ಮಕ್ಕಳ ಕಳ್ಳನೆಂದು ಭಾವಿಸಿ ಹಲ್ಲೆ

7

ಮಕ್ಕಳ ಕಳ್ಳನೆಂದು ಭಾವಿಸಿ ಹಲ್ಲೆ

Published:
Updated:
ಮಕ್ಕಳ ಕಳ್ಳನೆಂದು ಭಾವಿಸಿ ಹಲ್ಲೆ

ಸುರಪುರ: ತಾಲ್ಲೂಕಿನಲ್ಲಿ ಮಕ್ಕಳ ಕಳ್ಳತನದ ವದಂತಿ ಹಬ್ಬಿದೆ. ಗ್ರಾಮೀಣ ಭಾಗದಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಅನುಮಾನದಿಂದ ನೋಡುವ ಹಾಗೂ ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ.

ನಗರಸಭೆ ವ್ಯಾಪ್ತಿಯ ವಣಕಿಹಾಳದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಹಸನಾಪುರದಲ್ಲಿ ವಾಸವಿರುವ ಆಂಧ್ರ ಪ್ರದೇಶ ಮೂಲದ ಸತೀಶ ದಂಡೇಲಾ (40) ಶುಕ್ರವಾರ ರಾತ್ರಿ ಮದ್ಯ ಸೇವನೆ ಮಾಡಿ ಹಸನಾಪುರ ಪೆಟ್ರೋಲ್ ಪಂಪ್ ಬಳಿಯ ವಣಕಿಹಾಳದ ಸಮೀಪದ ಅಂಬೇಡ್ಕರ ಶಾಲೆಯ ಬಳಿ ಮಲಗಿದ್ದನು. ಆತನನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸುತ್ತ ಮುತ್ತಲಿನ ಜನ ಸತೀಶನಿಗೆ ಚೆನ್ನಾಗಿ ಥಳಿಸಿದ್ದಾರೆ. ಇದರಿಂದ ತಲೆ, ಕೈಗೆ ಗಾಯಗಳಾಗಿವೆ. ಆತನು ಹೇಗೂ ಬಿಡಿಸಿಕೊಂಡು ಓಡಿ ಬಂದು ಮನೆ ಸೇರಿಕೊಂಡಿದ್ದಾನೆ.

‘ಸ್ಥಳಿಯ ಕೆಲ ಜನರು ಬಂದು ನನ್ನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಹಸನಾಪುರದಲ್ಲಿ ವಾಸವಿರುವೆ. ಕೌದಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವೆ ಎಂದು ಹೇಳಿದರೂ ಜನ ಕೇಳಲಿಲ್ಲ. ನನಗೆ ಸರಿಯಾಗಿ ಕನ್ನಡ ಬಾರದ ಕಾರಣ ಕಳ್ಳನೆಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಶನಿವಾರ ಲಕ್ಷ್ಮೀಪುರ ಹಳ್ಳದಲ್ಲಿ ಮಹಿಳೆಯೊಬ್ಬಳು ಬಟ್ಟೆತೊಳೆಯುವಾಗ ಅಪರಿಚಿತ ವ್ಯಕ್ತಿಯನ್ನು ನೋಡಿ ಮಕ್ಕಳ ಕಳ್ಳನೆಂದು ಕಿರುಚಿದ್ದಾಳೆ. ಸುತ್ತಲಿನ ಜನಸೇರಿದ್ದಾರೆ. ಅಲ್ಲಿ ಅಪರಿಚಿತ ವ್ಯಕ್ತಿ ಜನರನ್ನು ನೋಡಿ ಹೆದರಿ ಓಡಿ ಹೋಗಿದ್ದಾನೆಂದು ಜನರು ಮಾಹಿತಿ ನೀಡಿದ್ದಾರೆ.

ಲಕ್ಷ್ಮೀಪುರ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸ್‌ ಇನ್‌ಸ್ಪೆಕ್ಟರ್ ಟಿ.ಆರ್. ರಾಘವೇಂದ್ರ ಅವರು, ‘ಮಕ್ಕಳ ಕಳ್ಳತನ ಎಂಬ ವದಂತಿ ಹಬ್ಬಿಸಲಾಗಿದೆ.ಇದಕ್ಕೆ ಯಾರೂ ಕಿವಿಗೊಡಬಾರದು. ಯಾರೇ ಅಪರಿಚಿತರು ಅನುಮಾನಾಸ್ಪದವಾಗಿ ತಿರುಗಾಡು ವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry