7

ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

Published:
Updated:
ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

ಮತ್ತೆ ಬಂದಿದೆ ಸೆಮಿಸ್ಟರ್ ಕೊನೆ. ಪಠ್ಯದ ಅವಧಿಯ ಕೊನೆ, ಪರೀಕ್ಷೆ. ವಾರ್ಷಿಕ ಪರೀಕ್ಷೆಯ ಪದ್ಧತಿಯಿಂದ ಸೆಮಿಸ್ಟರ್ ಪದ್ಧತಿಯ ಕಕ್ಷೆಗೆ ಬಂದು ಕುಳಿತ ವಿದ್ಯಾರ್ಥಿಗಳಿಗೆ ಹೊಸ ಗುರುತ್ವದ ಅನುಭವ. ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಸುಧಾರಿಸಿಕೊಳ್ಳುವ ವೇಳೆಗಾಗಲೇ ಎರಡನೇ ಸೆಮಿಸ್ಟರ್ ಪರೀಕ್ಷೆ. ಇನ್ನು ನಾಲ್ಕು, ಆರನೇ ಸೆಮಿಸ್ಟರ್ ಬರೆಯುವ ಯೋಧರಿಗೆ ಒಂದು ಬಗೆಯ ನಿರಾಳ. ಯುದ್ಧದಲ್ಲಿ ಗಾಯದ ಕಲೆ ಉಳಿಸಿಕೊಂಡ ಮಹಾರಥರೂ ಪ್ರಥಮ ಪ್ರಯತ್ನದಲ್ಲೇ ಗೆದ್ದು ಬೀಗಿದ ಯಾವ ಗಾಯವನ್ನೂ ಹೊಂದಿರದ ವೀರರೂ ಮತ್ತೊಂದು ಸುತ್ತಿಗೆ ತಯಾರಾಗುವ ಸಮಯ ಇದು.

ಸೆಮಿಸ್ಟರ್ ಪದ್ಧತಿಯ ಲೋಪದೋಷಗಳನ್ನು ಪಟ್ಟಿಮಾಡುವ ಅವಧಿ ಮೀರಿಹೋಗಿದೆ. ಇದು ಅಳವಡಿಕೆಯಾಗಿ ಬಹಳ ವರ್ಷಗಳೇ ಆಗಿವೆ. ಆದುದರಿಂದ ಅದರ ಬಗ್ಗೆ ಚಿಂತಿಸದೆ ಅದಕ್ಕೆ ಹೊಂದಿಕೊಳ್ಳುವ ಬಗೆಯನ್ನು ನಾವು ಕಂಡುಕೊಳ್ಳಬೇಕು. ಒಂದು ಸೆಮಿಸ್ಟರ್‌ಗೆ 90 ದಿನಗಳು (90 working days). ಈ ಅವಧಿಯೊಳಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮುಗಿಯಬೇಕು. ಇದರೊಳಗೇ ಮೂರು ಲಘುಪರೀಕ್ಷೆಗಳೂ ನಡೆಯಬೇಕು. ಈ ಲಘುಪರೀಕ್ಷೆಯ ಆಧಾರದ ಮೇಲೆ, ಹಾಜರಾತಿ ಪ್ರಮಾಣ, ತರಗತಿಯಲ್ಲಿನ ನಡೆನುಡಿ, ಪಠ್ಯೇತರ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ. – ಮೊದಲಾದ ಚಟುವಟಿಕೆಗಳನ್ನಾಧರಿಸಿ ಆಂತರಿಕ ಅಂಕಗಳನ್ನು ನೀಡಲಾಗುವುದು. ಈ ಆಂತರಿಕ ಅಂಕಗಳು 10ರಿಂದ 30 ಅಂಕಗಳವರೆಗೆ ಇರುತ್ತದೆ.

ಬೆಂಗಳೂರು ವಿ.ವಿ. ಪ್ರಸ್ತುತ ಇದನ್ನು 30ಕ್ಕೆ ನಿಗದಿಪಡಿಸಿದೆ. ಇನ್ನು ಲಿಖಿತ ಪರೀಕ್ಷೆಗೆ ಉಳಿಯುವುದು 70 ಅಂಕಗಳು. ಇದರಲ್ಲಿ ಕನಿಷ್ಠ 25 ಗಳಿಸಿದರೆ ಮತ್ತು ಆಂತರಿಕ ಹಾಗೂ ಲಿಖಿತಪರೀಕ್ಷೆ ಕೂಡಿ 40 ಅಂಕ ಗಳಿಸಿದರೆ ವಿದ್ಯಾರ್ಥಿ ಉತ್ತೀರ್ಣನಾದಂತೆ. ಆಂತರಿಕ ಅಂಕಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಚಿಂತಿತರಾಗುವುದು ಬೇಡ. ಸಾಮಾನ್ಯವಾಗಿ ಈ ವಿಚಾರದಲ್ಲಿ ಅಧ್ಯಾಪಕರು ಉದಾರವಾಗಿರುವುದು ಕಂಡುಬಂದಿದೆ. ಲಘುಪರೀಕ್ಷೆಗೆ ಹಾಜರಾಗದಿದ್ದರೆ, ಅತಿ ಉದ್ಧಟತನದಿಂದ ನಡೆದುಕೊಂಡಿದ್ದರೆ ಮತ್ತು ಹಾಜರಾತಿಯ ಕೊರತೆ ಎದುರಿಸುತ್ತಿದ್ದರೆ ಅಂತಹವರ ಆಂತರಿಕ ಅಂಕಗಳು ಕಡಿಮೆಯಾಗುತ್ತವೆ. ಆದರೂ ನಾನು ಕಂಡಂತೆ ಎಂತಹ ತುಂಟ ವಿದ್ಯಾರ್ಥಿಗಾದರೂ ಆಂತರಿಕ ಅಂಕ ನೀಡುವಾಗ ಅಧ್ಯಾಪಕನ ಕೈ ಬಲೀಂದ್ರನ ಕೈಯೇ ಆಗಿಬಿಡುತ್ತದೆ!

ಈಗ ಮುಖ್ಯಪರೀಕ್ಷೆ, ಲಿಖಿತಪರೀಕ್ಷೆಯ ವಿಷಯಕ್ಕೆ ಬರೋಣ. ಒಟ್ಟು 70 ಅಂಕಗಳು, ಪಾಸಾಗಲು ಬೇಕಾದ ಕನಿಷ್ಠ ಅಂಕ 25, ಅಷ್ಟೆ! ಇದನ್ನು ಗಳಿಸುವುದು ನೀರು ಕುಡಿದಷ್ಟು ಸುಲಭ. ಮೌಲ್ಯಮಾಪನದ ಆರಂಭದ ಹಂತದಲ್ಲಿ ಅಂದರೆ 25 ಅಂಕಗಳವರೆಗೆ ಮನಸ್ಸು ಧಾರಾಳವಾಗಿ ಅಂಕ ನೀಡುತ್ತಿರುತ್ತದೆ. ಅಲ್ಲಿಂದ ಮುಂದೆ ಕೈ ಬಿಗಿಯಾಗುತ್ತ ಸಾಗುತ್ತದೆ. ಹೀಗಾಗಿ ಇಂದಿನ ಪರೀಕ್ಷೆಗಳಲ್ಲಿ ನಪಾಸಾಗಲು ಖಾಲಿ ಉತ್ತರಪತ್ರಿಕೆ ನೀಡಬೇಕು ಅಥವಾ ತೀರ ಕಳಪೆಯಾಗಿ ಬರೆದಿರಬೇಕು. ಏನಾದರಾಗಲಿ ಕನಿಷ್ಠ ತಯಾರಿ ಇದ್ದರೂ ವಿದ್ಯಾರ್ಥಿ ಪಾಸಾಗಲು ಸಾಧ್ಯ. ತಯಾರಿ ಹೇಗಿರಬೇಕು?

ಹಿಂದೆಯೇ ತಿಳಿಸಿದಂತೆ ನಮಗೆ ಇರುವ ಅವಧಿ 90 ದಿನಗಳು. ಈ ಅವಧಿಯಲ್ಲಿ ಮೂರು ಐಚ್ಛಿಕ ವಿಷಯಗಳನ್ನು ಎರಡು ಭಾಷಾ ವಿಷಯಗಳನ್ನು ಓದಬೇಕು. ಇಲ್ಲಿ ಗಮನಿಸಬೇಕಾದ್ದು ವಿದ್ಯಾರ್ಥಿ ತನ್ನೆಲ್ಲ ಇತರ ಚಟುವಟಿಕೆಗಳೊಂದಿಗೆ ಈ ವಿಷಯಗಳನ್ನು ಓದಬೇಕು ಎಂಬುದನ್ನು. ನಾನೇ ಗಮನಿಸಿದಂತೆ ಆರ್ಥಿಕವಾಗಿ ಹಿಂದುಳಿದ ಕೆಲವು ಕುಟುಂಬಗಳಲ್ಲಿ ಅನಿವಾರ್ಯವಾಗಿ ವಿದ್ಯಾರ್ಥಿಗಳು ಪಾರ್ಟ್ ಟೈಂ ಉದ್ಯೋಗವನ್ನು ಕೂಡ ನಿರ್ವಹಿಸಬೇಕಾಗುತ್ತದೆ. ಆದುದರಿಂದ ಈ ಪರೀಕ್ಷಾ ಗೆಲುವಿನ ಮೊದಲ ಗುಟ್ಟೆಂದರೆ ನಿಯತವಾಗಿ ತರಗತಿಗಳಿಗೆ ಹಾಜರಾಗುವುದು.

ವಿಶ್ವವಿದ್ಯಾಲಯವೇ ವಿಧಿಸಿದಂತೆ ಶೇ 75ರಷ್ಟು ಹಾಜರಾತಿ ಕಡ್ಡಾಯ. ನಿಜ ಹೇಳಬೇಕೆಂದರೆ ಪಾಸಾಗಲು ಇಷ್ಟು ಸಾಕು. ತರಗತಿಗಳಿಗೆ ಹಾಜರಾದರೆ ಸಾಕು, ವಿಷಯಗಳು ಕಿವಿಯ ಮೇಲೆ ಬಿದ್ದು ಕೊನೆಗೆ ಪರೀಕ್ಷಾ ಕೊಠಡಿಯಲ್ಲಿ ಅವು ನೆನಪಿಗೆ ಬರುತ್ತವೆ. ಜೊತೆಗೆ ಅಂದಂದಿನ ಪಾಠ ಕುರಿತ ಟಿಪ್ಪಣಿಯನ್ನು ಅಂದೇ ಒಮ್ಮೆ ಓದಿಕೊಂಡರೆ, ದ್ವಿತೀಯ ದರ್ಜೆ ಖಂಡಿತ. ಅಲ್ಲದೆ ಆ ಟಿಪ್ಪಣಿಗಳನ್ನು ಇನ್ನೊಮ್ಮೆ ಬರೆದುಬಿಟ್ಟರಂತೂ ಪ್ರಥಮದರ್ಜೆ ಖಚಿತ. ಅಕಸ್ಮಾತ್ ಮನಸ್ಸು ಮಾಡಿ ದಿನಕ್ಕೆ ಕೇವಲ ಒಂದು ಗಂಟೆ ಅಧ್ಯಯನ ಮಾಡಿಬಿಟ್ಟರೆ ಅತ್ಯುತ್ತಮ ದರ್ಜೆ ಕಟ್ಟಿಟ್ಟ ಫಲಿತಾಂಶ.

ಪ್ರತಿ ಕಾಲೇಜೂ ಸಿಲೆಬಸ್ ಮುಗಿಸಿದ ಮೇಲೆ ಕನಿಷ್ಠ ವಾರದಿಂದ ಹತ್ತು ದಿನದವರೆಗೆ ಅಧ್ಯಯನದ ರಜೆ ನೀಡುತ್ತದೆ. ಈ ಅವಧಿಯಲ್ಲಿ ಆಯಾ ವಿಷಯಗಳ ಹಿಂದಿನ ಮೂರು ವರ್ಷಗಳ ಪ್ರಶ್ನೆಪತ್ರಿಕೆಯನ್ನು ಬಿಡಿಸಿಬಿಟ್ಟರಂತೂ ಶೇ 85 ಅಥವಾ ರ‍್ಯಾಂಕ್‌ ಗಳಿಸಿದರೂ ಅಚ್ಚರಿಯಿಲ್ಲ. ಸತತ, ನಿಯತ, ಏಕಾಗ್ರ ಪ್ರಯತ್ನ ಮುಖ್ಯ. 80 ದಿನ ಓದದೆ ಕಡೆಯ ಹತ್ತು ದಿನ, ದಿನಕ್ಕೆ ಹತ್ತು ತಾಸು ಓದಿದರೆ ಪ್ರಯೋಜನವಿಲ್ಲ. ಆದರೆ ಇಂತಹವರು ಪಾಸಾದದ್ದನ್ನೂ ಕಂಡಿದ್ದೇನೆ! ಅದಕ್ಕೇ ಹೇಳಿದ್ದು ಫೇಲಾಗುವುದು ಮಹಾಪ್ರಯಾಸದ ಕೆಲಸ.

ಪರೀಕ್ಷೆಗೆ ಹೆದರುವ ಇನ್ನೊಂದು ಗುಂಪಿದೆ. ಇವರು ಹಗ್ಗವನ್ನು ಹಾವೆಂದು ಭಾವಿಸುವ ವರ್ಗಕ್ಕೆ ಸೇರಿದವರು. ಅದ್ಭುತ ತಯಾರಿ ನಡೆಸಿದರೂ ಕೊನೆ ಘಳಿಗೆಯಲ್ಲಿ ಕೈಚೆಲ್ಲಿ ಕೂರುವವರು. ಧೈರ್ಯ ಕಳೆದುಕೊಂಡರೆ, ಮನಸ್ಸು ಗಲಿಬಿಲಿಗೊಂಡರೆ ಉತ್ತರಗಳು ಹಾಗೆಯೇ ಕಲಸಿ ಹೋಗುವವು. ಇಂತಹವರು ಮತ್ತೆ ಮತ್ತೆ ಮನೆಯಲ್ಲೇ ಬೇರೆ ಬೇರೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಅಭ್ಯಾಸ ಮಾಡಿಕೊಳ್ಳಬೇಕು. ಮನೆಯಲ್ಲಿಯೇ ಕೃತಕವಾಗಿ ಪರೀಕ್ಷಾ ಕೊಠಡಿಯ ವಾತಾವರಣ ನಿರ್ಮಿಸಿಕೊಂಡು ಈ ಒತ್ತಡವನ್ನು ಅನುಭವಿಸಿ ಗೆಲ್ಲಬೇಕು. ಪರೀಕ್ಷೆ ಪೆಡಂಭೂತವಲ್ಲ; ಅದು ಕಲಿಕೆಯ ಮಾಪಕ. ಅದರಿಂದ ಈ ವಿಶ್ವದ ಉದ್ಧಾರವೂ ಆಗುವುದಿಲ್ಲ ಹಾಗೇ ಏನಾದರೂ ಫೇಲಾದರೆ ಪ್ರಪಂಚ ಮುಳುಗಿಹೋಗುವುದೂ ಇಲ್ಲ.

ಈ ಜಗತ್ತಿಗೆ ಅನೇಕ ತಲ್ಲಣಗಳಿವೆ, ಇನ್ನು ನಮ್ಮ ಫಲಿತಾಂಶದ ಲೊಳಲೊಟ್ಟೆಯ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದೂ ಇಲ್ಲ. ಫಲಿತಾಂಶ ಬಂದ ಮೂರನೇ ದಿನಕ್ಕೆ ರ್‍ಯಾಂಕುಗಳ ಮೆರವಣಿಗೆ ಮುಗಿದು ಜನ ಅದನ್ನು ಮರೆತೂಬಿಡುತ್ತಾರೆ. ಗೆಲುವಿನ ಗುಟ್ಟಿರುವುದು ಅದರ ಬಾಹ್ಯ ಸಂಭ್ರಮದಲ್ಲಲ್ಲ. ಅದು ನೀಡುವ ಆಂತರಿಕ ಆತ್ಮವಿಶ್ವಾಸದಲ್ಲಿ. ಈ ನಿಟ್ಟಿನಲ್ಲಿ ನನಗೆ ನಮ್ಮಜ್ಜಿ ಫಲಿತಾಂಶದ ಬಗ್ಗೆ ವಿಚಾರಿಸುತ್ತಿದ್ದ ಪರಿ ಬಲು ಇಷ್ಟ. ಅವರು ಕೇಳುತ್ತಿದ್ದುದು ಇಷ್ಟೆ, ‘ನೀನು ಪ್ಯಾಸೊ? ಪೇಲೊ?’ ಅಲ್ಲಿ ಇನ್ಯಾವ ಶ್ರೇಣಿಗೂ ಜಾಗವಿಲ್ಲ. ಎಲ್ಲೀ ಶ್ರೇಣಿಕರಣವೋ ಅಲ್ಲಿ ಕ್ಷೋಭೆ. ಇರಲಿ.

ಅದೂ ಬೇಕು ಒಂದು ಬಗೆಯ ಆರೋಗ್ಯಕಾರಿ ಸ್ಫರ್ಧೆಗೆ. ಆದರೆ ಆತಂಕ, ಒತ್ತಡಕ್ಕೆ ಕಾರಣವಾಗಬಾರದು ಅಷ್ಟೆ. ಒಬ್ಬೊಬ್ಬ ವಿದ್ಯಾರ್ಥಿಯದು ಒಂದೊಂದು ಬಗೆಯ ತಯಾರಿ. ಅವರ ಪಾಡಿಗೆ ಅವರು ತಯಾರಾಗಲಿ ವೃಥಾ ಆತಂಕ ಪಡದೆ, ಅವರನ್ನೂ ಆತಂಕಕ್ಕೆ ಒಳಪಡಿಸದಿದ್ದರೆ ಪರೀಕ್ಷೆಯೆಂಬ ಪೆಡಂಭೂತ ತಾನಾಗಿಯೇ ಓಡಿಹೋಗುತ್ತದೆ. ಶುಭವಾಗಲಿ, ಜಯವಾಗಲಿ ಸೆಮಿಸ್ಟರ್ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಮಿತ್ರರಿಗೆ!

ವಿದ್ಯಾರ್ಥಿಗಳಿಗೆ

*ಪರೀಕ್ಷೆ ಬರೆಯುವ ಮುನ್ನದ ವಾರದಲ್ಲಿ ಕನಿಷ್ಠ ಮೂರು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರಿ.

*ಪ್ರಶ್ನೆಪತ್ರಿಕೆಯನ್ನು ಆಮೂಲಾಗ್ರವಾಗಿ ಓದಿ ಆನಂತರ ಬರೆಯಲು ಆರಂಭಿಸಿ.

*ಮೊದಲಿಗೆ ಸುಲಭದ ಪ್ರಶ್ನೆಗಳನ್ನು, ಉತ್ತರಗಳನ್ನು ಚೆನ್ನಾಗಿ ಬಲ್ಲವನ್ನು ಬರೆಯಿರಿ.

*ಸ್ಫುಟವಾಗಿರಲಿ, ಅಂದವಾಗಿರಲಿ. ಓದಲು ಅನುಕೂಲವಾಗಿರಲಿ.

*ಉತ್ತರಗಳು ನೆನಪಾಗದಿದ್ದರೆ ತಕ್ಷಣ ಎದ್ದುಬರಬೇಡಿ. ಪರೀಕ್ಷಾಂಗಣದಲ್ಲಿ ಕುಳಿತು ಬೇರೆ ಪ್ರಶ್ನೆಗಳಿಗೆ ಉತ್ತರಿಸುತ್ತಿರಿ. ಮನಸ್ಸಿನ ಒಂದು ಭಾಗ ಆ ಕುರಿತು ನಿಮಗರಿವಿಲ್ಲದಂತೆ ಆಲೋಚಿಸುತ್ತಿರುತ್ತದೆ. ಮತ್ತು ಉತ್ತರದ ಬೆಳಕು ಕಾಣುವ ಸಾಧ್ಯತೆಯೂ ಇರುತ್ತದೆ.

ಅಧ್ಯಾಪಕ ಮಿತ್ರರಿಗೆ

*ನಿಮ್ಮ ಸಿಲೆಬಸ್ ಮುಗಿಸಿದ ಬಳಿಕ ಮುಖ್ಯಾಂಶಗಳ ಪಟ್ಟಿ ಕೊಡಿ. ಕನಿಷ್ಠ ಎರಡು ಪ್ರಶ್ನೆಪತ್ರಿಕೆಗಳನ್ನು ತರಗತಿಯಲ್ಲೇ ಬಿಡಿಸಿ ಮಾರ್ಗದರ್ಶನ ನೀಡಿ.

*ಆಂತರಿಕ ಮೌಲ್ಯಮಾಪನ, ಪರೀಕ್ಷೆಯ ಕರ್ತವ್ಯ, ಮೌಲ್ಯಮಾಪನ ಇತ್ಯಾದಿ ಅನೇಕ ಒತ್ತಡದ ಕೆಲಸಗಳನ್ನು ನಿರ್ವಹಿಸುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

*ಪದವಿವಿದ್ಯಾರ್ಥಿಗಳೇ ಆದರೂ ಅವರಿನ್ನೂ ವಿದ್ಯಾರ್ಥಿಗಳೇ. ಪ್ರೀತಿಯಿರಲಿ.

*ಪರೀಕ್ಷಾಂಕಣದಲ್ಲಿ ವಿದ್ಯಾರ್ಥಿಗಳು ಅಧಿಕ ಒತ್ತಡದಲ್ಲಿರುತ್ತಾರೆ. ಗಾಬರಿಯಲ್ಲಿರುವ ಅವರಿಗೆ ನಿಮ್ಮ ಮಾರ್ಗದರ್ಶನದ ಆವಶ್ಯಕತೆಯಿರುತ್ತದೆ.

*ಪಾಲಕ/ ಪೋಷಕರಿಗೆ 

ನಿಮ್ಮ ಮಕ್ಕಳು ದೊಡ್ಡವರಾಗಿದ್ದಾರೆ, ಪದವಿ ತರಗತಿಯಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ದೂರವಿರಿಸಬೇಡಿ. ಅವರೀಗ ಮೀಸೆ ಬಂದ ಮಕ್ಕಳು! ನಿಮ್ಮ ಆರೈಕೆ ಇನ್ನೂ ಬೇಕು.

*ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬೇಡಿ, ನಿಂದಿಸಬೇಡಿ.

*ಮಕ್ಕಳ ಹಾಜರಾತಿ, ಲಘುಪರೀಕ್ಷೆಗಳ ಅಂಕಗಳ ಬಗ್ಗೆ ಗಮನವಿರಿಸಿ.

*ಅವರ ಓದಿನ ಬಗ್ಗೆ ಆಸಕ್ತಿ ತೋರಿಸಿ, ಅನಾವಶ್ಯಕ ಕುತೂಹಲ, ವಿಚಾರಣೆ ಬೇಡ.

*ಫಲಿತಾಂಶ ಏನೇ ಬಂದರೂ ಸ್ವೀಕರಿಸಿ, ದೂಷಿಸಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry