ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಸ್ಥಳಾಂತರದ ಕೂಗು ಅರಣ್ಯರೋದನ

ಟೊಮೆಟೊ ವಹಿವಾಟಿಗೆ ಏಷ್ಯಾ ಖಂಡದಲ್ಲೇ ಹೆಸರುವಾಸಿಯಾದ ಮಾರುಕಟ್ಟೆ: ಮೂಲಸೌಕರ್ಯ ಮರೀಚಿಕೆ
Last Updated 20 ಮೇ 2018, 13:39 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದ್ದು, ಮಾರುಕಟ್ಟೆ ಸ್ಥಳಾಂತರದ ಕೂಗು ಅರಣ್ಯರೋದನವಾಗಿದೆ.

ನಗರದ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ 1980ರಲ್ಲಿ ಕಾರ್ಯಾರಂಭ ಮಾಡಿದ ಈ ಮಾರುಕಟ್ಟೆಯು ಟೊಮೆಟೊ ವಹಿವಾಟಿಗೆ ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿದೆ.

ಮಾರುಕಟ್ಟೆ ಕಾರ್ಯಾರಂಭ ಮಾಡಿದಾಗ ಸುಮಾರು 22 ಎಕರೆ ವಿಸ್ತಾರವಾಗಿತ್ತು. ನಂತರ 4 ಎಕರೆ ಜಾಗವನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಾಫೆಡ್‌) ಮಾರಾಟ ಮಾಡಲಾಯಿತು. ಆರಂಭದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಪ್ರಮಾಣ ಕಡಿಮೆಯಿತ್ತು. ವರ್ಷಗಳು ಉರುಳಿದಂತೆ ತರಕಾರಿ ಬೆಳೆಗಾರರ ಸಂಖ್ಯೆ ಹೆಚ್ಚಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ದ್ವಿಗುಣವಾಯಿತು.

ಮಾರುಕಟ್ಟೆಯಲ್ಲಿ ಸದ್ಯ 178 ತರಕಾರಿ ಮಂಡಿಗಳಿವೆ. ಜತೆಗೆ ಮಾರುಕಟ್ಟೆಯ ಆವರಣದ ರಸ್ತೆಗಳ ಇಕ್ಕೆಲಗಳಲ್ಲಿ 30ಕ್ಕೂ ಹೆಚ್ಚು ವರ್ತಕರು ತರಕಾರಿ ವಹಿವಾಟು ನಡೆಸುತ್ತಿದ್ದಾರೆ. ಪ್ರತಿನಿತ್ಯ ಸುಮಾರು 150 ಲಾರಿ ಲೋಡ್‌ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ. 5 ಲೋಡ್‌ನಷ್ಟು ಇತರ ತರಕಾರಿಗಳು ಬರುತ್ತಿವೆ. ಜತೆಗೆ ಅಕ್ಕಿ, ರಾಗಿಯಂತಹ ದಿನಸಿ ಪದಾರ್ಥಗಳ ವಹಿವಾಟು ನಡೆಯುತ್ತಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳ ಜತೆಗೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೂ ಈ ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಬರುತ್ತಾರೆ. ಅಲ್ಲದೇ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದಲೂ ಲೋಡ್‌ಗಟ್ಟಲೆ ತರಕಾರಿ ಬರುತ್ತದೆ. ಮಾರುಕಟ್ಟೆಯಿಂದ ರಾಜಸ್ತಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರ ರಾಜ್ಯಕ್ಕೆ ಪ್ರತಿನಿತ್ಯ ಇಲ್ಲಿಂದ ತರಕಾರಿ ಪೂರೈಕೆಯಾಗುತ್ತಿವೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ತರಕಾರಿ ರಫ್ತಾಗುತ್ತಿವೆ.

ಅಭಿವೃದ್ಧಿಯ ನಿರ್ಲಕ್ಷ್ಯ: ಸುಂಕದ ರೂಪದಲ್ಲಿ ಎಪಿಎಂಸಿ ಆಡಳಿತ ಮಂಡಳಿಗೆ ಕೋಟಿಗಟ್ಟಲೆ ಆದಾಯ ಬಂದರೂ ಮಾರುಕಟ್ಟೆ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ನೈರ್ಮಲ್ಯ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ತರಕಾರಿಯೊಂದಿಗೆ ರಾತ್ರಿಯೇ ಮಾರುಕಟ್ಟೆಗೆ ಬರುವ ರೈತರಿಗೆ ಉಳಿದುಕೊಳ್ಳಲು ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ರೈತರು ಮಾರುಕಟ್ಟೆ ಆವರಣದ ಕಟ್ಟೆಗಳ ಮೇಲೆ ಅಥವಾ ವಾಹನಗಳಲ್ಲೇ ಮಲಗುವ ಪರಿಸ್ಥಿತಿ ಇದೆ.

ದಲ್ಲಾಳಿಗಳ ಹಾವಳಿ, ತೂಕದಲ್ಲಿ ಮೋಸ, ಕಮಿಷನ್‌ ದಂಧೆ, ತರಕಾರಿ ತೂಕದಲ್ಲಿ ಕಡಿತ (ಜಾಕ್‌ಪಾಟ್‌), ಮಂಡಿ ಮಾಲೀಕರ ಶೋಷಣೆಯಿಂದ ಅನ್ನದಾತರು ಹೈರಾಣಾಗಿದ್ದಾರೆ. ರೈತರ ಹಿತ ಕಾಯಬೇಕಾದ ಎಪಿಎಂಸಿ ಅಧಿಕಾರಿಗಳು ಹಣದಾಸೆಗೆ ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಜತೆ ಸೇರಿ ರೈತರ ರಕ್ತ ಹೀರುತ್ತಿದ್ದಾರೆ.

ಜಾಗದ ಸಮಸ್ಯೆ: ಮಾರುಕಟ್ಟೆ ಆವರಣ ಕಿರಿದಾಗಿರುವ ಕಾರಣ ವಹಿವಾಟಿಗೆ ಸಮಸ್ಯೆಯಾಗುತ್ತಿದೆ. ವಾಹನಗಳ ನಿಲುಗಡೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದ ಕಾರಣ ಚಾಲಕರು ಪಕ್ಕದ ಸರ್ವಿಸ್‌ ರಸ್ತೆ ಹಾಗೂ ಮಾಲೂರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಎಪಿಎಂಸಿ ಪಕ್ಕದ ಸರ್ವಿಸ್‌ ರಸ್ತೆ ಮತ್ತು ಮಾಲೂರು ರಸ್ತೆಯಲ್ಲಿ ತರಕಾರಿ ಸಾಗಣೆ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುವ ದೃಶ್ಯ ಪ್ರತಿನಿತ್ಯ ಕಂಡುಬರುತ್ತದೆ.

ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬಂದ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಿ ಸಮಸ್ಯೆ ಗಂಭೀರವಾಗುತ್ತದೆ. ವಾಹನಗಳಿಗೆ ಮಾರುಕಟ್ಟೆಯ ಒಳಗೆ ಹೋಗಲು ಸಾಧ್ಯವಾಗದೆ ಪ್ರವೇಶದ್ವಾರದಲ್ಲೇ ನಿಲ್ಲುತ್ತವೆ. ಇದರಿಂದ ತರಕಾರಿಗಳು ಹರಾಜು ಆಗದೆ ರೈತರಿಗೆ ನಷ್ಟವಾಗುತ್ತಿದೆ.

ನೈರ್ಮಲ್ಯ ಸಮಸ್ಯೆ: ಪ್ರತಿನಿತ್ಯ ಮಾರಾಟವಾಗದೆ ಉಳಿಯುವ ತರಕಾರಿಗಳ ವಿಲೇವಾರಿಗೆ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಮಂಡಿ ಮಾಲೀಕರು ಹಾಗೂ ರೈತರು ಉಳಿದ ತರಕಾರಿಗಳನ್ನು ಮಾರುಕಟ್ಟೆ ಆವರಣದಲ್ಲೇ ಸುರಿಯುತ್ತಿದ್ದಾರೆ. ನಿರುಪಯುಕ್ತ ತರಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡದ ಕಾರಣ ಮಾರುಕಟ್ಟೆಯಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ.

ವಿಲೇವಾರಿಯಾಗದೆ ಉಳಿದ ತರಕಾರಿಗಳು ಸಂಪೂರ್ಣ ಕೊಳೆತು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದೆ. ಇದರಿಂದ ರೈತರು ಹಾಗೂ ವರ್ತಕರು ಮಾರುಕಟ್ಟೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ನೈರ್ಮಲ್ಯ ಸಮಸ್ಯೆಯಿಂದ ಹಂದಿ, ನೊಣ, ಸೊಳ್ಳೆಕಾಟ ಹೆಚ್ಚಿದೆ. ತರಕಾರಿಗಳ ಮೇಲೆ ನೊಣಗಳು ಕುಳಿತಿರುವ ದೃಶ್ಯ ಕಂಡುಬರುತ್ತದೆ.

ಪಶು ಆಹಾರ ಘಟಕ: ಎಪಿಎಂಸಿಯಲ್ಲಿನ ತರಕಾರಿ ತ್ಯಾಜ್ಯದಿಂದ ಪಶು ಆಹಾರ ತಯಾರಿಸುವ ಘಟಕ ಆರಂಭಿಸುವ ಸಂಬಂಧ ಜಿಲ್ಲಾಡಳಿತವು ಈ ಹಿಂದೆ ಕರ್ನಾಟಕ ಹಾಲು ಮಹಾಮಂಡಳದೊಂದಿಗೆ (ಕೆಎಂಎಫ್‌) ಚರ್ಚೆ ನಡೆಸಿತ್ತು. ಪಶು ಆಹಾರ ಘಟಕದ ಮೂಲಕ ಮಾರುಕಟ್ಟೆಯಲ್ಲಿನ ತರಕಾರಿ ತ್ಯಾಜ್ಯದ ಸಮಸ್ಯೆ ಪರಿಹರಿಸುವುದು ಜಿಲ್ಲಾಡಳಿತದ ಚಿಂತನೆಯಾಗಿತ್ತು. ಆದರೆ, ಜಿಲ್ಲಾಡಳಿತದ ಪ್ರಯತ್ನ ಕೈಗೂಡಲಿಲ್ಲ.

ತುಂತುರು ಮಳೆ ಬಂದರೂ ಮಾರುಕಟ್ಟೆ ಆವರಣ ಕೆಸರು ಗದ್ದೆಯಂತಾಗುತ್ತಿದೆ. ಆವರಣದಲ್ಲಿ ವಿಲೇವಾರಿಯಾಗದೆ ಬಿದ್ದಿರುವ ತರಕಾರಿ ತ್ಯಾಜ್ಯದ ಜತೆ ಮಳೆ ನೀರು ಸೇರಿ ರಸ್ತೆಗಳು ರಾಡಿಯಾಗುತ್ತವೆ. ಮಳೆಗಾಲದ ಸಂದರ್ಭದಲ್ಲಿ ಮಾರುಕಟ್ಟೆ ಆವರಣದಲ್ಲಿ ಓಡಾಡುವುದು ದೊಡ್ಡ ಸಾಹಸವೇ ಸರಿ.

ಆರಂಭದಲ್ಲೇ ವಿಘ್ನ: ಮಾರುಕಟ್ಟೆ ವಿಸ್ತರಣೆ ಮಾಡುವಂತೆ ಅಥವಾ ತರಕಾರಿ ಬೇರೆಡೆಗೆ ಸ್ಥಳಾಂತರ ಮಾಡುವಂತೆ ರೈತರು, ವರ್ತಕರು, ಮಂಡಿ ಮಾಲೀಕರು ಹಲವು ದಶಕಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಈ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರವು ಮಾರುಕಟ್ಟೆಯ ಪಕ್ಕದಲ್ಲೇ ಇರುವ ನಾಫೆಡ್‌ಗೆ ಸೇರಿದ 4 ಎಕರೆ ಜಾಗದಲ್ಲಿ 2 ಎಕರೆಯನ್ನು ಎಪಿಎಂಸಿಗೆ ಕೊಡಲು ನಾಲ್ಕೈದು ವರ್ಷಗಳ ಹಿಂದೆ ನಿರ್ಧಾರ ಕೈಗೊಂಡಿತು. ಈ ನಿರ್ಧಾರವನ್ನು ಪ್ರಶ್ನಿಸಿ ನಾಫೆಡ್‌ ಹೈಕೋರ್ಟ್‌ ಮೆಟ್ಟಿಲೇರಿದ ಕಾರಣ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಹೀಗಾಗಿ ಮಾರುಕಟ್ಟೆ ವಿಸ್ತರಣೆಯ ಪ್ರಯತ್ನಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು.

ಪ್ರಯತ್ನ ಸ್ಥಗಿತ: ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಮಾಲೂರು ರಸ್ತೆಯ ವಕ್ಕಲೇರಿ ಬಳಿ ಅರಣ್ಯ ಇಲಾಖೆಯ 25 ಎಕರೆ ಸರ್ಕಾರಿ ಜಮೀನು ಗುರುತಿಸಿ ಅಲ್ಲಿಗೆ ಟೊಮೆಟೊ ಮಾರುಕಟ್ಟೆ ಸ್ಥಳಾಂತರಿಸುವ ಪ್ರಯತ್ನ ಮಾಡಿದರು. ಜತೆಗೆ ಆ ಜಾಗದ ಸುತ್ತಮುತ್ತಲಿನ 35 ಎಕರೆ ಕೃಷಿ ಜಮೀನು ಗುರುತಿಸಿ ಎಪಿಎಂಸಿಗೆ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ, ಕೃಷಿ ಜಮೀನು ನೀಡಲು ರೈತರು ಒಪ್ಪದಿದ್ದರಿಂದ ಮಾರುಕಟ್ಟೆ ಸ್ಥಳಾಂತರದ ಪ್ರಯತ್ನ ಸ್ಥಗಿತಗೊಂಡಿತು.

ಚಲುವನಹಳ್ಳಿ ಬಳಿ ಜಾಗ: ವಕ್ಕಲೇರಿ ಬಳಿ ಜಾಗ ಸಿಗದ ಕಾರಣ ಎಪಿಎಂಸಿ ಆಡಳಿತ ಮಂಡಳಿಯು ನಾಲ್ಕೈದು ತಿಂಗಳ ಹಿಂದೆ ತಾಲ್ಲೂಕಿನ ಚಲುವನಹಳ್ಳಿ ಸಮೀಪ 40 ಎಕರೆ ಗೋಮಾಳದ ಜಮೀನು ಗುರುತಿಸಿ ಅಲ್ಲಿಗೆ ಟೊಮೆಟೊ ಮಾರುಕಟ್ಟೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿತು. ಈ ಸಂಬಂಧ ಆಡಳಿತ ಮಂಡಳಿಯು ನಿರ್ಣಯ ಅಂಗೀಕರಿಸಿ ಗೋಮಾಳದ ಜಾಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಸಂಬಂಧಪಟ್ಟ ಕಡತವು ತಹಶೀಲ್ದಾರ್‌ ಕಚೇರಿಯಲ್ಲಿ ದೂಳು ಹಿಡಿಯುತ್ತಿದೆ. ರೈತರು ಮಾರುಕಟ್ಟೆ ವಿಸ್ತರಣೆ ಹಾಗೂ ಸ್ಥಳಾಂತರದ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಪ್ರಸ್ತಾವ ಸಲ್ಲಿಸಿದ್ದೇವೆ

ಚಲುವನಹಳ್ಳಿ ಬಳಿಯ ಗೋಮಾಳದ ಜಮೀನನ್ನು ಎಪಿಎಂಸಿಗೆ ಕೊಡುವಂತೆ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿ ನಾಲ್ಕೈದು ತಿಂಗಳಾಗಿದೆ. ಆದರೆ, ಕಡತ ಇನ್ನೂ ಪರಿಶೀಲನೆ ಹಂತದಲ್ಲಿದೆ. ಜಿಲ್ಲಾಡಳಿತ ಜಮೀನು ಹಸ್ತಾಂತರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ
–ರವಿಕುಮಾರ್‌, ಎಪಿಎಂಸಿ ಕಾರ್ಯದರ್ಶಿ

ದಶಕದ ಹೋರಾಟ

ಮಾರುಕಟ್ಟೆ ವಿಸ್ತರಿಸುವಂತೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಒಂದು ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ನಗರಕ್ಕೆ ಹತ್ತಿರವಾಗಿರುವಂತೆ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರ ಮಾಡಿದರೆ ಎಲ್ಲರಿಗೂ ಅನುಕೂಲ
ಹರೀಶ್‌, ಸಿಎಂಆರ್‌ ಮಂಡಿ ಮಾಲೀಕ

**
ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ತೀವ್ರವಾಗಿದೆ. ಮಾರುಕಟ್ಟೆ ವಿಸ್ತರಿಸಿದರೆ ಅಥವಾ ಬೇರೆಡೆಗೆ ಸ್ಥಳಾಂತರಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ
– ಕೆ.ನಾರಾಯಣಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ 

**
ಜಾಗದ ಸಮಸ್ಯೆಯಿಂದ ತರಕಾರಿ ವಾಹನಗಳು ಪ್ರವೇಶದ್ವಾರದಲ್ಲೇ ನಿಲ್ಲುವುದರಿಂದ ತರಕಾರಿ ಹರಾಜಾಗದೆ ನಷ್ಟ ಅನುಭವಿಸುತ್ತಿದ್ದೇವೆ
– ಕೆ.ವೈ.ಗಣೇಶ್‌ಗೌಡ, ಕೋಟಿಗಾನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT