ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರೀತಿಯ ಅಲ್ಲಮಪ್ರಭು ಸ್ವಾಮೀಜಿ

ಮಠದ ಆವರಣದಲ್ಲಿ ಬೊನ್ಸಾಯ್‌ ಬೆಳೆಸುವ ಪ್ರವೃತ್ತಿ l ವಿವಿಧ ಆಕೃತಿಯ ಆಕರ್ಷಕ ಗಿಡಗಳು
Last Updated 20 ಮೇ 2018, 6:13 IST
ಅಕ್ಷರ ಗಾತ್ರ

ಶ್ರೀಮಠದ ಆವರಣದಲ್ಲಿ ಅಂದವಾಗಿ ಜೋಡಿಸಿಟ್ಟಿರುವ ದೊಡ್ಡ ಮರಗಳ ಪುಟ್ಟ ಪ್ರತಿರೂಪದಂತಿದ್ದು ಭಕ್ತರನ್ನು ಸೆಳೆಯುವ ಕುಬ್ಜ ಬೊನ್ಸಾಯ್ ಗಿಡಗಳ ಸೊಬಗು, ಈ ಕಲಾತ್ಮಕ ಗಿಡಗಳನ್ನು ಪೋಷಿಸುವ ಸ್ವಾಮೀಜಿ– ಇವು ಕಾಣಸಿಗುವುದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದಲ್ಲಿ.

ಮಠಕ್ಕೆ ಭೇಟಿ ನೀಡುವ ಭಕ್ತರು ಬೊನ್ಸಾಯ್ ಗಿಡಗಳ ಸೌಂದರ್ಯಕ್ಕೆ ಮರುಳಾಗದೇ ಇರಲಾರರು. ಅಲಂಕಾರಕ್ಕಾಗಿ ಈ ಗಿಡಗಳನ್ನು ಎಲ್ಲಿಂದಲೋ ಖರೀದಿಸಿ ತಂದು ಇಟ್ಟಿಲ್ಲ. ಶ್ರೀಮಠದ ಪೀಠಾಧಿಕಾರಿ ಅಲ್ಲಮಪ್ರಭು ಸ್ವಾಮೀಜಿ ಅವರೇ ಖುದ್ದು ಬೆಳೆಸಿರುವ ಗಿಡಗಳಿವು. ಶ್ರೀಮಠಕ್ಕೆ ಭೇಟಿ ನೀಡುವ ಆಸಕ್ತರಿಗೆ ಈ ಗಿಡಗಳನ್ನು ಬೆಳೆಸುವ ಪರಿಯನ್ನು ಅವರು ತಿಳಿಸಿಕೊಡುತ್ತಾರೆ.

ಅಲ್ಲಮಪ್ರಭು ಸ್ವಾಮೀಜಿ ಅವರು ಬೆಳೆದಿರುವ ಅತ್ಯಾಕರ್ಷಕವಾದ ಬೊನ್ಸಾಯ್ ಸಸ್ಯಗಳು

ಬೊನ್ಸಾಯ್ ಮರಗಳು ಸೌಂದರ್ಯಕ್ಕೆ ಹೆಸರುವಾಸಿ. ಇದು ಮಾನವನ ಕೃತಕ ಸೃಷ್ಟಿ. ಬೆಳೆಸುವವನ ಸೃಜನಶೀಲತೆಗೆ ತಕ್ಕಂತೆ ಇವು ಆಕಾರ ಪಡೆಯುತ್ತವೆ. ಬೃಹದಾಕಾರವಾಗಿ ಬೆಳಯುವ ಮರಗಳನ್ನು ಅಂಗೈ ಅಳತೆಗೆ ಮೊಟಕುಗೊಳಿಸುವ ಬೊನಾಯ್ಸ್‌ ಕಲೆ ಅಲ್ಲಮಪ್ರಭು ಸ್ವಾಮೀಜಿ ಅವರಿಗೆ ಕರಗತವಾಗಿದೆ.

ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ

ಮಠ ಗಡಿನಾಡಿನ ‘ಕನ್ನಡದ ಗುಡಿ’ ಎಂದೇ ಪ್ರಸಿದ್ಧಿ. ಶ್ರೀಮಠದ ಪೀಠಾಧಿಕಾರಿ ಅಲ್ಲಮಪ್ರಭು ಸ್ವಾಮೀಜಿ ಧರ್ಮ ಪ್ರಸಾರದೊಂದಿಗೆ ಕನ್ನಡ ಕೈಂಕರ್ಯವನ್ನೂ ಕೈಗೊಂಡು, ಕನ್ನಡ ನಾಡು, ನುಡಿ, ನೆಲ, ಜಲ, ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ 35ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ವಿದೇಶಿ ಮತ್ತು ದೇಶೀಯ ನಾಣ್ಯಗಳ ಸಂಗ್ರಹ, ಅಂಚೆ ಚೀಟಿ ಮತ್ತು ಕನ್ನಡಪರವಾದ ಹಳೆಯ ದಾಖಲೆಗಳನ್ನೂ ಸಂಗ್ರಹಿಸುವ ಹವ್ಯಾಸ ಹೊಂದಿರುವ ಸ್ವಾಮೀಜಿ ಅವರ ಪರಿಸರ ಪ್ರೀತಿಗೆ ಬೊನ್ಸಾಯ್ ಕೃಷಿ ನಿದರ್ಶನವಾಗಿದೆ.

ಶ್ರೀಮಠದ ಆವರಣದಲ್ಲಿ ಸ್ವಾಮೀಜಿ ಅವರು, ಕಳೆದ ಸುಮಾರು ಒಂದೂವರೆ ದಶಕದಿಂದ ಅತ್ತಿ, ಆಲ, ಅರಳಿ, ಹುಣಸೆ ಸೇರಿದಂತೆ ವಿವಿಧ ಅಲಂಕಾರಿಕ ಬೊನ್ಸಾಯ್ ಸಸ್ಯಗಳನ್ನು ಬೆಳೆಸಿದ್ದಾರೆ. ಇವು ಶ್ರೀಮಠದ ಆಕರ್ಷಣೆಯಾಗಿದೆ.

‘ಕುಬ್ಜ ಸಸಿಗಳನ್ನು ಬೇರು ಸಹಿತ ಕಿತ್ತು ತಂದು ತಾಯಿ ಬೇರನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ತಂತಿ ಅಥವಾ ದಾರದಿಂದ ಬೇಕಾದ ಆಕೃತಿಯಲ್ಲಿ ಬಾಗಿಸಿ ಕಟ್ಟಬೇಕು. ಹೆಚ್ಚು ನೀರು ಮತ್ತು ಗೊಬ್ಬರ ಹಾಕಬಾರದು. ಬೋನ್ಸಾಯ್ ಸಸ್ಯಗಳನ್ನು ಬೆಳೆಸುವವರಿಗೆ ಸಹನೆ ಮುಖ್ಯ. ಹಲವು ವರ್ಷ ಬದುಕುವ ಈ ಮರಗಳು ಬದೂಕಿದಷ್ಟೂ ವರ್ಷ ಅಷ್ಟೇ ಎತ್ತರವಿರುತ್ತವೆ’ ಎನ್ನುತ್ತಾರೆ ಅಲ್ಲಮಪ್ರಭು ಸ್ವಾಮೀಜಿ.

ಬಾನ್ ಅಂದರೆ ಕುಂಡ. ಸಾಯ್ ಅಂದರೆ ಗಿಡ. ಇವೆರಡೂ ‍ಪದ ಸೇರಿ ಬೊನ್ಸಾಯ್, ಅಂದರೆ ಕುಂಡದಲ್ಲಿ ಬೆಳೆದ ಗಿಡ ಎಂದಾಗಿದೆ. ಬೊನ್ಸಾಯ್, ದೊಡ್ಡ ಮರಗಳ ಚಿಕ್ಕ ಪ್ರತಿರೂಪ. ಇದೊಂದು ಕಲಾತ್ಮಕವಾಗಿ ಸಸ್ಯಗಳನ್ನು ಬೆಳೆಸುವ ವಿಧಾನ. ಇಂತಹ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡಿರುವ ಸ್ವಾಮೀಜಿ ಅವರು ಕಾಲ ಕಾಲಕ್ಕೆ ಬೊನ್ಸಾಯ್ ಸಸ್ಯಗಳಿಗೆ ನೀರು, ಗೊಬ್ಬರ ನೀಡಿ ಆರೈಕೆ ಮಾಡುತ್ತಾರೆ.

‘ಕಿತ್ತು ತಂದ ಸಸಿಯನ್ನು ರಂಧ್ರವಿರುವ ಚಿಕ್ಕದಾದ ಕುಂಡ ಅಥವಾ ಟ್ರೇನಲ್ಲಿ ಉತ್ತಮ ಮಣ್ಣು ಗೊಬ್ಬರ ಹಾಕಿ ಬೆಳೆಸಬೇಕು. ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣನ್ನು ಕುಂಡಕ್ಕೆ ಬಳಸುವುದು ಉತ್ತಮ. ಇವುಗಳ ರಚನೆ ಸೂಕ್ಷ್ಮವಾಗಿರುವುದರಿಂದ ಅತ್ಯಂತ ಕಾಳಜಿಯಿಂದ ಬೆಳೆಸಬೇಕು. ಉತ್ತಮ ಗಾಳಿ, ಬೆಳಕಿನ ವಾತಾವರಣ ಕಲ್ಪಿಸಬೇಕು. ಇವುಗಳ ಆಯಸ್ಸು ಹೆಚ್ಚಾದಂತೆ ಸೌಂದರ್ಯವೂ ಹೆಚ್ಚುತ್ತಾ ಹೋಗುತ್ತದೆ. ಬೊನ್ಸಾಯ್ ಗಿಡಗಳ ಸೌಂದರ್ಯ ಸವಿಯಬೇಕಾದರೆ 15 ರಿಂದ 20 ವರ್ಷಗಳದರೂ ಅಗತ್ಯ’ ಎಂದು ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿ ಅವರ ಸಂಪರ್ಕಕ್ಕೆ- 9741266454.

– ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT