ಆಮಿಷ: ಧ್ವನಿಮುದ್ರಿಕೆ ಬಹಿರಂಗ

7

ಆಮಿಷ: ಧ್ವನಿಮುದ್ರಿಕೆ ಬಹಿರಂಗ

Published:
Updated:
ಆಮಿಷ: ಧ್ವನಿಮುದ್ರಿಕೆ ಬಹಿರಂಗ

ಬೆಂಗಳೂರು: ಕಾಂಗ್ರೆಸ್‌ ಶಾಸಕರಾದ ಬಿ.ಸಿ. ಪಾಟೀಲ ಹಾಗೂ ಶಿವರಾಮ್ ಹೆಬ್ಬಾರ್‌ ಅವರನ್ನು ಸೆಳೆಯುವ ಯತ್ನವಾಗಿ ಬಿಜೆಪಿ ಮುಖಂಡರು ಕರೆ ಮಾಡಿದ್ದರು ಎನ್ನಲಾದ ಧ್ವನಿಮುದ್ರಿಕೆಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಹರಿದಾಡಿದವು.

ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಅವರಿಗೆ ಯಡಿಯೂರಪ್ಪ, ಶ್ರೀರಾಮುಲು ಹಾಗೂ ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಮುರಳೀಧರ ರಾವ್‌ ಕರೆ ಮಾಡಿ, ₹ 25 ಕೋಟಿ ಹಣದ ಆಮಿಷವೊಡ್ಡಿದ್ದಾರೆ ಎನ್ನಲಾದ ಮಾಹಿತಿ ಧ್ವನಿ ಮುದ್ರಿಕೆಯಲ್ಲಿದೆ.

ಯಡಿಯೂರಪ್ಪ ಅವರಿಗೆ ‘ಅಣ್ಣಾ’ ಎಂದೇ ಸಂಬೋಧಿಸಿರುವ ಬಿ.ಸಿ.ಪಾಟೀಲ, ‘ಬಸ್‌ನಲ್ಲಿದ್ದೀನಿ ಅಣ್ಣ, ಕೊಚ್ಚಿಗೆ ಹೋಗ್ತಿದ್ದೀನಿ. ಮುಂಚೆಯೇ ಹೇಳಿದ್ದಿದ್ದರೆ ಚೆನ್ನಾಗಿತ್ತು’ ಎಂದು ಹೇಳುತ್ತಾರೆ.

‘ನನ್ನ ಬಗ್ಗೆ ವಿಶ್ವಾಸ ಇದೆ ತಾನೆ. ನಿನಗೆ ಸಚಿವ ಸ್ಥಾನ ನೀಡುತ್ತೇನೆ. ಏನಾದರೂ ಸಬೂಬು ಹೇಳಿ ಹಿಂದಕ್ಕೆ ಬಂದು ಬಿಡು. ನಿನ್ನೊಂದಿಗೆ ಇರುವವರನ್ನು ಕರೆದುಕೊಂಡು ಬಾ. ನಿನಗೇನು ಬೇಕೆಂದು ಶ್ರೀರಾಮುಲುಗೆ ಫೋನ್ ಮಾಡಿ ಹೇಳು’ ಎಂದು ಯಡಿಯೂರಪ್ಪ ಹೇಳುತ್ತಾರೆ.

ಆನಂತರ ಕರೆ ಮಾಡಿದ ಶ್ರೀರಾಮುಲು, ‘ಎಷ್ಟು ಹಣ ಅಪೇಕ್ಷಿಸುತ್ತೀರಾ ಎಂದು ಹೇಳಿ. ₹25 ಕೋಟಿ ಕೊಡುತ್ತೇವೆ ಬನ್ನಿ. ನಿಮ್ಮ ಜೊತೆಗೆ ಬರುವವರಿಗೆ ₹15 ಕೋಟಿ ಕೊಡುತ್ತೇವೆ’ ಎಂಬ ಆಮಿಷವೊಡ್ಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಮುಖಂಡರು ‘ಧ್ವನಿಮುದ್ರಿಕೆ ನಕಲಿ’ ಎಂದು ಹೇಳಿದ್ದಾರೆ.

ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‌ ಅವರ ಪತ್ನಿ ವನಜಾಕ್ಷಿ ಅವರಿಗೆ ಯಡಿಯೂರಪ್ಪನವರ ಎರಡನೇ ಮಗ ವಿಜಯೇಂದ್ರ ಹಾಗೂ ಪುಟ್ಟಸ್ವಾಮಿ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ ಎಂಬ ಸಂಭಾಷಣೆಗಳೂ ಸೋರಿಕೆಯಾಗಿವೆ.

‘ನಿಮ್ಮ ಮನೆಯವರಿಗೆ ₹ 15 ಕೋಟಿ ಅಥವಾ ಸಚಿವ ಸ್ಥಾನದೊಂದಿಗೆ ₹ 5 ಕೋಟಿ ಕೊಡುತ್ತೇವೆ’ ಎಂಬ ಆಮಿಷವೊಡ್ಡಿದ್ದಾರೆ. ಮಗನ ಮೇಲಿರುವ ಅಕ್ರಮ ಗಣಿ ಪ್ರಕರಣಗಳಿಂದ ಮುಕ್ತಿ ಕೊಡಿಸುವುದಾಗಿಯೂ ಅವರು ಆಶ್ವಾಸನೆ ನೀಡುತ್ತಾರೆ.

‘ಯಡಿಯೂರಪ್ಪ ಅವರು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ. ನನ್ನ ಮೇಲೆಯೂ ಸಾಕಷ್ಟು ಕೇಸ್‌ಗಳಿವೆ. ಎಲ್ಲವನ್ನೂ ನಿರ್ವಹಿಸಬಹುದು. ನಿಮ್ಮ ಮನೆಯವರೇ ಸಚಿವರಾಗ್ತಾರಲ್ಲಾ, ಸರ್ಕಾರವೇ ನಮ್ಮದು. ಯಾಕೆ ಯೋಚನೆ ಮಾಡ್ತೀರಿ?’ ಎಂದೂ ವಿಜಯೇಂದ್ರ ಭರವಸೆ ಕೊಟ್ಟಿರುವುದು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry