6

ಅವ್ವನ ಬಿಸುಪು...

Published:
Updated:
ಅವ್ವನ ಬಿಸುಪು...

ಅವ್ವ ಪುಸ್ತಕ ಮಾಲೆಯ 5ನೇ ಸಂಕಲನ ಇದು. ಆತ್ಮಕಥೆಗಳಲ್ಲಿ ಅವ್ವ, ಕವಿತೆಗಳಲ್ಲಿ ಅವ್ವ, ಕಥೆಗಳಲ್ಲಿ ಅವ್ವ ಮುಂತಾದ ಜನಪ್ರಿಯ ಸರಣಿಯ ಮುಂದುವರಿದ ಭಾಗ ಇದು. ಇಲ್ಲಿಯೂ ಸಂಗ್ರಹಯೋಗ್ಯವಾದ ಪ್ರಯತ್ನ ಎದ್ದುಕಾಣುತ್ತದೆ.

ಜಾನಪದ ಎನ್ನುವುದೊಂದು ಕಣಜ. ಆ ಕಣಜದಿಂದ ಅವ್ವ ಎಂಬ ಬಿಳಿಮುತ್ತುಗಳನ್ನು ಮಾತ್ರ ಸಂಗ್ರಹಿಸುವುದು ತುಸು ತ್ರಾಸಿನ ಕೆಲಸ. ಇಲ್ಲಿ ಹಂತಿಪದ, ತ್ರಿಪದಿ, ಕೋಲಾಟದ ಪದ, ಸೋಬಾನೆ, ಲಾವಣಿ, ಜೋಗುಳ ಇತ್ಯಾದಿ ಪ್ರಕಾರಗಳಲ್ಲಿ ಅವ್ವನ ಕುರಿತಾದ ಎಲ್ಲ ರಚನೆಗಳನ್ನೂ ಸಂಗ್ರಹಿಸಲಾಗಿದೆ. ಸಂಗ್ರಹದ ಅಂತ್ಯದಲ್ಲಿ ಕರ್ನಾಟಕದ ಯಾವ ಭಾಗದಲ್ಲಿ ಅವು ಹೆಚ್ಚು ಪ್ರಚಲಿತದಲ್ಲಿವೆ ಎಂಬ ವಿವರಗಳನ್ನೂ ನೀಡಲಾಗಿದೆ.

ಅವ್ವ ಪದವೇ ಅಪ್ಯಾಯವಾದುದು. ಹೃದಯಾಂತರಾಳದಲ್ಲಿ ಏಳುವ ಹಲವಾರು ಅಲೆಗಳಿಗೆ ಅವ್ವನಪ್ಪುಗೆಯೇ ಸಮಾಧಾನ ನೀಡಬಲ್ಲದು. ಈ ಪುಸ್ತಕಗಳನ್ನು ಓದುತ್ತ ಹೋದಂತೆ, ಎದೆಗಾನಿಸಿಕೊಳ್ಳುವ ಹಲವಾರು ಚಣಗಳನ್ನು ಇಲ್ಲಿಯ ರಚನೆಗಳು ಎತ್ತಿಕೊಡುತ್ತವೆ.

ಒಂದೆಡೆ ಪ್ರೀತಿ, ತ್ಯಾಗದ ಪ್ರತೀಕವಾಗುವ ಈ ಅವ್ವ, ತನ್ನ ಮಕ್ಕಳಿಗಾಗಿಯೇ ಎಂಬ ಮೋಹದಲ್ಲಿ ವಂಚಿಸುವ, ವಂಚನೆಗೊಳಗಾಗುವ ಕಥೆಗಳೂ ಇವೆ. ತಾಯಿ ಮತ್ತು ಮಲತಾಯಿ ಚಿತ್ರಣ ಇರುವಲ್ಲಿ ಈ ವ್ಯತಿರಿಕ್ತಗಳು ಢಾಳವಾಗಿದ್ದರೂ ಕೊನೆಗೆ ಅವು ಒಳಿತು ಮತ್ತು ಕೆಡುಕಿಗೆ ಪ್ರತಿಮೆಗಳಾಗಿಯೇ ಉಳಿಯುತ್ತವೆ. ಮಮತೆ, ಪ್ರೀತಿಯೊಟ್ಟಿಗೆ ಮಕ್ಕಳ ವ್ಯಾಮೋಹವೂ ಸ್ಥಾಯಿಯಾಗಿ ನಿಲ್ಲುತ್ತದೆ.

ಭಾಷೆಗೆ, ಪದಗಳಿಗೆ ನಿಲುಕದ ಭಾವತೀವ್ರತೆಯನ್ನಂತೂ ಈ ಓದು ನೀಡುತ್ತದೆ. ಅದೇ ಕಾರಣಕ್ಕೆ ಅವ್ವ ಮಾಲಿಕೆಯ ಈ ಐದನೆಯ ಪುಸ್ತಕವು ಮನೆಯ ರ‍್ಯಾಕ್‌ ಅನ್ನು ಅಲಂಕರಿಸುತ್ತದೆ. ಆಗಾಗ ಎದೆಯ ಮೇಲೆ, ದಿಂಬಿನಡಿ ವಿರಮಿಸುತ್ತದೆ. ಥೇಟ್‌ ಅವ್ವನ ಬಿಸುಪನ್ನು ನೀಡುತ್ತ...

‘ಗಂಡಿರಲಿ, ಹೆಣ್ಣಿರಲಿ. ಎಲ್ಲರಲ್ಲೂ ತಾಯ್ತನದ ಭಾವವನ್ನು ತಾಯಿಯೇ ತುಂಬಿರುತ್ತಾಳೆ. ನಂತರದ ದಿನಗಳಲ್ಲಿ ಬದುಕಿನ ಅನೇಕ ಆವರಣಗಳು ಆ ಅಂತಃಕರಣವನ್ನು ಮೆಟ್ಟಿ ಮಾತೃತ್ವವನ್ನು ಮರೆ ಮಾಡುತ್ತವೆ. ಎಲ್ಲರೊಳಗೂ ಸುಪ್ತವಾಗಿರುವ ಮಾತೃತ್ವವನ್ನು ಉದ್ದೀಪಿಸುವುದು ಅವ್ವ ಪುಸ್ತಕ ಮಾಲೆಯ ಉದ್ದೇಶ’ ಎನ್ನುವುದು ಪ್ರಕಾಶಕರು ಹೇಳಿರುವ ಮಾತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry