7

ಸಫಲವಾಗುವುದೇ ಮಹಿಳಾ ಟ್ವೆಂಟಿ–20 ಲೀಗ್‌?

Published:
Updated:
ಸಫಲವಾಗುವುದೇ ಮಹಿಳಾ ಟ್ವೆಂಟಿ–20 ಲೀಗ್‌?

ಪ್ರೊ ಕಬಡ್ಡಿ ಲೀಗ್‌ ಪ್ರವರ್ಧಮಾನಕ್ಕೆ ಬಂದ ವರ್ಷ 2016. ಪುರುಷರ ಕಬಡ್ಡಿ ಲೀಗ್ ಮೋಡಿ ಮಾಡಿದ್ದನ್ನು ಕಂಡ ಅನೇಕರಲ್ಲಿ ಮಹಿಳೆಯರಿಗಾಗಿಯೂ ಇಂಥದೇ ಲೀಗ್‌ ಬೇಕು ಎಂಬ ಆಸೆ ಮೂಡಿದ್ದು ಸಹಜ. ಈ ಆಸೆ, ಅದರ ಪರಿಣಾಮ ಮಹಿಳಾ ಕಬಡ್ಡಿ ಚಾಲೆಂಜ್‌ ಆರಂಭವಾಯಿತು.

ಫೈರ್ ಬರ್ಡ್ಸ್‌, ಐಸ್ ದಿವಾಸ್‌ ಮತ್ತು ಸ್ಟಾರ್ಮ್‌ ಕ್ವೀನ್‌ ತಂಡಗಳು ಕ್ರಮವಾಗಿ ಮಮತಾ ಪೂಜಾರಿ, ಅಭಿಲಾಷ ಮಹಾತ್ರೆ ಹಾಗೂ ತೇಜಸ್ವಿನಿ ಬಾಯಿ ಅವರ ನೇತೃತ್ವದಲ್ಲಿ ಕಣಕ್ಕೆ ಇಳಿದವು. ಆದರೆ ಪುರುಷರ ಪಂದ್ಯಗಳ ಮುಂದೆ ಈ ತಂಡಗಳ ಕಾದಾಟ ಹೇಳಹೆಸರಿಲ್ಲದಂತೆ ಆಯಿತು. ಮಹಿಳೆಯರ ‘ಚಾಲೆಂಜ್‌’ ಆರಂಭವಾದದ್ದೇ ಅನೇಕರಿಗೆ ಗೊತ್ತಾಗಲಿಲ್ಲ. ಮುಗಿದದ್ದು ಕೂಡ ಗಮನಕ್ಕೆ ಬರಲೇ ಇಲ್ಲ. ನಂತರ ಇದರತ್ತ ಆಯೋಜಕರೂ ಗಮನ ನೀಡಲಿಲ್ಲ. ಪ್ರೇಕ್ಷಕರು ಇಲ್ಲದ ಕಾರಣ ಟಿವಿ ಚಾನಲ್‌ನವರಂತೂ ಅದರ ಗೊಡವೆಗೇ ಹೋಗಲಿಲ್ಲ.

ಈಗ ಇಂಥದೇ ಪ್ರಯತ್ನ ಕ್ರಿಕೆಟ್‌ನಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಮಾದರಿಯಲ್ಲಿ ಮಹಿಳೆಯರ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ಪೂರ್ವಭಾವಿಯಾಗಿ ಮೇ 22ರಂದು ಮುಂಬೈಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯರನ್ನು ಒಳಗೊಂಡ ಎರಡು ತಂಡಗಳ ನಡುವೆ ‘ಚಾಲೆಂಜರ್ಸ್‌’ ಪಂದ್ಯ ನಡೆಯಲಿದೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ಪ್ರಬುದ್ಧ ಆಟಗಾರ್ತಿಯರಾದ ಹರ್ಮನ್‌ ಪ್ರೀತ್ ಕೌರ್‌ ಮತ್ತು ಸ್ಕೃತಿ ಮಂದಾನ ಕ್ರಮವಾಗಿ ಸೂಪರ್‌ನೋವಾ ಮತ್ತು ಟ್ರೈಲ್‌ ಬ್ಲೇಜರ್ಸ್‌ ತಂಡಗಳನ್ನು ಮುನ್ನಡೆಸಲಿದ್ದಾರೆ.

ಪುರುಷರ ಕ್ರಿಕೆಟ್‌ಗೆ ಮೆರುಗು?

ಐಪಿಎಲ್‌ ಜನಪ್ರಿಯತೆಯ ಹಾದಿಯಲ್ಲಿ ಸಾಗುತ್ತಿದ್ದಾಗ ಇದೇ ಮಾದರಿಯ ಟೂರ್ನಿ ನಮಗೂ ಬೇಕು ಎಂಬ ಬೇಡಿಕೆ ಅನೇಕ ಹಿರಿಯ ಆಟಗಾರ್ತಿಯರಿಂದ ಬಂದಿತ್ತು. ಆದರೆ ತಾರಾಮೌಲ್ಯ, ಆರ್ಥಿಕ ಬಲ, ಟಿವಿ ಪ್ರಸಾರದ ಶ್ರೀಮಂತಿಕೆ ಇತ್ಯಾದಿ ಸಿಗಬಹುದೇ ಎಂಬ ಸಂದೇಹ ಮೂಡಿದ್ದ ಬಿಸಿಸಿಐ ಈ ಬೇಡಿಕೆಯನ್ನು ಹೆಚ್ಚು ಲೆಕ್ಕಿಸಲಿಲ್ಲ.

ಈಗ ಏಕಾಏಕಿ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ಲಾಭ–ನಷ್ಟದ ಲೆಕ್ಕಾಚಾರದಲ್ಲಿ ಈ ಟೂರ್ನಿ ‘ಜಯ’ ಗಳಿಸುವುದೇ ಎಂಬ ಪ್ರಶ್ನೆಗೆ 22ರಂದು ನಡೆಯುವ ‘ಪ್ರದರ್ಶನ ಪಂದ್ಯ’ದಲ್ಲಿ ಉತ್ತರ ಸಿಗಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನಲ್‌ ಈ ಪಂದ್ಯವನ್ನು ನೇರ ಪ್ರಸಾರ ಮಾಡುವುದರಿಂದ ವೀಕ್ಷಕರ ಸ್ಪಂದನೆಯ ಬಗ್ಗೆಯೂ ಸ್ಪಷ್ಟ ರೂಪ ಸಿಗಲಿದೆ.

ಪುರುಷರ ಐಪಿಎಲ್‌ಗೆ ಮೆರುಗು ತುಂಬುವುದಕ್ಕಾಗಿ ಮಹಿಳೆಯರ ಟೂರ್ನಿ ಆಯೋಜಿಸಲಾಗುತ್ತಿದೆ ಎಂಬ ವಾದವೂ ಇದೆ. ಹೀಗಾದರೆ ಇಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನ ರೋಚಕತೆ ಇಲ್ಲವಾಗಬಹುದು. ಪ್ರೊ ಕಬಡ್ಡಿ ಲೀಗ್ ಜೊತೆ ನಡೆದ ‘ಚಾಲೆಂಜ್‌’ನ ಪರಿಸ್ಥಿತಿಯೇ ಈ ಟೂರ್ನಿಗೂ ಆಗಬಹುದು.

ಯಶಸ್ಸು ಗಳಿಸುವುದು ಯಾವಾಗ?

ಮಹಿಳೆಯರ ಐಪಿಎಲ್ ಟೂರ್ನಿಯನ್ನು ಬೇಗನೇ ಆರಂಭಿಸುವ ಯೋಚನೆ ಬಿಸಿಸಿಐಗೆ ಇಲ್ಲ. ಇದಕ್ಕೆ ಬೇಕಾದ ಯೋಜನೆಯೂ ಸಿದ್ಧವಾಗಲಿಲ್ಲ. ಸದ್ಯ ನಡೆಯಲಿರುವುದು ಏಕೈಕ ಪ್ರದರ್ಶನ ಪಂದ್ಯ ಮಾತ್ರ. ಈ ಪಂದ್ಯ ಯಶಸ್ಸು ಕಂಡರೆ ಮೂರು ವರ್ಷಗಳ ಒಳಗೆ ಟೂರ್ನಿಯನ್ನು ಆರಂಭಿಸುವುದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಸಮಿತಿಯ ಗುರಿ.

ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ ಬ್ಯಾಷ್‌ ಲೀಗ್‌ನ ಯಶಸ್ಸು ಕಂಡ ಐಪಿಎಲ್‌ ಆಡಳಿತ ಸಮಿತಿ ಕಳೆದ ವರ್ಷ ಅಕ್ಟೋಬರ್‌ನಲ್ಲೇ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ನಂತರ ಈ ಬಗ್ಗೆ ಹೆಚ್ಚು ಬೆಳವಣಿಗೆಗಳು ಆಗಿರಲಿಲ್ಲ. ಈಗ ದಿಢೀರ್‌ ಆಗಿ ಬಿಸಿಸಿಐ ‘ಚಾಲೆಂಜರ್ಸ್‌’ ಪಂದ್ಯ ಆಡಿಸಲು ಮುಂದಾಗಿರುವುದರಿಂದ ಯಶಸ್ಸು ಸಿಗುವುದೇ ಎಂಬುದು ಕುತೂಹಲದ ಪ್ರಶ್ನೆ.

ನವೆಂಬರ್‌ನಲ್ಲಿ ಮಹಿಳೆಯರ ಆರನೇ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್‌ ವೆಸ್ಟ್ಇಂಡೀಸ್‌ನಲ್ಲಿ ನಡೆಯಲಿದೆ. ಮಹಿಳೆಯರ ಕ್ರಿಕೆಟ್ ಲೀಗ್‌ ನಡೆಯುತ್ತದೆಯೋ ಇಲ್ಲವೋ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ಆದರೆ ವಿಶ್ವಕಪ್‌ಗೆ ‘ಅಭ್ಯಾಸ’ ನಡೆಸಲು ಆಟಗಾರ್ತಿಯರಿಗೆ ‘ಚಾಲೆಂಜರ್ಸ್‌’ ಪಂದ್ಯದಲ್ಲಿ ಸುವರ್ಣಾವಕಾಶವಿದೆ. 

*

ಮಹಿಳೆಯರ ಟ್ವೆಂಟಿ–20 ಟೂರ್ನಿ ಆರಂಭಿಸಬೇಕಾದರೆ ದೀರ್ಘ ಕಾಲದ ಯೋಜನೆ, ಚಿಂತನ–ಮಂಥನ ಅಗತ್ಯ. ಇಲ್ಲವಾದರೆ ಅದು ಸಫಲವಾಗುವುದು ಕಷ್ಟ ಸಾಧ್ಯ.

-ಡಯಾನ ಎಡುಲ್ಜಿ, ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry