ಮಂಗಳವಾರ, ಮಾರ್ಚ್ 2, 2021
26 °C
ಪರಿಸರ ರಕ್ಷಣೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಮಾನವ ಸರಪಳಿ

ಮರಗಳ ನಾಶ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಗಳ ನಾಶ: ಪ್ರತಿಭಟನೆ

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಇದೇ 9ರಂದು ಖಾಸಗಿ ಕಂಪನಿಗಳು ಮರಗಳ ಮಾರಣಹೋಮ ನಡೆಸಿರುವುದನ್ನು ಖಂಡಿಸಿ ಸುಮಾರು 200ಕ್ಕೂ ಹೆಚ್ಚು ನಾಗರಿಕರು ಮತ್ತು ಪರಿಸರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಬೆಳ್ಳಂದೂರಿನಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದರು.

ಬೆಳ್ಳಂದೂರು, ಇಬ್ಬಲೂರು, ಸನ್‌ಸಿಟಿ ಎಚ್‌.ಎಸ್‌.ಆರ್‌ ಬಡಾವಣೆ, ವೈಟ್‌ಫೀಲ್ಡ್‌, ಕಾಕ್ಸ್‌ಟೌನ್‌, ಹೆಬ್ಬಾಳ ಮತ್ತು ಜೆ.ಪಿ ನಗರದ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಹೊರವರ್ತುಲ ರಸ್ತೆಯಲ್ಲಿ ಹೀಗೆ ಮರಗಳನ್ನು ಕಡಿಯುತ್ತಿರುವುದು ಇದು ನಾಲ್ಕನೇ ಪ್ರಕರಣವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಮರಗಳನ್ನು ಕಡಿಯಲಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತ ವಿಜಯ ನಿಶಾಂತ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದೆ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಈ ಪ್ರತಿಭಟನೆಯ ಮೂಲಕ ನೀಡುತ್ತಿದ್ದೇವೆ. ಮರಗಳ ರಕ್ಷಣೆಗೆ ನಾವು ಕಟಿಬದ್ಧರಾಗಿದ್ದೇವೆ. ಅವುಗಳ ಮಾರಣಹೋಮಕ್ಕೆ ಬಿಡುವುದಿಲ್ಲ’ ಎಂದು ಬೆಳ್ಳಂದೂರು ನಿವಾಸಿ ಸೊನಾಲಿ ಸಿಂಗ್‌ ಹೇಳಿದರು.

ಹಾಡಹಗಲೇ ಇಂತಹ ಕೃತ್ಯಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ‘ಎಫ್‌ಐಆರ್ ದಾಖಲಿಸಿರುವುದು ಮತ್ತು ಜಾಹೀರಾತು ಫಲಕಗಳನ್ನು ಅರಣ್ಯ ಇಲಾಖೆ ತೆಗೆದು ಹಾಕಿರುವುದು ಬಿಟ್ಟರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಅವರು ಕೈಗೊಳ್ಳುತ್ತಿಲ್ಲ’ ಎಂದು ಮುಕುಂದ ಕುಮಾರ್‌ ಹೇಳಿದರು.

‘ಮರ ಕಡಿಯುತ್ತಿರುವ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ. ಪರಿಸರ ರಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಳ್ಳಬೇಕು’ ಎಂದು ಸುನಿಲ್‌ ರೆಡ್ಡಿ ಕರೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.