ವಾಸ್ತು ಶಿಲ್ಪ ವೈಭವದ ಗೋಣಿಬಸವೇಶ್ವರ ದೇವಸ್ಥಾನ

7

ವಾಸ್ತು ಶಿಲ್ಪ ವೈಭವದ ಗೋಣಿಬಸವೇಶ್ವರ ದೇವಸ್ಥಾನ

Published:
Updated:
ವಾಸ್ತು ಶಿಲ್ಪ ವೈಭವದ ಗೋಣಿಬಸವೇಶ್ವರ ದೇವಸ್ಥಾನ

ಮುಂಡರಗಿ: ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ದಂಡೆ ಮೇಲಿರುವ ಗುಮ್ಮಗೋಳ ಗ್ರಾಮವು ಹಮ್ಮಿಗಿ ಗ್ರಾಮದಲ್ಲಿರುವ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿದ್ದು, ಗುಮ್ಮಗೋಳ ಗ್ರಾಮದಲ್ಲಿರುವ ಗೋಣಿಬಸವೇಶ್ವರ ದೇವಸ್ಥಾನವು ಬ್ಯಾರೇಜಿನ ಹಿನ್ನೀರಿನಲ್ಲಿ ಕಣ್ಮರೆಯಾಗಲಿದೆ.

ಗ್ರಾಮದ ಹೊರವಲಯದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಗೋಣಿ ಬಸವೇಶ್ವರ ದೇವಸ್ಥಾನವು ತುಂಬಾ ಪ್ರಾಚೀನವಾಗಿದ್ದು, ಶಿಲ್ಪ ವೈಭವದಿಂದ ಕಂಗೊಳಿಸುತ್ತಿದೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ 17ನೇ ಶತಮಾನದಲ್ಲಿ ಗೋಣಿ ಬಸವೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಪ್ಪು ಮಿಶ್ರಿತ ನೀಲಿ ಛಾಯೆಯ ಕಲ್ಲನ್ನು ಬಳಸಿ ದ್ರಾವಿಡ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಕಲ್ಲಿನಲ್ಲಿ ಕೆತ್ತಿರುವ ಸೂಕ್ಷ್ಮ ಚಿತ್ರಗಳು ನೋಡುಗರ ಗಮನ ಸೆಳೆಯುತ್ತವೆ. ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕ ಗೋಪುರವಿದ್ದು, ಮುಖ್ಯ ಗೋಪುರದ ಎಡ ಹಾಗೂ ಬಲ ಬದಿಗಳಲ್ಲಿ ಕಿರು ಗೋಪುರಗಳನ್ನು ನಿರ್ಮಿಸಲಾಗಿದೆ. ಗೋಪುರವನ್ನು ತುಂಬಾ ಕಲಾತ್ಮಕವಾಗಿ ನಿರ್ಮಿಸಲಾಗಿದ್ದು, ಶಿಲ್ಪಿಯ ಕೈಚಳಕ ಎದ್ದು ಕಾಣುತ್ತದೆ.

ಕಳೆದ ಹಲವು ದಶಕಗಳಿಂದ ದೇವಸ್ಥಾನದ ಗೋಪುರ, ಕಲ್ಲಿನ ಕಂಬ, ಗೋಡೆ ಮೊದಲಾದವುಗಳಿಗೆ ನಿಯಮಿತವಾಗಿ ಸುಣ್ಣ, ಬಣ್ಣ, ಕೆಮ್ಮಣ್ಣು ಬಳಿಯುತ್ತಿರುವುದರಿಂದ ಕೆತ್ತನೆಯ ಸೂಕ್ಷ್ಮಗಳು ಸುಣ್ಣದಲ್ಲಿ ಹೂತು ಹೋಗಿವೆ. ಕೆತ್ತನೆಯ ನೈಪುಣ್ಯವನ್ನು ಸುಣ್ಣ ಬಣ್ಣಗಳು ಮರೆಮಾಚಿವೆ.

ದೊಡ್ಡ ಗೋಪುರದ ಬಾಗಿಲನ್ನು ದಾಟಿದ ತಕ್ಷಣ ಸುಂದರವಾದ ಕಲ್ಲಿನ ಕಲ್ಯಾಣಿಯನ್ನು ನಿರ್ಮಿಸಲಾಗಿದೆ. ಕಲ್ಯಾಣಿಯ ಸುತ್ತಲೂ ವಿವಿಧ ಬಗೆಯ ಸುಂದರವಾದ ಕಲಾಕೃತಿಗಳನ್ನು ಕೆತ್ತಲಾಗಿದೆ.

ತುಂಗಭದ್ರಾ ನದಿಯಿಂದ ಕಲ್ಯಾಣಿಗೆ ನೇರ ಸಂಪರ್ಕವಿದೆ ಎಂದು ಹೇಳಲಾಗುತ್ತಿದ್ದು, ತಾಲ್ಲೂಕಿನಲ್ಲಿ ಎಷ್ಟೇ ಬರಗಾಲ ಬಿದ್ದರೂ ಈ ಕಲ್ಯಾಣಿಯಲ್ಲಿ ನೀರು ಬತ್ತುವುದಿಲ್ಲ ಎಂದು ತಿಳಿದು ಬಂದಿದೆ.

ಕಲ್ಯಾಣಿ ನಂತರ ಸುಂದರವಾದ ಕಲ್ಲುಗಳಿಂದ ನವರಂಗವನ್ನು ನಿರ್ಮಿಸಲಾಗಿದೆ. ನವರಂಗದ ಪೂರ್ವ ಭಾಗದಲ್ಲಿ ಕರ್ನಾಟಕವನ್ನು (ಮೈಸೂರು) ಆಳಿದ ಎಲ್ಲ ರಾಜ ಮನೆತಗಳ ಹಾಗೂ ಅರಸರ ಲಾಂಛನಗಳನ್ನು ಒಳಗೊಂಡ ಸುಂದರವಾದ ಸ್ತಂಭವಿದೆ.

ದೇವಸ್ಥಾನದ ಕೊನೆಯಲ್ಲಿ ಕಲ್ಲಿನಿಂದ ಎರಡು ಗರ್ಭಗುಡಿಗಳನ್ನು ನಿರ್ಮಿಸಲಾಗಿದ್ದು, ಒಂದು ಗರ್ಭ ಗುಡಿಯಲ್ಲಿ ಮಲಗಿದ ಭಂಗಿಯಲ್ಲಿರುವ ಬಸವಣ್ಣನ (ನಂದಿ) ಮೂರ್ತಿ ಹಾಗೂ ಇನ್ನೊಂದು ಗರ್ಭ ಗುಡಿಯಲ್ಲಿ ಈಶ್ವರನ ಸುಂದರವಾದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಕೊಟ್ಟೂರು ಬಸವೇಶ್ವರ, ಕೋಲ ಶಾಂತಯ್ಯ, ನಾಯಕನಹಟ್ಟಿ ತಿಪ್ಪೇಸ್ವಾಮಿ ಮೊದಲಾದ ಪಂಚ ಗಣಾಧೀಶ್ವರರಲ್ಲಿ ಮದ್ದಾನ ಸ್ವಾಮಿ ಒಬ್ಬರಾಗಿದ್ದರು.

ಅವರ ಮಗನೇ ಗೋಣಿಬಸವೇಶ್ವರ ಎಂದು ಹೇಳಲಾಗುತ್ತದೆ. ಈ ಕುರಿತಂತೆ ಆಸಕ್ತರು ಹಾಗೂ ಸಂಶೋಧಕರು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾಗಿದೆ.

ಕಾಶೀನಾಥ ಬಿಳಿಮಗ್ಗದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry