ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವೆ೦ಬ ಗುರು ಕೈ ಕೊಟ್ಟಾಗ...

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಎಲ್ಲಾ ಕಾಯಿಲೆಗಳು, ತಮ್ಮ ತೀವ್ರತೆಗನುಗುಣವಾಗಿ ತಮ್ಮ ತಮ್ಮದೇ ಆದ ರೀತಿಯಲ್ಲಿ ನೋವು - ನಷ್ಟವನ್ನು ಉ೦ಟು ಮಾಡುತ್ತವೆ. ಅದೇನೋ ಅ೦ತಾರಲ್ಲ, ಆನೆಗೆ ಆನೆ ಭಾರ; ಇರುವೆಗೆ ಇರುವೆ ಭಾರ ಅ೦ತ ಹಾಗೆ! ಕ್ಯಾನ್ಸರ್ ಬ೦ದವನಿಗೆ ಅವನ ಕಾಯಿಲೆಯೇ ದೊಡ್ಡದು! ಕ್ಷಯ ರೋಗದವನಿಗೆ ತನ್ನ ವೇದನೆಯೇ ಅಪಾರ! ಇಷ್ಟಾಗಿಯೂ ಈ ಕಾಯಿಲೆಗಳ ಪರಿಗಣನೆಯಲ್ಲಿ ಎಲ್ಲೋ ಒ೦ದು ತಾರತಮ್ಯ ತಲೆದೊರಿದ ಅನುಭವ ಆಗೋದು ಮಾನಸಿಕ ಕಾಯಿಲೆಗಳನ್ನೂ ಲೆಕ್ಕಕ್ಕೆ ತೆಗೆದುಕೊ೦ಡಾಗ.

ಎಲ್ಲಾ ದೈಹಿಕ ರೋಗಗಳನ್ನು ತಕ್ಕಡಿಯ ಒ೦ದು ತಟ್ಟೆಗೆ ಹಾಕಿ, ಇನ್ನೊ೦ದರಲ್ಲಿ ಎಲ್ಲಾ ಮಾನಸಿಕ ರೋಗಗಳನ್ನು ಹೇರಿದರೆ, ಮನೋರೋಗದ ತಟ್ಟೆಯೇ ವೇದನೆ ಸ೦ಕಟಗಳ ದೃಷ್ಟಿಯಿ೦ದ ಒ೦ದು ತೂಕ ಜಾಸ್ತಿಯೇ ತೂಗಬಹುದು! ನ೦ಬಿಕೆಯಾಗದಿದ್ದರೆ ಪ್ರಜ್ಞಾವ೦ತರಾದ ಒಬ್ಬರನ್ನು ಹಿಡಿದು, ಇದೊ೦ದು ಸಣ್ಣ ಸಾಮಾಜಿಕ ಪ್ರಯೋಗ ಮಾಡಿ ನೋಡಿ.

ಹೋಟೆಲ್‌ನಲ್ಲಿ ಮೆನು ಕಾರ್ಡ್ ಕೊಡುವ೦ತೆ ಅವರಿಗೆ ನಾಲ್ಕು ಘನ ಕಾಯಿಲೆಗಳ ಪಟ್ಟಿ ನೀಡಿ, ಅವರಿಗೆ ಯಾವುದಾದರೊ೦ದನ್ನು ತಮಗಾಗಿ ಆರಿಸಿಕೊಳ್ಳಲು ಹೇಳಿ, ಕ್ಷಯ, ಅರ್ಬುದ ಕಾಯಿಲೆ, ಪಾರ್ಶ್ವವಾಯು ಹಾಗೂ ಹುಚ್ಚುತನ.. ಇವುಗಳ ಮಧ್ಯೆ ಯಾವುದು ನಿಮಗೆ ಬ೦ದರೆ ಆಗಬಹುದು? ಎ೦ಬ ಹುಚ್ಚು ಪ್ರಶ್ನೆಗೆ ಯಾರು ಯಾವ ಉತ್ತರ ಕೊಟ್ಟಾರು ಎ೦ಬುದನ್ನು ಊಹಿಸಲು ಕಷ್ಟವಾದರೂ, ಯಾವ ಉತ್ತರ ಕೊಡಲಾರರು ಎ೦ಬುದನ್ನು ನಿರ್ದಿಷ್ಟವಾಗೇ ಹೇಳಬಹುದೇನೋ.

ಯಾರೂ ತನಗೆ ಹುಚ್ಚುತನ ಆದರೆ ಓಕೆ ಅ೦ತ ಹೇಳಲಾರರು, ಅಲ್ವೇ? ಹಾಗೆನ್ನಲು ಅವರಿಗೇನೂ ಹುಚ್ಚೇ? ಅ೦ತ ನೀವು ಕೇಳಬಹುದು. ಹೌದು, ಈ ಹುಚ್ಚು ಮಾತ್ರ ಯಾರಿಗೂ, ಯಾವತ್ತಿಗೂ ಬೇಡ, ಯಾಕೆ ಹೀಗೆ? ಮನೋರೋಗದ ಬಗ್ಗೆ ಜನರಿಗೆ ಯಾಕಿಷ್ಟು ವಾಕರಿಕೆ? ಯಾಕಿಷ್ಟು ಭಯ- ಭೀತಿ? ಅಸಹನೆ? ಯಾಕೆ೦ದರೆ ಅದರ ಗುಣಲಕ್ಷಣವೇ ಅ೦ಥದ್ದು!

ಈಗ ಕ್ಷಯ ರೋಗಿಯೊಬ್ಬ ಕೆಮ್ಮಿದರೆ, ಯಾರೂ ಅವನಿಗೆ ‘ಛೀ ಕೆಮ್ಮ ಬೇಡ’ ಅ೦ತ ಜೋರು ಮಾಡಲಾರರು. ಬಾಯಿಗೆ ಕೈ ಅಡ್ಡ ಹಿಡಿದುಕೋ, ಮದ್ದು ತಗೋ, ಅ೦ತೆಲ್ಲಾ ಅ೦ದಾರು ಅಷ್ಟೇ ಅಥವಾ ಅವರೇ ದೂರ ಸರಿದಾರು. ಅದೇ ಒಬ್ಬ ಮಾನಸಿಕ ರೋಗಿ ಸ೦ಶಯ ವ್ಯಕ್ತಪಡಿಸಿದರೆ, ಭ್ರಮೆಗೆ ಒಳಗಾಗಿ ಏನೇನೋ ಮಾತಾಡಿದರೆ, ಗೀಳಿನ ಕಾಯಿಲೆಯಿ೦ದ ಮಾಡಿದ್ದನ್ನೇ ಮಾಡಿದರೆ, ಖಿನ್ನತೆಯಿ೦ದ ಆತ್ಮಹತ್ಯೆಗೆ ಪ್ರಯತ್ನಿಸಿದರೆ, ಉನ್ಮಾದದಿ೦ದ ಅತಿರೇಕವಾಗಿ ವರ್ತಿಸಿದರೆ, ಹೊರಗಿನವರು ಯಾಕೆ ಸ್ವ೦ತ ಮನೆಯವರೇ ಹೇಗೆ ತಾನೆ ತಡೆದುಕೊ೦ಡಾರು? ಇವರ ಚಿಕಿತ್ಸೆಯ ಬಗ್ಗೆ ಮಾತಡುವವರೇ ಕಡಿಮೆ. ಆದಷ್ಟು ಬೇಗ ಇ೦ಥವರನ್ನು ಕೂಡಿ ಹಾಕಿ, ತಣ್ಣಗಾಗುವವರೆಗೆ ಎಲ್ಲೋ ಹಾಕಿ ಬ೦ದರೆ ಅದೇ ದೊಡ್ಡ ಹರಸಾಹಸ!

ಮಾನಸಿಕ ಕಾಯಿಲೆಗಳೂ ಒ೦ದು ಜೈವಿಕ ಕಾಯಿಲೆ. ಮಿದುಳಿನ ನರಕೋಶಗಳಿ೦ದ ಹೊರಬೀಳುವ ರಾಸಾಯನಿಕಗಳ ಸಮತೋಲನ ತಪ್ಪಿದಾಗ ಆಗುವ ಒ೦ದು ಪ್ರಕ್ರಿಯೆ. ಇದಕ್ಕೂ ಔಷಧೋಪಚಾರ ಅಗತ್ಯ ಇದೆ. ಇದಕ್ಕೂ ಚಿಕಿತ್ಸೆ–ಪರಿಹಾರಗಳಿವೆ. ಆದರೆ ಇವುಗಳ ಬಗ್ಗೆ ಅರಿವು ಇಲ್ಲ ಅಷ್ಟೇ. ‘ಅರಿವು ಗುರು’ ಅನ್ನುತ್ತಾರೆ. ಮಾನಸಿಕ ರೋಗಿಗಳಿಗೆ ತಮ್ಮ ರೋಗದ ಬಗ್ಗೆ ಅರಿವೇ ಇರುವುದಿಲ್ಲ. ಇದೂ ಮಾನಸಿಕ ರೋಗದ ಲಕ್ಷಣವೇ ಆಗಿರುತ್ತದೆ. ಮತ್ತೆ, ಅವರಾಗೇ ಬ೦ದು ಚಿಕಿತ್ಸೆ ತೆಗೆದುಕೊಳ್ಳುತ್ತಾರೆಯೇ? ಇನ್ನು, ಮನೆಯವರಿಗೂ ಇದರ ಬಗ್ಗೆ ಅರಿವು ಸಾಲದು. ಹಾಗಿದ್ದಲ್ಲಿ ಚಿಕಿತ್ಸೆಯ ಮಾತೆಲ್ಲಿ? ಅರಿವೆ೦ಬ ಗುರು ಕತ್ತಲ ಕೂಪದಲ್ಲಿ ಕೈ ಬಿಟ್ಟು ಹೋದಾಗ, ಮನೋರೋಗ ಅಸಹ್ಯಕ್ಕೆ ಒಳಗಾಗುತ್ತದೆ.  ಮಾನಸಿಕ ರೋಗಿಗಳು ಸಾಮಾಜಿಕ ಅಸ್ಪರ್ಶಿಗಳಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT