ಮುಕ್ತವಾಣಿಜ್ಯ ಎಂದರೇನು?

7

ಮುಕ್ತವಾಣಿಜ್ಯ ಎಂದರೇನು?

Published:
Updated:
ಮುಕ್ತವಾಣಿಜ್ಯ ಎಂದರೇನು?

ಪ್ರಸ್ತುತ ಇರುವ ಸಮಾಜದ ಪರಿಸ್ಥಿತಿಯಲ್ಲಿ ಮುಕ್ತವಾಣಿಜ್ಯ ಎಂದರೇನು? ಅದು ಬಂಡವಾಳದ ಸ್ವಾತಂತ್ರ್ಯ. ಬಂಡವಾಳದ ಮುಕ್ತ ಬೆಳವಣಿಗೆಗೆ ಅಡಚಣೆಯಾಗಿರುವ ರಾಷ್ಟ್ರೀಯ ಗಡಿಗಳ ಅಡ್ಡಗೋಡೆಗಳನ್ನು ಕಿತ್ತುಹಾಕಿದ ಮೇಲೆ ನೀವು ಬಂಡವಾಳಕ್ಕೆ ಸಂಪೂರ್ಣ ಕ್ರಿಯಾ ಸ್ವಾತಂತ್ರ್ಯ ನೀಡಿದ ಹಾಗೆ ಆಗುತ್ತದೆ.

ಮುಕ್ತವ್ಯಾಪಾರಿಗಳದ್ದು ಒಂದು ಊಹೆಯು ಪ್ರಸಿದ್ಧವಾಗಿದೆ: ಊಹೆಯಾದ, ಬಂಡವಾಳದ ಅನುಕೂಲಕರ ಅನ್ವಯದಿಂದಾಗಿ ಕೈಗಾರಿಕಾ ಬಂಡವಾಳಗಾರರು ಮತ್ತು ಕೂಲಿಗಾರರ ನಡುವೆ ಇರುವ ಸಂಘರ್ಷ ರದ್ದಾಗುವುದು ಎಂಬುದು ಆ ಕಲ್ಪನೆ. ಅದು ಹೇಗೆ ತಾನೆ ಸಾಧ್ಯ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ. ತದ್ವಿರುದ್ಧ ಒಂದೇ ನಿಜವಾದ ಪರಿಣಾಮ ಎಂದರೆ ಈ ಎರಡು ವರ್ಗಗಳ ನಡುವಿನ ಘರ್ಷಣೆ ಎದ್ದು ಕಾಣುತ್ತದೆ.

ಒಂದು ಕ್ಷಣ ನಾವು ಧಾನ್ಯ ಕಾನೂನು ಇಲ್ಲ ಎಂದುಕೊಳ್ಳೋಣ. ಅಥವಾ ರಾಷ್ಟ್ರೀಯ ಮತ್ತು ಪೌರಾಡಳಿತ ಆಮದು ಕರಗಳೂ ಇಲ್ಲ ಎಂದುಕೊಳ್ಳೋಣ. ಒಂದೇ ಮಾತಿನಲ್ಲಿ, ಇಂದು ದುಡಿಯುವ ಮನುಷ್ಯ ತನ್ನ ಎಲ್ಲ ಬವಣೆಗಳಿಗೆ ಕಾರಣ ಎಂದುಕೊಳ್ಳುವ ಎಲ್ಲ ಆಕಸ್ಮಿಕ ಸಂದರ್ಭಗಳೂ ಕಣ್ಮರೆಯಾಗಿವೆ ಎಂದುಕೊಳ್ಳೋಣ, ಮತ್ತು ಅವನ ನಿಜವಾದ ಶತ್ರು ಅವನಿಗೆ ಗೋಚರವಾಗದಂತೆ ಮಾಡುವ ಪರದೆಗಳನ್ನು ನಾವು ಕಿತ್ತೊಗೆದಿದ್ದೇವೆ ಅಂದುಕೊಳ್ಳೋಣ.

ಎಲ್ಲ ರೀತಿಯ ಅಡಚಣೆಗಳ ಬಲೆಗಳಿಂದ ಮುಕ್ತವಾದ ಬಂಡವಾಳ ಕೂಡ ಅವನನ್ನು ಗುಲಾಮನನ್ನಾಗೇ ಪರಿಗಣಿಸುವುದನ್ನು ದುಡಿಮೆಗಾರನು ಅರ್ಥಮಾಡಿಕೊಳ್ಳುತ್ತಾನೆ. ಆಮದು ಕರಗಳ ಅಡಚಣೆಗಳಿಂದ ಕೂಡಿದ ಬಂಡವಾಳವೂ ಅವನನ್ನು ಅಷ್ಟೇ ಗುಲಾಮನನ್ನಾಗೇ ಮಾಡಿತ್ತು. ವ್ಯತ್ಯಾಸವೇನೂ ಇಲ್ಲ.

ಮಾನ್ಯರೆ! ಸ್ವಾತಂತ್ರ್ಯ ಎಂಬ ಅಮೂರ್ತ ಪದದಿಂದ ಮೋಸಹೋಗಬೇಡಿ. ಯಾರ ಸ್ವಾತಂತ್ರ್ಯ? ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿರುವುದಲ್ಲ; ಆದರೆ ಕಾರ್ಮಿಕನನ್ನು ಪುಡಿಪುಡಿ ಮಾಡುವ ಬಂಡವಾಳದ ಸ್ವಾತಂತ್ರ್ಯ.

ಅನಿಯಂತ್ರಿತ ಸ್ಪರ್ಧೆಗೆ ಇನ್ನೂ ಸ್ವಾತಂತ್ರ್ಯ ಕಲ್ಪಿಸಿಕೊಡಬೇಕೆಂದು ನೀವೇಕೆ ಇಚ್ಛಿಸುತ್ತೀರ? ಸ್ವಾತಂತ್ರ್ಯದ ಪರಿಕಲ್ಪನೆಯೇ ಮುಕ್ತ ಸ್ಪರ್ಧೆಯಾಧಾರಿತ ಸಾಮಾಜಿಕ ಪರಿಸ್ಥಿತಿಯ ಉತ್ಪಾದನೆ ಆಗಿದೆಯೆಂಬುದು ನಿಮಗೆ ತಿಳಿದಿದೆಯಲ್ಲವೆ?

ಮುಕ್ತ ವಾಣಿಜ್ಯವು ಒಂದೇ ದೇಶದ ಒಳಗೆ ಬೇರೆ ಬೇರೆ ವರ್ಗಗಳು ತಮ್ಮ ತಮ್ಮಲ್ಲಿ ಯಾವ ರೀತಿ ಭ್ರಾತೃತ್ವ ಹೊಂದಬಹುದು ಎಂಬುದನ್ನು ತೋರಿಸಿದ್ದೇವೆ. ಹೀಗಿರುವಾಗ ಈ ಜಗತ್ತಿನ ಬೇರೆ ಬೇರೆ ದೇಶಗಳ ನಡುವೆ ಮುಕ್ತವಾಣಿಜ್ಯ ಸ್ಥಾಪಿಸಬಹುದಾದ ಭ್ರಾತೃತ್ವ ಬೇರೆ ಯಾವುದೇ ರೀತಿಯಲ್ಲಿಯೂ ಇರಲು ಸಾಧ್ಯವಿಲ್ಲ. ಅಂತರರಾಷ್ಟ್ರ ಶೋಷಣೆಯನ್ನು ಜಾಗತಿಕ ಭ್ರಾತೃತ್ವ ಎಂದು ಕರೆಯುವ ವಿಚಾರ ಕೇವಲ ಬೂರ್ಷ್ವಾ ವರ್ಗದ ಮಿದುಳಿನಿಂದ ಮಾತ್ರ ಜನಿಸಲು ಸಾಧ್ಯ.

ದೇಶದ ಒಳಗೆ ಅನಿಯಂತ್ರಿತ ಸ್ಪರ್ಧೆಯಿಂದ ಮೂಡಿಬರುವ ಪ್ರತಿ ವಿನಾಶಕಾರಿ ಘಟನೆಯೂ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನೂ ಬೃಹತ್ತಾಗಿ ಪುನರ್ ಜನ್ಮ ಪಡೆಯುತ್ತದೆ. ನಾವು ಮುಕ್ತ ವ್ಯಾಪಾರದ ಚರ್ವಿತ ಚರ್ವಣಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಅವೆಲ್ಲಕ್ಕೂ ಮಾನ್ಯರುಗಳಾದ ಹೋಪ್, ಮೋರ್ಸ್ ಮತ್ತು ಗ್ರೆಗ್ ಅವರುಗಳ ಚರ್ಚೆಯಷ್ಟೇ ಬೆಲೆ.

ಉದಾಹರಣೆಗೆ, ಮುಕ್ತವಾಣಿಜ್ಯವು ಒಂದು ಅಂತರರಾಷ್ಟ್ರೀಯ ಶ್ರಮವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತಿದೆ. ಮತ್ತು ಪ್ರತಿ ದೇಶಕ್ಕೂ ಅದರ ಪ್ರಾಕೃತಿಕ ಸಂಪನ್ಮೂಲಗಳಿಗೆ ಹೊಂದುವಂತಹ ಉತ್ಪಾದನೆಯ ಶಾಖೆಯನ್ನು ಈ ಮೂಲಕ ಕೊಡಲಾಗುವುದು ಎಂದೂ ಹೇಳಲಾಗುತ್ತಿದೆ.

ಮಾನ್ಯರೆ, ನೀವೆಲ್ಲ ವೆಸ್ಟ್ ಇಂಡೀಸಿನ ಪ್ರಾಕೃತಿಕ ವಿಧಿಯೆಂದರೆ ಬಹುಶಃ ಸಕ್ಕರೆ ಮತ್ತು ಕಾಫಿ ಉತ್ಪಾದನೆ ಎಂದುಕೊಂಡಿರಬಹುದು.

ಎರಡು ಶತಮಾನಗಳ ಹಿಂದೆಯೂ ಪ್ರಕೃತಿ ವಾಣಿಜ್ಯದ ಬಗ್ಗೆ ಆ ದೇಶವು ತನ್ನ ತಲೆ ಕೆಡಿಸಿಕೊಂಡಿರಲಿಲ್ಲ, ಅಲ್ಲಿ ಸಕ್ಕರೆ ಅಥವಾ ಕಾಫಿ ಗಿಡಗಳನ್ನು ಅದು ನೆಟ್ಟಿರಲಿಲ್ಲ. ಮತ್ತು ಇನ್ನು ಐವತ್ತು ವರ್ಷಗಳಲ್ಲಿ ಕಾಫಿಯಾಗಲಿ, ಸಕ್ಕರೆಯಾಗಲಿ ಅಲ್ಲಿ ಇರದೇ ಹೋಗಬಹುದು.

ಏಕೆಂದರೆ ಈಸ್ಟ್ ಇಂಡೀಸ್ (ಅಂದರೆ ಇಂಡಿಯಾ ಇತ್ಯಾದಿ) ಅಗ್ಗದ ಉತ್ಪಾದನೆಯ ಮೂಲಕ, ಈಗಾಗಲೇ, ವೆಸ್ಟ್ ಇಂಡೀಸಿನ ಈ ಪ್ರಾಕೃತಿಕ ವಿಧಿಯನ್ನು ಯಶಸ್ವಿಯಾಗಿ ಮುರಿದುಹಾಕಿದೆ. ಮತ್ತು ವೆಸ್ಟ್ ಇಂಡೀಸ್, ತನ್ನ ಎಲ್ಲ ಪ್ರಾಕೃತಿಕ ಸಂಪತ್ತಿನ ಜೊತೆ, ಢಾಕಾದ ನೇಯ್ಗೆಯವರ ರೀತಿಯೇ ಇಂಗ್ಲೆಂಡಿಗೆ ಭಾರದ ಹೊರೆಯಾಗಿ ಪರಿಣಮಿಸುತ್ತಿದೆ. ಢಾಕಾದ ನೇಯ್ಗೆಯವರು ಕಾಲದ ಆದಿಯಿಂದಲೂ ತಮ್ಮ ಕೈಗಳಿಂದ ನೇಯ್ಗೆ ಮಾಡುವುದು ಅವರ ವಿಧಿಯಾಗಿತ್ತು ಎಂದು ಹೇಳಲಾಗುತ್ತಿತ್ತಲ್ಲ, ಎಲ್ಲಿ ಹೋಯಿತು ಆ ವಿಧಿ?

ಮತ್ತೊಂದು ಸಂದರ್ಭವನ್ನು ಮರೆಯಬಾರದು. ಅದೆಂದರೆ, ಪ್ರತಿಯೊಂದೂ ಏಕಸ್ವಾಮ್ಯ ಆಗಿದೆ. ಆದರೂ ಈಗಲೂ ಕೈಗಾರಿಕೆಯ ಕೆಲವು ಶಾಖೆಗಳು ಮಿಕ್ಕೆಲ್ಲ ಶಾಖೆಗಳಿಗಿಂತ ಪ್ರಬಲವಾಗುತ್ತಿವೆ. ಮತ್ತು ತಮ್ಮನ್ನು ಜೋಪಾನ ಮಾಡುವ ದೇಶಕ್ಕೆ ಜಾಗತಿಕ ಮಾರುಕಟ್ಟೆಯನ್ನು ಭದ್ರಮಾಡಿಕೊಡುತ್ತದೆ. ಈ ರೀತಿ ಜಾಗತಿಕ ವಾಣಿಜ್ಯದಲ್ಲಿ, ಬಟ್ಟೆಯ ಉತ್ಪಾದನೆಯ ಇತರ ಎಲ್ಲ ಕಚ್ಚಾ ವಸ್ತುಗಳಿಗಿಂತಲೂ, ಹತ್ತಿಯೇ ವಾಣಿಜ್ಯ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಮುಕ್ತ ವಾಣಿಜ್ಯದವರ ಕೈಗಾರಿಕೆಯ ಪ್ರತಿಶಾಖೆಯಲ್ಲೂ ಕೆಲವು ವಿಶೇಷಗಳನ್ನು ಗುರ್ತಿಸುವುದು ಹಾಸ್ಯಾಸ್ಪದವಾಗಿದೆ. ಏಕೆಂದರೆ ಇವುಗಳನ್ನು ದಿನನಿತ್ಯದ ಬಳಕೆಯ ಉತ್ಪನ್ನಗಳಿಗೆ ಹೋಲಿಸಲಾಗುತ್ತದೆ. ಇವುಗಳು ತುಂಬ ಉನ್ನತ ತಯಾರಿಕಾ ಮಟ್ಟದ ದೇಶಗಳಲ್ಲಿ ಬಹಳ ಅಗ್ಗವಾಗಿ ಉತ್ಪಾದನೆ ಆಗುತ್ತಿವೆ.

ಮುಕ್ತ ವಾಣಿಜ್ಯದವರು ಒಂದು ದೇಶ ಮತ್ತೊಂದು ದೇಶವನ್ನು ತುಳಿದು ತಾನು ಶ್ರೀಮಂತವಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ನಾವು ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಇದೇ ಮಹಾಶಯರು ಒಂದೇ ದೇಶದ ಒಳಗೆ ಒಂದು ವರ್ಗ ಮತ್ತೊಂದನ್ನು ಹತ್ತಿಕ್ಕಿ ತಾನು ಶ್ರೀಮಂತವಾಗುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ನಿರಾಕರಿಸುತ್ತಾರೆ.

ಮಾನ್ಯರೆ, ಮುಕ್ತವಾಣಿಜ್ಯದ ಸ್ವಾತಂತ್ರ್ಯವನ್ನು ನಾವು ಟೀಕಿಸುತ್ತಿರುವುದರಿಂದ, ನಾವು ರಕ್ಷಣಾ ವ್ಯವಸ್ಥೆ ಪರ ಖಂಡಿತಕ್ಕೂ ಇಲ್ಲ. ನಾವು ಮುಂಚಿನ ಆಬ್ಸಲ್ಯುಟಿಸಂ ಪರವಾಗಿ ಇಲ್ಲದೇ ಇಂದಿನ ಕಾನ್‌ಸ್ಟಿಟ್ಯೂಶನಲಿಸಂ ಅನ್ನು ವಿರೋಧಿಸಬಹುದು. ಅಲ್ಲದೆ, ಸ್ವಕೀಯ ಉತ್ಪಾದನೆಗಳಿಗೆ ವಾಣಿಜ್ಯದ ಕ್ಷೇತ್ರದಲ್ಲಿ ರಕ್ಷಣೆ ಕಲ್ಪಿಸಿಕೊಡುವುದೆಂದರೆ ರಕ್ಷಣಾ ವ್ಯವಸ್ಥೆ.ಎಂದರೆ, ಯಾವುದೇ ಒಂದು ದೇಶದಲ್ಲಿ ತಯಾರಿಕೆಯನ್ನು ಬೃಹತ್ ಪ್ರಮಾಣದಲ್ಲಿ ಸ್ಥಾಪಿಸುವುದು ಎಂದೇ ಅರ್ಥ. ಅಂದರೆ, ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸುವುದು.

ಈ ಜಾಗತಿಕ ಮಾರುಕಟ್ಟೆಯ ಅವಲಂಬನ ಸ್ಥಾಪಿತವಾದ ತಕ್ಷಣವೇ, ಹೆಚ್ಚು ಕಡಿಮೆ, ಮುಕ್ತವಾಣಿಜ್ಯದ ಮೇಲೆ ಅವಲಂಬನೆ ಕೂಡ ಹುಟ್ಟಿಕೊಳ್ಳುತ್ತದೆ. ಇದಲ್ಲದೆ, ಈ ಬಗೆಯ ರಕ್ಷಣಾ ವ್ಯವಸ್ಥೆ ಒಂದು ದೇಶದ ಒಳಗೇ ಮುಕ್ತ ಸ್ಪರ್ಧೆ ಬೆಳೆಯಲು ಸಹಾಯ ಮಾಡುತ್ತದೆ. ಆದ್ದರಿಂದ, ಎಲ್ಲಿ ಬೂರ್ಷ್ವಾಗಳು ಒಂದು ವರ್ಗವಾಗಿ ತಲೆ ಎತ್ತಲು ಪ್ರಾರಂಭಿಸಿದ್ದಾರೋ ಅಲ್ಲೆಲ್ಲ, ಉದಾಹರಣೆಗೆ ಜರ್ಮನಿಯಲ್ಲಿ, ಈ ವರ್ಗವು ರಕ್ಷಣಾ ಪರವಾಗಿ ಕರ ವಿಧಿಸಲು ಬಹಳಷ್ಟು ಪ್ರಯತ್ನ ಪಡುತ್ತದೆ.

ಅವು ಊಳಿಗಮಾನ್ಯಶಾಹಿ ಮತ್ತು ನಿರುಪಾಧಿಕ ಸಾಮ್ರಾಜ್ಯಶಾಹಿಗಳ ವಿರುದ್ಧ ಬೂರ್ಷ್ವಾ ವರ್ಗದ ಆಯುಧಗಳಾಗಿ ಪರಿಣಮಿಸುತ್ತವೆ. ಇದರ ಮೂಲಕ ಅಧಿಕಾರದ ಕೇಂದ್ರೀಕರಣವಾಗುತ್ತದೆ. ಅದನ್ನು ಉಪಯೋಗಿಸಿ ಮುಕ್ತವಾಣಿಜ್ಯ ವ್ಯವಸ್ಥೆಯನ್ನು ಅಳವಡಿಸುತ್ತದೆ.

ಆದರೆ, ಸಾಮಾನ್ಯೀಕರಿಸಿ ಹೇಳುವುದಾದರೆ, ಈ ಬಗೆಯ ವಾಣಿಜ್ಯ ರಕ್ಷಣಾ ವ್ಯವಸ್ಥೆಯು ನಮ್ಮ ಇಂದಿನ ಕಾಲದಲ್ಲಿ ಸಂಪ್ರದಾಯವಾದ ಎನಿಸಿಕೊಳ್ಳುತ್ತದೆ. ಅದೇ ಸಮಯದಲ್ಲಿ, ಮುಕ್ತ ವ್ಯಾಪಾರವು ವಿನಾಶಕಾರಿಯೂ ಹೌದು. ಅದು ಹಳೆಯ ರಾಷ್ಟ್ರೀಯತೆ ಗಳನ್ನು ಛಿದ್ರಗೊಳಿಸುತ್ತದೆ ಮತ್ತು ಕಾರ್ಮಿಕರು ಹಾಗೂ ಬೂರ್ಷ್ವಾ ವರ್ಗಗಳ ನಡುವಿನ ವೈರುಧ್ಯವನ್ನು ಅತಿಗೆ ಕೊಂಡೊಯ್ದು ಮುಟ್ಟಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಮುಕ್ತ ವಾಣಿಜ್ಯ ವ್ಯವಸ್ಥೆಯು ಸಾಮಾಜಿಕ ಕ್ರಾಂತಿಯನ್ನು ತ್ವರೆಗೊಳಿಸುತ್ತದೆ.

ಈ ಕ್ರಾಂತಿಕಾರಿ ಅರ್ಥದಲ್ಲಿ ಮಾತ್ರ, ಮಾನ್ಯರೆ, ನಾನು ಮುಕ್ತವಾಣಿಜ್ಯದ ಪರ.

(ಮುಕ್ತ ವಾಣಿಜ್ಯದ ಪ್ರಶ್ನೆಯ ಕುರಿತು ಜ.9, 1848ರಂದು, ಬ್ರಸೆಲ್ಸ್‌ನ ಪ್ರಜಾತಾಂತ್ರಿಕ ಸಂಘದಲ್ಲಿ ಕಾರ್ಲ್ ಮಾರ್ಕ್ಸ್ ಮಾಡಿದ ಸಾರ್ವಜನಿಕ ಭಾಷಣದ ಆಯ್ದ ಭಾಗ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry