ಕಾಂಗರೂ ಮಾದರಿ ಚಿಕಿತ್ಸೆಗೆ ವಿಶ್ವ ಮಾನ್ಯತೆ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮಕೃಷ್ಣ ಅಭಿಮತ

ಕಾಂಗರೂ ಮಾದರಿ ಚಿಕಿತ್ಸೆಗೆ ವಿಶ್ವ ಮಾನ್ಯತೆ

Published:
Updated:

ಕುಷ್ಟಗಿ: ಕಾಂಗರೂ ಮದರ್‌ ಕೇರ್‌ ಪರಿಕಲ್ಪನೆಯನ್ನು ಒಳಗೊಂಡಿರುವ ತಾಯಿಯ ಎದೆಯ ಬೆಚ್ಚನೆಯ ಆರೈಕೆ ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಬಳಲುವ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್‌.ರಾಮಕೃಷ್ಣ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ, ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಕಾಂಗರೂ ಮದರ್‌ ಕೇರ್ (ಕೆಎಂಸಿ) ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಶುವಿಗೆ ತಾಯಿಯಿಂದ ಬೆಚ್ಚನೆ ಆರೈಕೆಗೆ ಯಾವುದೇ ಖರ್ಚುಗಳು ಇಲ್ಲದ ಸಕಾಲಿಕ ಚಿಕಿತ್ಸೆಯಾಗಿದೆ ಎಂದರು.

ಕಾಂಗರೂ ಮಾದರಿ ಚಿಕಿತ್ಸೆ ಯಿಂದ ಶಿಶುವಿನಲ್ಲಿ ಅಪೌಷ್ಟಿಕತೆ ನಿವಾರಣೆಯಾಗುವುದರ ಜೊತೆಗೆ ತಾಯಿ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ, ಮಗುವಿನ ಮೇಲೆ ಮಮತೆ ಹೆಚ್ಚುತ್ತದೆ, ತಾಯಿ ಮಡಿಲು ಮಗುವಿಗೆ ಅಪ್ಯಾಯಮಾನವಾಗಿರುತ್ತದೆ. ಇಂತ ಹತ್ತಾರು ರೀತಿಯ ಸಕಾರಾತ್ಮಕ ಪರಿ ಣಾಮಗಳನ್ನು ನಿರೀಕ್ಷಿಸ ಬಹುದಾಗಿದೆ ಎಂದು ಹೇಳಿದರು.

ಈ ದಿನಾಚರಣೆ ಈಗ ವಿಶ್ವಮಟ್ಟದಲ್ಲಿ ನಡೆಯುತ್ತಿದ್ದು ಅದಕ್ಕೆ ಕೊಪ್ಪಳ ಜಿಲ್ಲೆಯ ರೇಣುಕಾ ಹಡಪದ ಅವರ ತ್ರಿವಳಿ ಮಕ್ಕಳ ಮೇಲೆ ನಡೆಸಿದ ಪ್ರಾಯೋಗಿಕ ಕಾರ್ಯಕ್ರಮ ಮುಖ್ಯ ಪ್ರೇರಣೆಯಾಗಿದೆ. ಶಿಶುಗಳಲ್ಲಿ ತೂಕ ಹೆಚ್ಚುವುದು ಮತ್ತು ಅವು ಆರೋಗ್ಯವಂತವಾಗಿ ಬೆಳೆದಿರುವ ಉದಾಹರಣೆ ಕಣ್ಮುಂದೆ ಇದೆ ಎಂದರು.

ಕಾಂಗರೂ ಮಾದರಿ ಆರೈಕೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು, ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸೇವಾ ಸಂಸ್ಥೆಗಳು ಮತ್ತು ಆಶಾ ಕಾರ್ಯಕರ್ತರ ಪಾತ್ರ ಇದರಲ್ಲಿ ಪ್ರಮುಖ, ಯಶಸ್ವಿಗೆ ಮುತುವರ್ಜಿ ವಹಿಸುವಂತೆ ಡಾ.ರಾಮಕೃಷ್ಣ ಹೇಳಿದರು.

ಹಿರಿಯ ಸರ್ಜನ್‌ ಡಾ.ಕೆ.ಎಸ್‌.ರೆಡ್ಡಿ ಮಾತನಾಡಿ, ಭಾರತೀಯರಿಗೆ ಅದರಲ್ಲೂ ಹಳ್ಳಿಗಳಲ್ಲಿ ಚಾಪೆ ಹೆಣೆಯುವವರು, ಕೊರವರು ಮತ್ತಿತರೆ ಸಮುದಾಯಗಳ ಮಹಿಳೆಯರಿಗೆ ಈ ಆರೈಕೆ ಪದ್ಧತಿ ಹೊಸದೇನೂ ಅಲ್ಲ. ಆದರೆ, ಈಗ ಅದಕ್ಕೆ ವಿಶ್ವ ಮಾನ್ಯತೆ ದೊರೆತಿರುವುದು ವಿಶೇಷ. ಆದರೆ, ಇಂಥ ಪದ್ಥತಿ ಅನುಸರಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಹೊಸದಾಗಿ ಹೇಳಲು ಹೊರಟಾಗ ಜನ ನಂಬುವುದಿಲ್ಲ ಪರಿಣಾಮ ತಿಳಿದಾಗ ಒಪ್ಪುತ್ತಾರೆ. ಹಾಗಾಗಿ ಜನರ ಮನ ಮುಟ್ಟುವಂತೆ ವಿವರಿಸುವ ಕೆಲಸ ನಡೆಯಬೇಕಿದೆ ಎಂದರು.

ಚಿಕ್ಕಮಕ್ಕಳ ತಜ್ಞೆ ಡಾ. ವೇದಾವತಿ ಪಾಟೀಲ ಮಾತನಾಡಿ, ಕಾಂಗೂರು ಮಾದರಿ ಆರೈಕೆಗೆ ಒಂದಷ್ಟು ಸಮಯ ಮೀಸಲಿಟ್ಟರೆ ಸಾಕು, ಅದೇ ರೀತಿ ಕೇವಲ ಹಡೆದವರಷ್ಟೇ ಅಲ್ಲ ಆರೋಗ್ಯವಂತರಾದ ಯಾರಾದರೂ ಶಿಶುಗಳಿಗೆ ಈ ರೀತಿ ಆರೈಕೆ ಮಾಡ ಬಹುದು.

ಅದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು. ಅದೇ ರೀತಿ ರೇಣುಕಾ ಹಡಪದ ಅವರಿಂದ ನಡೆದ ಮಾದರಿ ಚಿಕಿತ್ಸೆ ವಿಷಯ ಯನಿಸೆಫ್‌ ಗಮನ ಸೆಳೆದಿದೆ ಎಂದು ವಿವರಿಸಿದರು.

ಡಾ.ಅಲಕಾನಂದ ಮಾಳಗಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಆಡಳಿತಾ ತ್ಮಕ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ, ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ಸಂವಹನ ನಿರ್ದೇಶಕ ಸುರೇಶ ಚಿತ್ತಾಪುರ, ಡಾ. ಸುಲೋಚನಾ, ಅತೀಕ್ ಅಹ್ಮದ್, ಪುಂಡಲೀಕ ಭರಮೇಗೌಡ, ನೇತ್ರ ತಜ್ಞ ಡಾ. ಸುಶೀಲೇಂದ್ರ ಕಾಖಂಡಕಿ ಇದ್ದರು.

ಕಾರ್ಯಕ್ರಮದಲ್ಲಿದ್ದ ಕಾಂಗೂರು ಮಾದರಿ ಆರೈಕೆಯ ತಾಯಂದಿರು ಗಮನ ಸೆಳೆದರು. ಕಾಂಗರೂ ಆರೈಕೆಗೆ ಸಂಬಂಧಿಸಿದ ಚಿತ್ರಪಟ ಪ್ರರ್ದಶನ, ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

**

ಮಕ್ಕಳನ್ನು ಎದೆಗವಚಿಕೊಂಡು ಕೆಲಸ ಮಾಡುವ ಹಳ್ಳಿಯ ಶ್ರಮಜೀವಿ ತಾಯಂದಿರಿಗೆ ಕೆಎಂಸಿ ಹೊಸದೇನೂ ಅಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ

ಡಾ.ಕೆ.ಎಸ್‌.ರೆಡ್ಡಿ,‌ ಹಿರಿಯ ವೈದ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry