ಮೊದಲ ಸಂಬಳದ ಸಂಭ್ರಮ

7

ಮೊದಲ ಸಂಬಳದ ಸಂಭ್ರಮ

Published:
Updated:
ಮೊದಲ ಸಂಬಳದ ಸಂಭ್ರಮ

ಎಲ್ಲ ಮೊದಲುಗಳೂ ರೋಮಾಂಚನಕಾರಿಯೇ. ಅದರಲ್ಲೂ ‘ಮೊದಲ ಸಂಬಳ’ ಎನ್ನುವುದು ಬಹು ವರ್ಷಗಳ ಕಾತರದ ಕಾಯುವಿಕೆಗೆ ಸಿಗುವ ಅಲ್ಪವಿರಾಮ. ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿರುವಾಗಲೇ ಮೊದಲ ಸಂಬಳದ ಕುರಿತಾಗಿ ನಿರೀಕ್ಷೆ, ಕನಸುಗಳು ಗರಿಗೆದರಿರುತ್ತವೆ.

ಕೆಲವರು ಪ್ರಥಮ ವೇತನದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ಅದನ್ನು ಜತನದಿಂದ ಕಾಪಾಡಬಯಸಿದರೆ, ಮತ್ತೆ ಕೆಲವರು ಆರ್ಥಿಕ ಸ್ವಾತಂತ್ರ್ಯದ ಸಂಕೇತವಾಗಿ ಪರಿಭಾವಿಸುತ್ತಾರೆ. ಇನ್ನೂ ಅನೇಕರಿಗೆ ಸಂಬಳವು ಸ್ವಾಭಿಮಾನ ಹಾಗೂ ವಿಶ್ವಾಸವನ್ನು ಇಮ್ಮಡಿಗೊಳಿಸುವ ಅಸ್ತ್ರ. ಕೆಲವರು ಮಾತ್ರ ಭವಿಷ್ಯತ್ತಿನ ಭದ್ರ ಬುನಾದಿಯಾಗಬಲ್ಲ ವೇದಿಕೆಯಾಗಿಯೂ ಸಂಬಳವನ್ನು ಕಂಡುಕೊಳ್ಳುತ್ತಾರೆ.

ಮೊದಲ ಸಂಬಳ ತಂದ ನವೋಲ್ಲಾಸ, ಪ್ರಥಮ ವೇತನಕ್ಕಾಗಿ ಕಾತರಿಸಿದ ಕ್ಷಣ, ಅದನ್ನು ಸಂಭ್ರಮಿಸಿದ ಬಗೆಯನ್ನು ಈಚಿನ ವರ್ಷಗಳಲ್ಲಿ ಉದ್ಯೋಗವಲಯಕ್ಕೆ ಪದಾರ್ಪಣೆ ಮಾಡಿದ ಕೆಲ ಯುವಕ ಯುವತಿಯರು ಮೆಟ್ರೊದೊಂದಿಗೆ ಹಂಚಿಕೊಂಡಿದ್ದು ಹೀಗೆ...

*

ಕನಸು, ಕನಸಾಗಿಯೇ ಉಳಿಯಿತು

ಮೊದಲ ತಿಂಗಳ ಸಂಬಳ ನನಗೆ ನಿಜಕ್ಕೂ ವರ್ಣನಾತೀತ ಸಂತಸ ತಂದಿತ್ತು. ತಿಂಗಳ ಸಂಬಳ ಬರುವ ಮೊದಲೇ ಹಲವಾರು ಕನಸುಗಳ ಪಟ್ಟಿಯೂ ಸಿದ್ಧವಿತ್ತು. ಈ ಪಟ್ಟಿಯಲ್ಲಿನ ಬಯಕೆಗಳು ಈಡೇರಲು 10 ತಿಂಗಳು ದುಡಿದರೂ ಸಾಲುವುದಿಲ್ಲ ಎಂಬುದರ ಅರಿವಿದ್ದರೂ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದಂತೆ ದೊಡ್ಡ ಕನಸುಗಳನ್ನೇ ಕಾಣುತ್ತಿದ್ದೆ. ಇದರ ನಡುವೆ ಸ್ನೇಹಿತರ ಕಾಟ ಬೇರೆ. ಅಂತೂ ತಿಂಗಳ ಸಂಬಳ ಬಂತು. ಸ್ನೇಹಿತರ ಕಾಟಕ್ಕೆ ಮಣಿದು ಪಾರ್ಟಿಯೇನೋ ಕೊಟ್ಟೆ. ಒಬ್ಬರು, ಇಬ್ಬರು ಎನ್ನುತ್ತಾ ಹೀಗೆ ಪಾರ್ಟಿ ಕೊಡುವುದರಲ್ಲಿಯೇ ತಿಂಗಳು ಉರುಳಿತು. ಕನಸುಗಳ ಪಟ್ಟಿ ಕನಸಾಗಿಯೇ ಉಳಿಯಿತು.

–ನಿತೀನ್‌ ಕುಮಾರ್‌, ವೈಟ್‌ಫೀಲ್ಡ್‌

*

‘ನೈಕಿ’ ಶೂ ಖರೀದಿಯ ಗುರಿ

ನಾಳೆ ಎನ್ನುವ ಶಬ್ದವೇ ನನಗೆ ಅಲರ್ಜಿ. ಹಾಗಾಗಿಯ ನಾನು ಯಾವತ್ತೂ ಸಂಬಳವನ್ನು ಉಳಿತಾಯ ಮಾಡುವ ಉಸಾಬರಿಗೆ ಹೋಗಿ‌ಲ್ಲ. ಏಕೆಂದರೆ ಅದು ನನ್ನಿಂದ ಅಸಾಧ್ಯ. ಕೆಲಸ ಸಿಗುವುದಕ್ಕೂ ಮೊದಲು ಸ್ನೇಹಿತರೊಂದಿಗೆ ಮಾಲ್‌ಗೆ ಹೋದಾಗಲೆಲ್ಲ ನನ್ನಲ್ಲೊಂದು ಕನಸು ಗಟ್ಟಿಯಾಗುತ್ತಿತ್ತು. ನನ್ನ ಮೊದಲ ತಿಂಗಳ ಸಂಬಳದಲ್ಲಿ ‘ನೈಕಿ’ ಶೂ ಖರೀದಿಸಬೇಕೆಂದು. ಅದಕ್ಕಾಗಿಯಾದರೂ ನನ್ನ ಮೊದಲ ಸಂಬಳ ಕನಿಷ್ಠ ಪಕ್ಷ ಆ ಶೂಗಳ ಬೆಲೆಗಿಂತ ಜಾಸ್ತಿ ಇರಬೇಕೆಂದುಕೊಳ್ಳುತ್ತಿದ್ದೆ. ಆದರೆ, ಕೆಲಸಕ್ಕೆ ಸೇರಿದ ಂತರವೇ ತಿಂಗಳ ಸಂಬಳ ಆ ಶೂ ಖರೀದಿಗೆ ಸಾಲದೆನ್ನುವ ವಾಸ್ತವ ಅರಿವಾಯಿತು. ಆದರೂ ನನ್ನ ಭೀಷ್ಮ ಪ್ರತಿಜ್ಞೆಯೊಂದಿಗೆ ರಾಜಿಮಾಡಿಕೊಳ್ಳಲಾರದೆ, ಓವರ್‌ ಟೈಮ್‌ (ಓ.ಟಿ) ಕೆಲಸ ಮಾಡಿ ಆ ಶೂಗಳನ್ನು ಖರೀದಿಸಿದೆ. ಇಂದಿಗೂ ಆ ಶೂ ಧರಿಸಲು ಮುಹೂರ್ತ ಕೂಡಿ ಬಂದಿಲ್ಲ. ನಿತ್ಯ ನೋಡಿಯೇ ಖುಷಿಪಡುತ್ತಿದ್ದೇನೆ.

–ಅವಿನಾಶ್, ಹೆಬ್ಬಾಳ

*

ಪುನೀತ್‌ ಬರ್ತ್‌ಡೇಗೆ ಹೋಯಿತು

ನೆಚ್ಚಿನ ನಟ ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬದಂದೇ ನನ್ನ ಮೊದಲ ಸಂಬಳ ಕೈಸೇರಿದ್ದು. ಸಂಭ್ರಮಿಸಲು ಎರಡೆರಡು ಕಾರಣಗಳಿದ್ದವು! ಸ್ನೇಹಿತರಿಗೆ ಪಾರ್ಟಿ ಕೊಡಿಸುವುದಾಗಿ ಒಪ್ಪಿಸಿ ಎಲ್ಲರನ್ನೂ ಕರೆದುಕೊಂಡು ಮೊದಲು ಸದಾಶಿವನಗರದಲ್ಲಿನ ಅಪ್ಪು ಮನೆ ಮುಂದೆ ಜಮಾಯಿಸಿದೆವು. ಜನಜಂಗುಳಿಯಲ್ಲಿ ಪುನೀತ್‌ ಅವರನ್ನು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿದೆವು. ಆ ಸಂಭ್ರಮದಲ್ಲಿ ನನ್ನ ಪರ್ಸ್‌ ಕಳೆದಿದೆ ಎನ್ನುವುದು ಅನುಭವಕ್ಕೆ ಬರಲೇ ಇಲ್ಲ. ಹಾಗೆ ಖುಷಿಯಲ್ಲಿರುವಾಗಲೇ ಸ್ನೇಹಿತರಲ್ಲಿ ಹೇಳಿದೆ, ‘ಸಂಬಳ ಬಂದಿದೆ ಪಾರ್ಟಿ ಕೊಡುತ್ತೇನೆ ಬನ್ನಿ’ ಎಂದು ಆಹ್ವಾನಿಸಿದೆ. ಆದರೆ ಜೇಬಿನಲ್ಲಿ ಪರ್ಸ್‌ ಇರಲಿಲ್ಲ! ಮೊದಲ ಸಂಬಳದ ಜೊತೆಗೆ ಅಪ್ಪ, ಅಮ್ಮ ಕೊಟ್ಟಿದ್ದ ಪಾಕೆಟ್‌ ಮನಿಯೂ ಕಳೆದಿತ್ತು. ಹೇಳಲಾರದ ಸಂಕಟ ಹೊಟ್ಟೆಯೊಳಗೆ. ಆದರೂ ಸಮಾಧಾನಮಾಡಿಕೊಳ್ಳಲು ಪುನೀತ್‌ ಹುಟ್ಟುಹಬ್ಬದಲ್ಲಿ ಕಳೆದಿದೆ ಎನ್ನುವ ಹುಚ್ಚು ಅಭಿಮಾನದ ಕಾರಣವಿತ್ತು. ಇಂದಿಗೂ ನಾನು ನನ್ನ ಮೊದಲ ಸಂಬಳವನ್ನು ಪುನೀತ್‌ ಅವರ ಬರ್ತ್‌ಡೇಗೆ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

–ಅಮಿತ್‌, ಯಶವಂತಪುರ

*

ಕೆಲಸ ಸಿಕ್ಕಿತು ಸಂಬಳ ಸಿಗಲಿಲ್ಲ!

ಅಂತೂ, ಇಂತೂ ನಾನು ಕೆಲಸಕ್ಕೆ ಸೇರಿದೆ. ಸಂಬಳದ ದಿನ ಸಮೀಪಿಸುತ್ತಿದ್ದಂತೆ ಕನಸಿನ ಪಟ್ಟಿಯೂ ಬೆಳೆದಿತ್ತು. ಆದರೆ, ಮೊದಲ ತಿಂಗಳ ಸಂಬಳ ಮಾತ್ರ ಬರಲೇ ಇಲ್ಲ. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆ ಮೊದಲ ತಿಂಗಳ ಸಂಬಳವನ್ನು ನೀಡಲೇ ಇಲ್ಲ. ಹೋಗಲಿ ಎರಡನೇ ತಿಂಗಳು ಎರಡು ತಿಂಗಳ ಸಂಬಳವೂ ಬರುತ್ತದೆಂಬ ನಿರೀಕ್ಷೆಯಲ್ಲಿದ್ದ ನನಗೆ ಮತ್ತೆ ನಿರಾಸೆ. ತಡವಾಗಿ ಬಂದ ಸಂಬಳ, ವೇತನದ ನಿರೀಕ್ಷೆಯಲ್ಲಿ ಮಾಡಿದ್ದ ಸಾಲವನ್ನು ಪೂರೈಸುವಲ್ಲಿಗೆ ಸಾಕಾಯಿತು. ಅಷ್ಟು ಹೊತ್ತಿಗೆ ಮೊದಲ ಸಂಬಳದ ಕಾತರ, ಉಮೇದು ಉಳಿದಿರಲಿಲ್ಲ.

–ಮವೀನಾ, ಹುಣಸಮಾರನಹಳ್ಳಿ

*

ನಮ್ಮಪ್ಪ ದೇವರ ಹುಂಡಿಗೆ ಹಾಕಿದ್ರು

ನನ್ನ ತಂದೆ ಅಪ್ಪಟ ದೈವಭಕ್ತರು. ದೇವರ ಕೃಪೆ ಇಲ್ಲದೆ ವಿಶ್ವದಲ್ಲಿ ಒಂದು ಹುಲ್ಲುಕಡ್ಡಿಯೂ ಮಿಸುಕಾಡಲಾರದು ಎಂಬ ಬಲವಾದ ನಂಬಿಕೆ ಅವರದು. ನಾನು ಶಿಕ್ಷಣ ಪೂರೈಸಿ ಕೆಲಸಕ್ಕೆ ತೆರಳುವ ಮುನ್ನವೇ ಅಪ್ಪ ಮುಕ್ಕೋಟಿ ದೇವರುಗಳಲ್ಲಿ ಹರಸಿಕೊಂಡಿದ್ದರು. ಹಾಗಾಗಿ ನನ್ನ ಮೊದಲ ಸಂಬಳ ನಾನು ಖರ್ಚು ಮಾಡುವುದಿರಲಿ, ಸರಿಯಾಗಿ ಕಣ್ಣಿನಲ್ಲಿ ನೋಡಲು, ಮುಟ್ಟಲೂ ಬಿಡಲಿಲ್ಲ. ನನಗೆ ಬಂದ ₹ 21,100 ಮೊದಲ ಸಂಬಳವಷ್ಟೂ ಧರ್ಮಸ್ಥಳ, ತಿರುಪತಿ, ಮಂದಾರ್ತಿ ಎನ್ನುತ್ತಾ ಎಲ್ಲ ದೇವಾಲಯಗಳ ಹುಂಡಿಗಳಿಗೆ ಧಾರೆ ಎರೆದರು. ಅದರಿಂದ ನನಗೇನೂ ಖುಷಿಯಾಗಿಲ್ಲ. ಆದರೆ, ನನ್ನ ಅಪ್ಪನಿಗೆ ಆದ ಆನಂದಕ್ಕೆ ಪಾರವೇ ಇಲ್ಲ.

–ಚೇತನ, ಶ್ರೀರಾಮಪುರ

*

ಮೊಬೈಲ್‌ ಫೋನ್‌ ತಗೊಂಡೆ

ಕಾಲೇಜು ದಿನಗಳಲ್ಲಿಯೇ ಎಲ್ಲರ ಬಳಿ ಬಗೆ ಬಗೆಯ ಸ್ಮಾರ್ಟ್ ಫೋನ್‌ಗಳಿದ್ದವು. ಇದನ್ನು ನೋಡಿಯೋ ಏನೋ ಮನೆಯಲ್ಲಿ ನನಗಾಗಿ ಸ್ಮಾರ್ಟ್‌ ಫೋನ್‌ ಒಂದನ್ನು ಖರೀದಿಸಿದ್ದರು. ಆದರೆ ನಾನದನ್ನು ತೆಗೆದುಕೊಳ್ಳಲಿಲ್ಲ. ನನ್ನ ಮೊದಲ ಸಂಬಳದಲ್ಲಿ ನಾನೇ ಸ್ಮಾರ್ಟ್‌ ಫೋನ್ ಖರೀದಿಸಬೇಕೆಂಬ ಹಂಬಲವಿತ್ತು. ಅದರಂತೆ ಮೊದಲ ಸಂಬಳದ ಒಂದು ರೂಪಾಯಿಯನ್ನೂ ಬೇರಾವ ಕಾರಣಗಳಿಗೂ ಉಪಯೋಗಿಸದೆ, ಪೂರ್ತಿ ಹಣದಿಂದ ಸ್ಮಾರ್ಟ್‌ ಪೋನ್ ಖರೀದಿಸಿದೆ. ಎರಡನೇ ತಿಂಗಳ ಸಂಬಳ ಬರುವ ಮುನ್ನವೇ ಮೊಬೈಲ್ ಒಡೆದಿತ್ತು. ನನಗೂ ಈ ಸ್ಮಾರ್ಟ್‌ ಫೋನ್‌ಗಳಿಗೂ ಸರಿಬರುವುದಿಲ್ಲ ಎಂದು ತಿಳಿದು ಎರಡನೇ ತಿಂಗಳ ಸಂಬಳದಲ್ಲಿ ಒಂದು  ನೋಕಿಯಾ ಬೇಸಿಕ್‌ ಸೆಟ್‌ ಖರೀದಿಸಿದೆ. ಅದನ್ನು ಮಾತ್ರ ನಾನೇ ಅನೇಕ ಬಾರಿ ಬಿಟ್ಟುಬಂದರೂ ಮತ್ತೆ ಸುತ್ತಿ, ಬಳಸಿ ಬಂದು ನನ್ನ ಕೈಸೇರುತ್ತದೆ. ಯಾವ ಜನುಮದ ಅನುಬಂಧವೊ ಎನ್ನುವಂತೆ. ಆಗೆಲ್ಲಾ ಅಂದುಕೊಳ್ಳುತ್ತೇನೆ ಮೊದಲ ತಿಂಗಳ ಸಂಬಳದಲ್ಲಿಯೇ ನಾನಿದನ್ನೇ ಖರೀದಿಸಬೇಕಿತ್ತು ಎಂದು.

–ಅಶೋಕ, ಸಂಜಯನಗರ

*

ಅಮ್ಮನಿಗೆ ಸೀರೆ ಕೊಡಿಸಿದ್ದೆ

ಮೊದಲ ತಿಂಗಳ ಸಂಬಳದಲ್ಲಿ ಬಹುದಿನದ ಆಸೆಯಂತೆ ಅಮ್ಮನಿಗೆ ಮೈಸೂರು ಸಿಲ್ಕ್‌ ಸೀರೆಯನ್ನು ಕೊಡಿಸಿದ್ದೆ. ಅಮ್ಮನ ಬಳಿ ಸಾಕಷ್ಟು ಬೆಲೆಬಾಳುವ ಬೇರೆ ಸೀರೆಗಳಿದ್ದರೂ, ನಾನೇ ಆ ನಂತರದ ದಿನಗಳಲ್ಲಿ ಅದಕ್ಕೂ ದುಬಾರಿ ಸೀರೆ ನೀಡಿದ್ದರೂ ಅಮ್ಮನಿಗೆ ಮಾತ್ರ ನನ್ನ ಮೊದಲ ತಿಂಗಳ ಸಂಬಳದ ಸೀರೆಯೇ ಅಚ್ಚುಮೆಚ್ಚು. ಇಂದಿಗೂ ಬಹಳ ಆಪ್ತರ ಮದುವೆಯೆಂದರೆ, ಅಮ್ಮ ಆ ಸೀರೆಯನ್ನೇ ಉಡುತ್ತಾರೆ. ಆ ಸೀರೆಯನ್ನು ಮಡಚಿ ಅಮ್ಮ ಬೀರಿನೊಳಗೆ ಇಡುವಾಗ ಅಮ್ಮನ ಸಂಭ್ರಮವನ್ನು ಪದಗಳಲ್ಲಿ ವರ್ಣಿಸುವುದೇ ಅಸಾಧ್ಯ.

–ಸುಷ್ಮಾ, ಗುಟ್ಟಳ್ಳಿ.

*

ಶೋಕೇಸ್‌ನಲ್ಲಿಟ್ಟಿದ್ದೇನೆ!

ಮೊದಲ ಸಂಬಳ ಬಂದಾಗ ಖುಷಿಯಲ್ಲಿ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ. ಅಪ್ಪ, ಅಮ್ಮನಿಗೆ ಕೊಡುವುದ? ತಮ್ಮನಿಗೆ ಏನಾದರೂ ಉಡುಗೊರೆ ಕೊಡುವುದಾ ಅಥವಾ ಸ್ನೇಹಿತರಿಗೆ ಪಾರ್ಟಿ ಕೊಡುವುದಾ ಎಂದು. ಕೊನೆಗೆ ಯಾವುದನ್ನು ಮಾಡುವುದೆಂಬ ಸ್ಪಷ್ಟ ನಿರ್ಧಾರಕ್ಕೆ ಬರಲಾರದೆ, ಸುಂದರವಾದ ಫ್ರೇಮ್‌ ಒಂದರೊಳಗೆ ಲ್ಯಾಮಿನೇಷನ್‌ ಮಾಡಿಸಿ ಮನೆಯ ಷೋಕೇಸ್‌ ಒಳಗೆ ಇಟ್ಟಿದ್ದೇನೆ. ನಿತ್ಯ ನೋಡಿ ಸಂಭ್ರಮಿಸಬಹುದೆಂದು ನಾನಂದುಕೊಂಡಿದ್ದೆ. ಆದರೆ, ಮನೆಗೆ ಬಂದವರೆಲ್ಲಾ ಖೋಟಾ ನೋಟುಗಳನ್ನೇಕೆ ಶೋಕೇಸ್‌ನಲ್ಲಿ ಇಟ್ಟಿದ್ದೀರಾ ಎಂದು ಕೇಳುವಾಗ ಸಿಟ್ಟು ನೆತ್ತಿಗೇರಿದ ಅನುಭವವಾಗುತ್ತದೆ.

–ಉಷಾ, ಪೀಣ್ಯಹೀಗೂ ಮಾಡಬಹುದು

ನಿಮ್ಮ ಹಣಕಾಸು ಭದ್ರತೆ ಮತ್ತು ಭವಿಷ್ಯತ್ತಿನ ಬಗ್ಗೆ ವಿಚಾರ ಮಾಡುವುದು ಮುಖ್ಯ. ಮನೆ, ಕಾರು, ಬೈಕ್ ಮತ್ತು ಇನ್ನೂ ಹೆಚ್ಚು ಮಾಲೀಕತ್ವದ ಕನಸುಗಳಿಗೆ ಅಡಿಪಾಯ ಹಾಕಲು ಇದು ಸೂಕ್ತ ಸಮಯ. ಹೀಗಾಗಿ ಜೀವನಕ್ಕೆ ಭದ್ರ ಬುನಾದಿ ಹಾಕಲು ಕೆಲ ಪ್ರಾಥಮಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು

* ಉಳಿತಾಯವನ್ನು ಹವ್ಯಾಸವಾಗಿ ರೂಢಿಸಿಕೊಳ್ಳಿ *ಬಜೆಟ್ ಪ್ಲಾನ್, ನಿವೃತ್ತ ಜೀವನ ರೂಪಿಸಿ

* ಇನ್ಸೂರೆನ್ಸ್ ಮಾಡಿಸಿ * ಎಫ್‌ಡಿ, ಆರ್‌ಡಿ, ಇಕ್ವಿಟಿಗಳಲ್ಲಿ ಉಳಿತಾಯ ಮಾಡಿ

* ಖರ್ಚಿಗಿರಲಿ ಕಡಿವಾಣ, ತುರ್ತು ನಿಧಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry