ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನೆಂಟರ ಹುಡುಗರಿಗೆ ‘ಹದಿನಂಟು’ ಪುಸ್ತಕ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಡಾ.ಪಿ.ವಿ. ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ ಅವರು ಜೊತೆಯಾಗಿ ಬರೆದಿರುವ ಪುಸ್ತಕ ‘ಹದಿನಂಟು: ಏನಿಲ್ಲ.. ಏನುಂಟು?!’. ಭಂಡಾರಿ ಅವರು ಉಡುಪಿ ಜಿಲ್ಲೆಯ ಪರ್ಕಳದವರು, ವೃತ್ತಿಯಲ್ಲಿ ಮನೋವೈದ್ಯರು. ಹರೀಶ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೌನ್ಸೆಲಿಂಗ್‌ ತಜ್ಞರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಇದು ಹದಿನಾರು ಬಿಡಿ ಬರಹಗಳ ಗುಚ್ಛ. ಇಲ್ಲಿರುವ ಲೇಖನಗಳನ್ನು ಒಂದಾದ ನಂತರ ಒಂದರಂತೆ ಓದಿಕೊಳ್ಳಬೇಕು ಎಂದೇನೂ ಇಲ್ಲ. ಹದಿಹರೆಯದ ಹುಡುಗ – ಹುಡುಗಿಯರನ್ನು ಮತ್ತೆ ಆ ವಯಸ್ಸಿನವರ ಪಾಲಕರನ್ನು ಉದ್ದೇಶಿಸಿ ಬರೆದಂತೆ ಇರುವ ಈ ಬರಹಗಳನ್ನು ಬಿಡಿಯಾಗಿಯೂ ಓದಿಕೊಳ್ಳಬಹುದು. ಬರಹಗಳೆಲ್ಲವೂ ಮನೋವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದವು. ಆದರೆ ಯಾವ ಬರಹವೂ ಅಕಾಡೆಮಿಕ್ ಭಾಷೆಯಿಂದ ಭಾರವಾಗದಂತೆ ನೋಡಿಕೊಳ್ಳಲು, ಓದು ಎಂಬುದು ಕಠಿಣವಾಗದಂತೆ ನೋಡಿಕೊಳ್ಳಲು ಲೇಖಕರು ಹೆಚ್ಚಿನ ಕಾಳಜಿ ತೋರಿದ್ದಾರೆ.

ಲೇಖನಗಳನ್ನು ಕಥನದ ರೂಪದಲ್ಲಿ ಬರೆದಿರುವುದು ಇಲ್ಲಿ ಉಲ್ಲೇಖಿಸಬೇಕಾದ ಅಂಶ. ಹದಿಹರೆಯದವರ ವರ್ತನೆ, ಅಂತರ್ಜಾಲದಲ್ಲಿ ಜಾಲಾಡುವಾಗ ವಹಿಸಬೇಕಾದ ಎಚ್ಚರಗಳು, ಮಾದಕ ವಸ್ತುಗಳು, ಪರೀಕ್ಷಾ ಭಯ, ಇಂಗ್ಲಿಷ್‌ ಮೇಲಿನ ಭಯ, ಪ್ರೇಮ... ಇವೆಲ್ಲ ಈ ಪುಸ್ತಕದ ವಸ್ತುಗಳು.

ಬರಹಗಳ ನಿರೂಪಣಾ ಶೈಲಿ ಆಪ್ತವೆನಿಸುವಂತೆ ಇದ್ದರೂ, ಭಾಷೆಯನ್ನು ಬಳಸಿಕೊಂಡಿರುವ ರೀತಿ ಕೆಲವೆಡೆ ಓದುಗರಲ್ಲಿ ಸಮಾಧಾನ ತಾರದೆ ಇರಬಹುದು. ಈ ವಿಚಾರವಾಗಿ ಲೇಖಕರು ಒಂದು ಮಾತು ಹೇಳಿದ್ದಾರೆ; ‘ಭಾಷೆ ಮತ್ತು ತಂತ್ರವನ್ನು ಸಾಹಿತ್ಯದ ದೃಷ್ಟಿಯಿಂದ ನೋಡಿದರೆ ಅನೇಕ ಲೋಪದೋಷಗಳು ಕಂಡುಬರಬಹುದು.

ಆದರೆ ಇಲ್ಲಿ ಸಾಹಿತ್ಯ ರಚನೆ ಮತ್ತು ಭಾಷೆ ನಮಗೆ ವಿಷಯವನ್ನು ತಲುಪಿಸಲು ಒಂದು ಮಾಧ್ಯಮ ಮತ್ತು ಸಾಧನವೇ ಹೊರತು ನಮ್ಮ ಸಾಹಿತ್ಯ ಕೃಷಿಯ ಭಾಗವಲ್ಲ’ ಎನ್ನುವುದು ಆ ಮಾತು. ಆದರೆ, ವಿಷಯವನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸಲು ದೋಷವಿಲ್ಲದ ಭಾಷೆ ಅನಿವಾರ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT