‘ಕೋಟ್ಯಧಿಪತಿ’ ಕನಸು ಭಗ್ನ: ಅಸಮಾಧಾನ

7

‘ಕೋಟ್ಯಧಿಪತಿ’ ಕನಸು ಭಗ್ನ: ಅಸಮಾಧಾನ

Published:
Updated:

ಹುಬ್ಬಳ್ಳಿ: ‘ಸ್ಟಾರ್‌ ಸುವರ್ಣ’ ವಾಹಿನಿಯು ಇಲ್ಲಿನ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ಆಡಿಷನ್‌ನಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಸ್ಪರ್ಧಿಗಳು ಅವಕಾಶ ಸಿಗದೆ ನಿರಾಸೆಗೊಂಡು, ವಾಹಿನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಮಗೂ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದ ಕಾರಣ ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ಸ್ಪರ್ಧೆಗೆ ಬರುವಂತೆ ಮೇ 14 ಮತ್ತು 15ರಂದು ನಮ್ಮ ಮೊಬೈಲ್‌ಗಳಿಗೆ ವಾಹಿನಿಯ ಸಿಬ್ಬಂದಿ ಕರೆ ಮಾಡಿ, ರಸಪ್ರಶ್ನೆಗಳನ್ನು ಕೇಳಿ, ಹೆಸರನ್ನು ನೋಂದಾಯಿಸಿಕೊಂಡಿದ್ದರು. ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೆ, ಇಲ್ಲಿಗೆ ಬಂದ ಬಳಿಕ ಅವಕಾಶ ನಿರಾಕರಿಸುತ್ತಿದ್ದಾರೆ’ ಎಂದು ರಾಯಚೂರಿನಿಂದ ಬಂದಿದ್ದ ಸಂಗನಬಸವ, ಬೆಳಗಾವಿ ಜಿಲ್ಲೆ ಸಂಕೇಶ್ವರದಿಂದ ಬಂದಿದ್ದ ವೀರೇಶ್ವರಿ ಮಾಳಗಿ ದೂರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಹಿನಿಯ ಸಿಬ್ಬಂದಿ ಉಷಾಗೌಡ, ‘ 20 ಸಾವಿರಕ್ಕೂ ಅಧಿಕ ಜನರು ವಾಹಿನಿಗೆ ಕರೆ ಮಾಡಿ ಹೆಸರು ನೋಂದಾಯಿಸಿದ್ದರು. ಇದರಲ್ಲಿ ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಒಂದು ಸಾವಿರ ಮಂದಿಯನ್ನು ಆಡಿಷನ್‌ಗೆ ಬರುವಂತೆ ಆಹ್ವಾನ ನೀಡಿಲಾಗಿತ್ತು. ಆದರೆ, ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡು ಇಲ್ಲಿಗೆ ಬಂದಿದ್ದಾರೆ’ ಎಂದರು.

ಮೂರು ತಿಂಗಳ ಹಸುಗೂಸನ್ನು ಎತ್ತಿಕೊಂಡು ಬಂದಿದ್ದ ಬಾಣಂತಿಯೊಬ್ಬರು ಕಣ್ಣೀರು ಹಾಕಿದರು. ’ಅತ್ತೆ ಬೇಡ ಎಂದರೂ  ಇಲ್ಲಿಗೆ ಬಂದಿದ್ದೇನೆ. ಈಗ ಅವರಿಗೆ ಏನು ಹೇಳಬೇಕು’ ಎಂದು ಮತ್ತೊಬ್ಬ ಮಹಿಳೆ ಜೋರಾಗಿ ಅತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry