ್ಟರ್‌ ಹಾಕಿಸಬೇಕು. ಪಾರ್ಥೇನಿಯಂ ಸೇರಿದಂತೆ, ಬೆಳೆದಿರುವ ಎಲ್ಲ ಅನಗತ್ಯ ಗಿಡಗಳನ್ನು ಕತ್ತರಿಸಿ ಮಣ್ಣಿಗೆ ಸೇರಿಸಬೇಕು. ಹಾಗೆ ಮಾಡುವುದರಿಂದ ಜಮೀನು ಫಲವತ್ತತೆ ಹೆಚ್ಚುತ್ತದೆ. ಹಸಿರು ಗೊಬ್ಬರ ಬೆಳೆಗೆ ಸಿಕ್ಕಿ ಒಳ್ಳೆ ಫಸಲು ಬರುತ್ತದೆ’ ಎಂದು ತಾಲ್ಲೂಕು ತೋಟಗಾರಿಗೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್‌ ಹೇಳಿದರು.

ಕಳೆ ಗಿಡಗಳನ್ನು ಕಿತ್ತು ಒಣಗಿದ ಮೇಲೆ ಸುಡುವುದರಿಂದ ಅಮೂಲ್ಯವಾದ ಹಸಿರು ಗೊಬ್ಬರ ಹಾಳಾಗುತ್ತದೆ. ಕಳೆಗಿಡವನ್ನು ಶಪಿಸುವ ಬದಲು, ವೈಜ್ಞಾನಿಕವಾಗಿ ಕತ್ತರಿಸಿ ಮಣ್ಣಿಗೆ ಸೇರಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಕಳೆ ಗಿಡ ಬೀಜಕ್ಕೆ ಬರುವ ಮೊದಲು ಕತ್ತರಿಸಿದಲ್ಲಿ ಹರಡುವಿಕೆ ತಪ್ಪುತ್ತದೆ ಎಂಬುದು ಸಾವಯವ ಕೃಷಿಕ ರಾಂಪುರ ಅಶೋಕ್‌ ಕುಮಾರ್‌ ಅವರ ಅಭಿಪ್ರಾಯ.

ತಾಲ್ಲೂಕಿನಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಕಳೆಯನ್ನು ಕಟ್ಟರ್‌ ಮೂಲಕ ಕತ್ತರಿಸಿ ಮಣ್ಣಿಗೆ ಸೇರಿಸುತ್ತಿದ್ದಾರೆ. ಉಳಿದವರು ಕಿತ್ತಕಳೆಗೆ ಬೆಂಕಿಯಿಟ್ಟು ಸುಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾದಲ್ಲಿ ಬೆಳೆಗೆ ಅತ್ಯುತ್ತಮ ಹಸಿರು ಗೊಬ್ಬರ ಲಭ್ಯವಾಗುತ್ತದೆ. ಸಾವಯವ ಕೃಷಿಗೆ ಮಾನ್ಯತೆ ಸಿಗುತ್ತದೆ.

**
ಈ ಹಾಳು ಕಾಂಗ್ರೆಸ್‌ ಗಿಡ ಬಿದ್ದು ಜಮೀನು ಹಾಳಾಯಿತು. ಕಿತ್ತು ಆರೊಗ್ಯ ಕೆಡಿಸಿಕೊಂಡಿದ್ದಾಯಿತು
ವೆಂಕಟಮ್ಮ, ಪನಸಮಾಕನಹಳ್ಳಿ ಗ್ರಾಮದ ರೈತ ಮಹಿಳೆ

-ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT