ಬುಧವಾರ, ಮಾರ್ಚ್ 3, 2021
31 °C
ಕಾಗಿಣಾ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು; ಎಚ್ಚೆತ್ತುಕೊಂಡ ಪುರಸಭೆ ಆಡಳಿತ

ಕುಡಿಯುವ ನೀರಿಗೆ ತಾತ್ಕಾಲಿಕ ಬಂಡ್ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ತಾತ್ಕಾಲಿಕ ಬಂಡ್ ಆಸರೆ

ಚಿತ್ತಾಪುರ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಾಗಿಣಾ ನದಿಯಲ್ಲಿನ ಪಂಪ್‌ಹೌಸ್ ಬಳಿ ನೀರಿನ ಹರಿವು ಕಡಿಮೆಯಾಗಿದೆ. ಕುಡಿಯುವ ನೀರಿಗೆ ಪುರಸಭೆ ನಿರ್ಮಿಸಿದ ಮರಳಿನ ಚೀಲಗಳ ತಾತ್ಕಾಲಿಕ ಬಂಡ್ ಮಾತ್ರ ಆಸರೆಯಾಗಿದೆ.

ಮುಡಬೂಳ ಬಳಿಯ ಬಾಂದಾರ ಸೇತುವೆ ನೀರಿಲ್ಲದೆ ಬರಿದಾಗಿದ್ದರಿಂದ ನೀರಿನ ಸಮಸ್ಯೆ ಗಂಭೀರವಾಗಿ ಕಾಡುವ ಲಕ್ಷಣ ಗೋಚರಿಸಿತ್ತು. ಇದರಿಂದ ಎಚ್ಚೆತ್ತ ಪುರಸಭೆ ಆಡಳಿತವು ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರ ಅನುದಾನದಡಿ ಪಂಪ್‌ಹೌಸ್ ಬಳಿ ನದಿಯಲ್ಲಿ ಮರಳು ತುಂಬಿದ ಚೀಲ ಮತ್ತು ಕಲ್ಲಿನಿಂದ ತಾತ್ಕಾಲಿಕ ಬಂಡ್ ನಿರ್ಮಾಣ ಮಾಡಿದೆ.

ಬೇಸಿಗೆ ಆರಂಭದಿಂದಲೂ ನದಿಯಲ್ಲಿನ ನೀರು ಕಡಿಮೆಯಾಗುತ್ತ ಬಂದಿದ್ದು, ಮೋಟಾರು ಬಳಿ ನೀರು ಅಲ್ಪ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಆತಂಕ ಶುರುವಾಗಿತ್ತು. ಮುಂಜಾಗ್ರತವಾಗಿ ಬಂಡ್ ನಿರ್ಮಾಣ ಮಾಡಿರುವುದು ಜನತೆಗೆ ತುಸು ನೆಮ್ಮದಿ ತಂದಿದೆ.‌

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುಡಬೂಳ ಬಳಿಯ ಬಾಂದಾರ ಸೇತುವೆಗೆ ಗೇಟು ಅಳವಡಿಸಿ ನೀರು ಸಂಗ್ರಹ ಮಾಡಲಾಗುತ್ತಿತ್ತು. ಆದ್ದರಿಂದ ಪುರಸಭೆ ಆಡಳಿತವು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿತ್ತು. ಆದರೆ, ಪ್ರಸ್ತುತ ಬಾಂದಾರ ಸೇತುವೆ ಖಾಲಿ ಆಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮರಳಿನಚೀಲ ಇಡುವ ಉಪಾಯ ಮಾಡಲಾಯಿತು ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾಯ ಹೋತಿನಮಡಿ ತಿಳಿಸಿದ್ದಾರೆ.

ಪ್ರಸ್ತುತ ಪಂಪ್‌ಹೌಸ್ ಬಳಿ ಅಗತ್ಯ ನೀರು ಸಂಗ್ರಹವಿದೆ. ಚಿತ್ತಾಪುರ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ಹೇಳಿದ್ದಾರೆ.

**

ಪಟ್ಟಣದ ಜನರಿಗೆ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ತಾತ್ಕಾಲಿಕ ಬಂಡ್ ನಿರ್ಮಿಸಲಾಗಿದೆ

ಅನ್ನಪೂರ್ಣ ಭೀಮರಾಯ ಹೋತಿನಮಡಿ, ಅಧ್ಯಕ್ಷೆ, ಪುರಸಭೆ ಚಿತ್ತಾಪುರ

ಮಲ್ಲಿಕಾರ್ಜುನ ಎಚ್. ಮುಡಬೂಳಕರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.