ಗುರುವಾರ , ಫೆಬ್ರವರಿ 25, 2021
29 °C

‘ನಾವು ಪ್ರಥಮದರ್ಜೆ ಕ್ರಿಮಿನಲ್‌ಗಳು‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಾವು ಪ್ರಥಮದರ್ಜೆ ಕ್ರಿಮಿನಲ್‌ಗಳು‘

ಬೆಂಗಳೂರು: ದೇಹ ಮಾರಿಕೊಂಡು ಕೆರೆ ಕಟ್ಟೆ ಕಟ್ಟಿಸಿದ ಹೆಣ್ಣುಮಕ್ಕಳ ಉದಾಹರಣೆಗಳು ನಮ್ಮಲ್ಲಿವೆ. ಆದರೆ, ಅಂಥ ಕೆರೆಗಳನ್ನು ಅತಿಕ್ರಮಿಸಿ ಮಾರುತ್ತಿರುವವರನ್ನು ಇಂದು ನೋಡುತ್ತಿದ್ದೇವೆ ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪ ರೆಡ್ಡಿ ವಿಷಾದಿಸಿದರು.

1980ರ ಸುಮಾರಿಗೆ ಬೆಂಗಳೂರಿನ ಬೆಳ್ಳಂದೂರು ಕೆರೆಗೆ 80 ಪ್ರಬೇಧಗಳ 10 ಸಾವಿರ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬರುತ್ತಿದ್ದವು. ಈಗ ಎಲ್ಲವನ್ನೂ ಹಾಳುಮಾಡಿದ್ದೇವೆ. 550 ಜಾತಿಯ ವೃಕ್ಷಸಮೂಹ ಸ್ವಾಭಾವಿಕವಾಗಿ ಬೆಳೆದಿದ್ದ ಬೆಂಗಳೂರನ್ನು ಯದ್ವಾತದ್ವಾ ಬೆಳೆಯಲು ಬಿಡಬಾರದಿತ್ತು. ವಿಶ್ವದಲ್ಲೇ ಅತ್ಯುತ್ತಮ ಹವಾಮಾನವನ್ನು ಹೊಂದಿದ್ದ ಮಹಾನಗರದ ಪರಿಸರವನ್ನು ನಾಶ ಮಾಡಿರುವ ನಾವು ಪ್ರಥಮ ದರ್ಜೆಯ ಕ್ರಿಮಿನಲ್‌ಗಳು ಎಂದು ಕಟುವಾಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ಸ್ವಾತಂತ್ರ್ಯಾನಂತರ ಪ್ರಾಣವಾಯು, ಜೀವಜಲ ಹಾಗೂ ಅನ್ನವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದರು. ಈ ಮೂರನ್ನೂ ಸ್ವಾತಂತ್ರ್ಯಾನಂತರ ಕಲುಷಿತಗೊಳಿಸಿದ್ದೇವೆ ಎಂದರು.

ಹೆಂಡತಿಯ ಪಾಠ: ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ‘ಸೈಟು ಪಡೆಯಲು ಅರ್ಜಿ ಕೊಡಿ’ ಎನ್ನುವ ಅಧಿಕಾರಿಗಳ ಪ್ರಸ್ತಾಪಕ್ಕೆ,  ‘ಈಗ ಮುಖ್ಯಮಂತ್ರಿಗಳ ಬಳಿ ನಿಮಗೆ ಮರ್ಯಾದೆ ಇದೆ. ಸೈಟು ಬೇಡ, ಮರ್ಯಾದೆಯೇ ಇರಲಿ’ ಎಂದು ಹೆಂಡತಿ ಹೇಳಿದ್ದನ್ನು ಅವರು ನೆನಪಿಸಿಕೊಂಡರು. ಮನೆಯಲ್ಲಿ ದೊರೆತ ಇಂಥ ನೈತಿಕ ಬೆಂಬಲ ನನ್ನ ವೃತ್ತಿಜೀವನದಲ್ಲಿನ ನನ್ನ ಬೆಳವಣಿಗೆಗೆ ಕಾರಣವಾಯಿತು ಎಂದರು.

ಅರಣ್ಯ ಇಲಾಖೆಯಲ್ಲಿನ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಮೂರೂವರೆ ದಶಕದ ವೃತ್ತಿಜೀವನದಲ್ಲಿ ಹೆಂಡತಿಗೆ ಒಂದು ಗ್ರಾಂ ಚಿನ್ನವನ್ನೂ ಕೊಡಿಸದ ಸೋಜಿಗದ ಬಗ್ಗೆ ಪ್ರೇಕ್ಷಕರೊಬ್ಬರು ಪ್ರಸ್ತಾಪಿಸಿದಾಗ, ‘ಅದರಲ್ಲಿ ನನ್ನ ದೊಡ್ಡಸ್ತಿಕೆಯೇನೂ ಇಲ್ಲ. ಆಕೆ ಚಿನ್ನಕ್ಕಾಗಿ ಒತ್ತಾಯಿಸಲಿಲ್ಲ ಅಷ್ಟೇ’ ಎಂದರು.

‘ನಮ್ಮ ಮಕ್ಕಳಿಗೆ ಕಾರು–ಮೊಬೈಲ್‌ಗಳ ಹೆಸರು ಗೊತ್ತಿದೆ. ಆದರೆ, ಮರಗಳ ಹೆಸರು ಗೊತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ನೈತಿಕತೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು.

ಕಾರಂತರ ಮೆಚ್ಚುಗೆ: ಅರಣ್ಯೀಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡದಲ್ಲಿ ಮಾಡಿದ ಕೆಲಸ ಶಿವರಾಮ ಕಾರಂತರ ಗಮನಕ್ಕೆ ಬಂದು, ‘ನೀನೇನೊ ಒಳ್ಳೆಯ ಕೆಲಸ ಮಾಡಿರುವೆಯಂತೆ. ಅದನ್ನು ನಾನು ನೋಡಬೇಕು’ ಎಂದು ಮೂರು ದಿನಗಳ ಕಾಲ ತಮ್ಮ ಜೊತೆಗಿದ್ದು ಕಾಡು ಸುತ್ತಿದ್ದನ್ನು ನೆನಪಿಸಿಕೊಂಡರು. ‘ನಮ್ಮೆಲ್ಲರಿಗೂ ಒಂದೇ ಭವಿಷ್ಯ’ ಕೃತಿಯಲ್ಲಿ ನನ್ನ ಕೆಲಸದ ಬಗ್ಗೆ ಕಾರಂತರು ಎರಡು ಪುಟಗಳಷ್ಟು ಬರೆದುದು ನನಗೆ ಸಂದ ಅಮೂಲ್ಯ ಗೌರವ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.