‘ಮೈತ್ರಿ ಸರ್ಕಾರ’ದಲ್ಲಿ ಅಧಿಕಾರ ಹಂಚಿಕೆ: ದೆಹಲಿಯಲ್ಲಿ ನಾಳೆ ಮಹತ್ವದ ಸಭೆ

7

‘ಮೈತ್ರಿ ಸರ್ಕಾರ’ದಲ್ಲಿ ಅಧಿಕಾರ ಹಂಚಿಕೆ: ದೆಹಲಿಯಲ್ಲಿ ನಾಳೆ ಮಹತ್ವದ ಸಭೆ

Published:
Updated:
‘ಮೈತ್ರಿ ಸರ್ಕಾರ’ದಲ್ಲಿ ಅಧಿಕಾರ ಹಂಚಿಕೆ: ದೆಹಲಿಯಲ್ಲಿ ನಾಳೆ ಮಹತ್ವದ ಸಭೆ

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಕಾಂಗ್ರೆಸ್‌ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡಿ ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಸಂಪುಟದಲ್ಲಿ ಮುಖ್ಯಮಂತ್ರಿ ಹುದ್ದೆ ಸೇರಿ 14 ಸ್ಥಾನಗಳು ಜೆಡಿಎಸ್‌ಗೆ ಮತ್ತು 20 ಸ್ಥಾನಗಳು ಕಾಂಗ್ರೆಸ್‌ ಮಧ್ಯೆ ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಎರಡೂ ಪಕ್ಷಗಳ ಹಿರಿಯ ನಾಯಕರು ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇಬ್ಬರು ಪಕ್ಷೇತರ ಶಾಸಕರು ಮತ್ತು ಬಿಎಸ್‌ಪಿ ಶಾಸಕನಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೆಡಿಎಸ್‌ಗೆ ಹಂಚಿಕೆಯಾಗಲಿರುವ 14 ಸ್ಥಾನಗಳಲ್ಲೇ ಈ ಮೂವರು ಶಾಸಕರಿಗೂ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರು ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ.

ಹಣಕಾಸು, ಗೃಹ, ಕಂದಾಯ, ಆರ್‌ಡಿಪಿಆರ್, ಜಲ ಸಂಪನ್ಮೂಲ, ಸಾರಿಗೆ, ಬೆಂಗಳೂರು ಅಭಿವೃದ್ಧಿ ಮತ್ತು ಬೃಹತ್‌ ಕೈಗಾರಿಕೆ ಈ ಸಚಿವ ಸ್ಥಾನಗಳನ್ನು ಯಾರು ಯಾರು ಹಂಚಿಕೊಳ್ಳಬೇಕು ಎಂಬ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನ ಆಗಲಿದೆ.

ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ 15 ಮಂದಿ ಇರಲಿದ್ದಾರೆ. ಸಮಿತಿ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ಉದ್ದೇಶಿಸಿದೆ ಎಂದೂ ಗೊತ್ತಾಗಿದೆ.

ಸ್ಪೀಕರ್‌ ಸ್ಥಾನವನ್ನು ಜೆಡಿಎಸ್‌ಗೆ ನೀಡುವಂತೆ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಬೇಡಿಕೆ ಇಟ್ಟಿದ್ದಾರೆ. ಸರ್ಕಾರವನ್ನು ಹದ್ದುಬಸ್ತಿನಲ್ಲಿಟ್ಟು, ಸುಗಮವಾಗಿ ನಡೆಸಿಕೊಂಡು ಹೋಗಲು ಈ ಹುದ್ದೆಯನ್ನು ತಮ್ಮ ವಶದಲ್ಲೇ ಇಟ್ಟುಕೊಳ್ಳಲು ಅವರು ಬಯಸಿದ್ದಾರೆ ಎನ್ನಲಾಗಿದೆ. ಆದರೆ, ಮೈತ್ರಿ ಕೂಟದಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್‌ ಕೂಡಾ ಸ್ಪೀಕರ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ.

ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ಬೇಡಿಕೆ ಕಾಂಗ್ರೆಸ್‌ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಒಂದು ಹುದ್ದೆ ದಲಿತರೊಬ್ಬರಿಗೆ, ಇನ್ನೊಂದು ಹುದ್ದೆಯನ್ನು ಲಿಂಗಾಯತರೊಬ್ಬರಿಗೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಬಗ್ಗೆಯೂ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry