ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರೆಸ್ಟ್‌ ಏರಿದ ಅರಣ್ಯ ರಕ್ಷಕ ವಿಕ್ರಂ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ರಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ವಿಕ್ರಂ (25) ವಿಶ್ವದ ಅತಿ ಎತ್ತರದ ಶಿಖರವಾದ ಎವರೆಸ್ಟ್‌ ಏರುವ ಮೂಲಕ ಕನ್ನಡದ ಹಿರಿಮೆ ಹಾಗೂ ಇಲಾಖೆಯ ಗೌರವ ಹೆಚ್ಚಿಸಿದ್ದಾರೆ.

ಇದೇ ಏಪ್ರಿಲ್‌ನಲ್ಲಿ ನೇಪಾಳದ ಕಠ್ಮಂಡುಗೆ ತೆರಳಿದ್ದ ಅವರು, ಟಿಬೆಟ್‌ನ ಲಾಸಾದಿಂದ ಶೇರ್ಪಾಗಳ ಸಹಕಾರದೊಂದಿಗೆ ಎವರೆಸ್ಟ್‌ ಪರ್ವತ ಏರಲು ಆರಂಭಿಸಿ, ಮೇ 16ರಂದು ಒಟ್ಟು 8,850 ಮೀಟರ್‌ (29,035 ಅಡಿ ) ಏರಿ ಶಿಖರದ ಮೇಲೆ ರಾಷ್ಟ್ರಧ್ವವನ್ನು ನೆಟ್ಟರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಜಯಪುರ ಗ್ರಾಮದ ಚಂದ್ರನಾಯಕ್‌ ಮತ್ತು ಅನಸೂಯಾಬಾಯಿ ಅವರ ಪುತ್ರರಾದ ವಿಕ್ರಂ  ಸ್ನಾತಕೋತ್ತರ ಪದವೀಧರರು. ಅರಣ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2015ರಲ್ಲಿ ಅರಣ್ಯ ರಕ್ಷಕನಾಗಿ ಕರ್ತವ್ಯ ಆರಂಭಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆ ಅಂದಿನ ನಿರ್ದೇಶಕರಾಗಿದ್ದ ಮಣಿಕಂಠನ್‌ (ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ) ಅವರಿಗೆ ಎವರೆಸ್ಟ್‌ ಶಿಖರ ಏರುವ ಬಯಕೆ ಹೊಂದಿರುವುದಾಗಿ ವಿಕ್ರಂ ಹೇಳಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಮಣಿಕಂಠನ್‌ ಎವರೆಸ್ಟ್ ಪರ್ವತಾರೋಹಣಕ್ಕೆ ಬೇಕಾದ ಎಲ್ಲ ವೆಚ್ಚವನ್ನು ದಾನಿಗಳಿಂದ ಸಂಗ್ರಹಿಸಿ ನೀಡಿದ್ದರು. ಜೊತೆಗೆ, ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಕೊಡಿಸಿದ್ದರು. ಅಲ್ಲದೆ, ಕುಂದಾಪುರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಡಾರ್ಜಿಲಿಂಗ್‌ನ ಪರ್ವತಾರೋಹಣ ತರಬೇತಿ ಕೇಂದ್ರದಲ್ಲಿ 2016ರಿಂದ 17ರ ಮಾರ್ಚ್‌ ವರೆಗೆ ತರಬೇತಿಯನ್ನೂ ಕೊಡಿಸಿದ್ದರು.

ಶಿಖರದ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದರ ಜತೆಗೆ ತಮಗೆ ಸಹಕಾರ ನೀಡಿದ ದಿವಂಗತ ಮಣಿಕಂಠನ್‌, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಅಬ್ದುಲ್‌ ಕಲಾಂ ಅವರ ಭಾವಚಿತ್ರಗಳನ್ನಿಟ್ಟು ಗೌರವ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT