ಭಾರತ–ಕೊರಿಯಾ ಪಂದ್ಯ ಡ್ರಾ

7

ಭಾರತ–ಕೊರಿಯಾ ಪಂದ್ಯ ಡ್ರಾ

Published:
Updated:
ಭಾರತ–ಕೊರಿಯಾ ಪಂದ್ಯ ಡ್ರಾ

ಡಾಂಗೆ ಸಿಟಿ, ಕೊರಿಯಾ: ಅಂತಿಮ ಕ್ವಾರ್ಟರ್‌ನಲ್ಲಿ ಮಿಂಚಿನ ಆಟ ಆಡಿದ ಮುಂಚೂಣಿ ವಿಭಾಗದ ಆಟಗಾರ್ತಿ ಲಾಲ್ರೆಮ್‌ಸಿಯಾಮಿ ಅವರು ಐದನೇ ಏಷ್ಯಾ ಚಾಂಪಿಯನ್ಸ್‌ ಟ್ರೋಫಿ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಭಾರತವನ್ನು ಸೋಲಿನಿಂದ ಪಾರು ಮಾಡಿದರು.

ಶನಿವಾರ ನಡೆದ ರೌಂಡ್‌ ರಾಬಿನ್‌ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ 1–1ರಿಂದ ಆತಿಥೇಯ ಕೊರಿಯಾ ವಿರುದ್ಧ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಸುನಿತಾ ಲಾಕ್ರಾ ಬಳಗ ಅಜೇಯವಾಗಿ ಫೈನಲ್‌ ಪ್ರವೇಶಿಸಿತು.

ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸುನಿತಾ ಬಳಗ ಕೊರಿಯಾ ವಿರುದ್ಧ ಸೆಣಸಲಿದೆ.

ಮೊದಲ ಕ್ವಾರ್ಟರ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡಕ್ಕೆ ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಡ್ರ್ಯಾಗ್‌ಫ್ಲಿಕ್‌ ಪರಿಣತೆ ಗುರ್ಜಿತ್‌ ಕೌರ್‌ ಬಾರಿಸಿದ ಚೆಂಡನ್ನು ಆತಿಥೇಯ ಗೋಲ್‌ಕೀಪರ್‌ ತಡೆದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಹೊಂದಿರುವ ಕೊರಿಯಾ ತಂಡ ಎರಡನೇ ಕ್ವಾರ್ಟರ್‌ನ ಶುರುವಿನಲ್ಲಿ ಖಾತೆ ತೆರೆಯಿತು. ಸೆವುಲ್‌ ಕಿ ಚೆವೊನ್‌, ಭಾರತದ ಗೋಲ್‌ಕೀಪರ್‌ ಸವಿತಾ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಮೂರನೇ ಕ್ವಾರ್ಟರ್‌ ಗೋಲು ರಹಿತವಾಗಿತ್ತು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ಮಿಂಚಿದರು. ಪೆನಾಲ್ಟಿ ಕಾರ್ನರ್‌ನಲ್ಲಿ ಗುರ್ಜಿತ್‌ ಬಾರಿಸಿದ ಚೆಂಡನ್ನು ಕೊರಿಯಾ ಗೋಲ್‌ಕೀಪರ್‌ ಅಮೋಘ ರೀತಿಯಲ್ಲಿ ತಡೆದರು. ಅವರ ಕಾಲಿಗೆ ತಾಗಿದ ಚೆಂಡು ಗೋಲುಪೆಟ್ಟಿಗೆ ಸನಿಹದಲ್ಲಿ ಬಿತ್ತು. ಕೂಡಲೇ ಚೆಂಡಿನತ್ತ ಧಾವಿಸಿದ ಲಾಲ್ರೆಮ್‌ಸಿಯಾಮಿ ಅದನ್ನು ಚುರುಕಾಗಿ ಗುರಿಯತ್ತ ತಳ್ಳಿದರು.

54ನೇ ನಿಮಿಷದಲ್ಲಿ ಕೊರಿಯಾ ತಂಡಕ್ಕೆ ಮುನ್ನಡೆಯ ಗೋಲು ದಾಖಲಿಸುವ ಉತ್ತಮ ಅವಕಾಶ ಲಭ್ಯವಾಗಿತ್ತು. ಎದುರಾಳಿ ಆಟಗಾರ್ತಿಯ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್‌ ಸ್ವಾತಿ ವಿಫಲಗೊಳಿಸಿದರು. ನಂತರದ ಅವಧಿಯಲ್ಲಿ ಎರಡೂ ತಂಡಗಳು ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಆಟ ಆಡಿದವು. ಹೀಗಾಗಿ ಯಾರಿಗೂ ಗೆಲುವಿನ ಗೋಲು ದಾಖಲಿಸಲು ಆಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry