‘ಕಿಷ್ಕಿಂಧೆ’ ರಸ್ತೆ; ಗೋಳು ತಪ್ಪುವುದು ಯಾವಾಗ?

7
ಮೂರು ವರ್ಷದಿಂದ ನನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ವಿಸ್ತರಣೆ ಯೋಜನೆ; ಪಾದಚಾರಿಗಳಿಗೆ ತಪ್ಪದ ನಿತ್ಯ ಕಿರಿಕಿರಿ

‘ಕಿಷ್ಕಿಂಧೆ’ ರಸ್ತೆ; ಗೋಳು ತಪ್ಪುವುದು ಯಾವಾಗ?

Published:
Updated:
‘ಕಿಷ್ಕಿಂಧೆ’ ರಸ್ತೆ; ಗೋಳು ತಪ್ಪುವುದು ಯಾವಾಗ?

ಚಿಕ್ಕಬಳ್ಳಾಪುರ: ಕೋಲಾರದಿಂದ ಪ್ರತ್ಯೇಕಗೊಂಡು 10 ವರ್ಷ ಉರುಳಿದರೂ ನಗರಕ್ಕೆ ಈವರೆಗೆ ಜಿಲ್ಲಾ ಕೇಂದ್ರ ‘ಚಹರೆ’ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಿಷ್ಕಿಂಧೆಯಂತಹ ರಸ್ತೆಗಳನ್ನು ಒಂದು ಸುತ್ತು ಹಾಕಿದರೆ ಪಾದಚಾರಿಗಳನ್ನು, ಸವಾರರನ್ನು ಅಣಕಿಸಿ, ಹೈರಾಣಾಗಿಸುವ ಚಿತ್ರಣ ಸಾಮಾನ್ಯವಾಗಿದೆ.

ಕಿತ್ತು ಹೋದ ಹೊದಿಕೆ ಕಲ್ಲುಗಳು, ಬಲಿಗಾಗಿ ಬಾಯಿ ತೆರೆದು ಕಾಯ್ದಿರುವ ಚರಂಡಿ ಮಾರ್ಗಗಳು, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ ತ್ಯಾಜ್ಯ ವಸ್ತುಗಳು, ದಾರಿಗೆ ಅಡ್ಡ ನಿಂತು ಅಣಕಿಸುವಂತೆ ಭಾಸವಾಗುವ ಬೈಕ್‌ಗಳು, ಸರಕಿನೊಂದಿಗೆ ಬೀದಿಗೆ ಬಂದು ಕುಳಿತ ವರ್ತಕರು.. ಹೀಗೆ ಹೇಳುತ್ತ ಹೋದರೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹರೆಯದವರೇ ಏರುತ್ತ, ಇಳಿ­ಯುತ್ತ ಏದುಸಿರು ಬಿಡುತ್ತ ಅಡೆತಡೆ ದಾಟಿ ನಡೆಯ­ಬೇಕಾದ ಈ ಮಾರ್ಗಗಳಲ್ಲಿ ವಯೋವೃದ್ಧರು, ಅಂಗವಿಕಲರು ನಡೆಯುವು­ದಂತೂ ಕನಸಿನ ಮಾತು. ಮತ್ತೊಂದು ಸಾರ್ವತ್ರಿಕ ಚುನಾವಣೆ ಕಳೆದು ಹೊಸ ಸರ್ಕಾರದತ್ತ ದೃಷ್ಟಿ ನೆಟ್ಟಿರುವ ನಾಗರಿಕರು, ಹೊಸ ಆಡಳಿತದಲ್ಲಿ ತಮ್ಮ ಈ ಸಮಸ್ಯೆ ಪರಿಹಾರ ಸಿಗಬಹುದೆ ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.

ದಶಮಾನೋತ್ಸವ ಪೂರೈಸಿದ ಜಿಲ್ಲಾ ಕೇಂದ್ರದ ಗಲ್ಲಿಗಲ್ಲಿಗಳನ್ನು ಹೊಕ್ಕು ನೋಡಿದರೆ ಸಂಚಾರ ವ್ಯವಸ್ಥೆಗೆ ಬಡಿದ ‘ಗ್ರಹಣ’ ಡಾಳವಾಗಿ ಗೋಚರಿಸುತ್ತದೆ. ನಗರದ ಪ್ರಮುಖ ರಸ್ತೆಗಳಾದ ಬಿ.ಬಿ. ರಸ್ತೆ, ಎಂ.ಜಿ.­ರಸ್ತೆ, ಗಂಗ­ಮ್ಮ­ಗುಡಿ ರಸ್ತೆ, ಬಜಾರ್‌ ರಸ್ತೆ ಸೇರಿದಂತೆ ಯಾವೊಂದು ರಸ್ತೆ ಕೂಡ ಸವಾರರು ಮತ್ತು ಪಾದಚಾರಿಗಳಿಗೆ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿದ್ದು ಕಾಣುವುದಿಲ್ಲ.

ಬೆಳಿಗ್ಗೆ, ಸಂಜೆ ಹೊತ್ತು ನಗರದ ಮುಖ್ಯರಸ್ತೆಗಳಲ್ಲಿ ಅಡಿಗಡಿಗೆ ಎದುರಾಗುವ ಕಿರಿಕಿರಿ ನಡುವೆ ಹಿಡಿಶಾಪ ಹಾಕುತ್ತ, ಜೀವ ಹಿಡಿ ಮಾಡಿಕೊಂಡು ಸಾಗುವ, ಸಂಚರಿಸುವವರನ್ನು ನೋಡಿದಾಗ ಎಂದಪ್ಪಾ ಈ ಗೋಳಿಗೆ ಪರಿಹಾರ ಎಂಬ ಉದ್ಗಾರ ನಿಟ್ಟುಸಿರಾಗಿ ಹೊರಬರುತ್ತದೆ. ಹಬ್ಬ, ಉತ್ಸವಗಳ ಹೊತ್ತಿನಲ್ಲಂತೂ ನಗರದೊಳಗಿನ ಸಂಚಾರ ನರಕಸದೃಶ್ಯವಾಗಿರುತ್ತದೆ.

ಜಿಲ್ಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಈಗಾಗಲೇ ರಸ್ತೆ ವಿಸ್ತರಣೆ ಕಾರ್ಯಗಳು ನಡೆದು ನಗರಗಳು ಹೊಸ ಕಳೆಯಲ್ಲಿ ನಳನಳಿಸುತ್ತಿವೆ. ಸೋಜಿಗವೆಂದರೆ ಜಿಲ್ಲಾ ಕೇಂದ್ರವಾದ ನಗರವೇ ಮಾರಕ ಕಾಯಿಲೆಯಿಂದ ನರಳುವ ರೋಗಿಯಂತೆ ಗೋಚರಿಸುತ್ತಿದೆ ಎನ್ನುವುದು ಅವರ ಬೇಸರ.

‘ಶಾಸಕ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ಉಪನಗರ ಮಾಡುತ್ತೇನೆ ಎಂದು ಹೇಳುತ್ತಲೇ ಐದು ವರ್ಷಗಳ ಆಡಳಿತ ನಡೆಸಿದರು. ಈ ವಿಚಾರವನ್ನು ಅವರು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇನ್ನಾದರೂ ಅವರು ಇತ್ತ ಗಮನಹರಿಸಿ ನಗರದ ನಾಗರಿಕರಿಗೆ ಸ್ವಲ್ಪ ನೆಮ್ಮದಿ ತರುವ ಕೆಲಸ ಮಾಡಲಿ’ ಎಂದು ಅನೇಕ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ನಿರ್ಲಕ್ಷ್ಯದಿಂದ ಸಮಸ್ಯೆ ಸೃಷ್ಟಿ

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಹೊರತುಪಡಿಸಿದಂತೆ ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ. ಆದರೆ ತಾಲ್ಲೂಕಿನಲ್ಲಿ ರಾಜಕಾರಣಿಗಳು ವರ್ತಕರ ಒತ್ತಡದಿಂದಾಗಿ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಅಂತಹ ದಿಟ್ಟತನದ ಕೆಲಸಕ್ಕೆ ಕೈ ಹಾಕುತ್ತಿಲ್ಲ. ಅದರಿಂದ ನಗರದಲ್ಲಿ ಎಲ್ಲಿ ನೋಡಿದರೂ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ಪಾದಚಾರಿಗಳ ಪರದಾಟದಂತಹ ಸಮಸ್ಯೆಗಳು ತಲೆದೋರಿವೆ. ಅನೇಕರು ರಸ್ತೆ ಭಯಕ್ಕೆ ಕಾರು ಖರೀದಿಸಲು ಹಿಂದೇಟು ಹಾಕುವ ಸ್ಥಿತಿ ಬಂದಿದೆ. ಸಮಸ್ಯೆಗೆ ಪರಿಹಾರ ಸೂಚಿಸುವ ಬದಲಾಗಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ

– ಚಂದ್ರಶೇಖರ್, ಪೋಶೆಟ್ಟಹಳ್ಳಿ ನಿವಾಸಿ

ರಸ್ತೆ ವಿಸ್ತರಣೆ ಮಾಡಲೇಬೇಕು

ಫುಟ್‌ಪಾತ್ ಇಲ್ಲದ ಕಾರಣಕ್ಕೆ ಜನರು ರಸ್ತೆಯಲ್ಲಿ ನಡೆದು ಹೋಗಬೇಕು. ಅನೇಕ ಬಾರಿ ಎದುರು ಬದುರು ನಾಲ್ಕಾರು ವಾಹನಗಳು ಬಂದರೆ ಪಾದಚಾರಿಗಳಿಗೆ ಜೀವ ಕೈಯಲ್ಲಿ ಹಿಡಿದು ಅಂಜಿಕೆಯಿಂದ ಸಾಗಬೇಕಾದ ಸ್ಥಿತಿ ಇದೆ. ಪಕ್ಕದ ಸರಿದು ನಿಲ್ಲೋಣ ಎಂದರೆ ವರ್ತಕರು ಸರಕುಗಳನ್ನು ತಂದು ರಸ್ತೆ ಬದಿಯೇ ಇಟ್ಟಿರುತ್ತಾರೆ. ವಾಹನಗಳ ನಡುವೆ ನಡೆದು ಹೋಗಬೇಕಾದರೆ ತುಂಬಾ ಭಯವಾಗುತ್ತದೆ. ಅಪಘಾತ ಸಂಭವಿಸುತ್ತದೆ ಎಂಬ ಆತಂಕದಲ್ಲಿಯೇ ಹೆಜ್ಜೆ ಇಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಗಂಭೀರ. ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆ ಮಾಡಲೇಬೇಕು

– ಶೈಲಜಾ, ಕಾರ್ಖಾನೆ ಪೇಟೆ ರಸ್ತೆ ನಿವಾಸಿ

ನನೆಗುದಿಗೆ ಬಿದ್ದ ನಗರಸಭೆಯ ಮಹತ್ವಾಕಾಂಕ್ಷೆ ಯೋಜನೆ

2015ರ ಫೆಬ್ರವರಿ 26ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಂಗಮ್ಮ ಗುಡಿ, ಬಜಾರ್ ರಸ್ತೆ, ಚಿಕ್ಕಬಳ್ಳಾಪುರದಿಂದ ನೆಲಮಂಗಲಕ್ಕೆ ಹೋಗುವ ರಾಜ್ಯ ಹೆದ್ದಾರಿ, ನಾಮಗೊಂಡ್ಲು ಕೇತೇನಹಳ್ಳಿಗೆ ಹೋಗುವ ಜಿಲ್ಲಾ ಮುಖ್ಯರಸ್ತೆಗಳ ಒತ್ತುವರಿಗೆ ಗಮನ ನೀಡಲಾಗಿತ್ತು. ಅಲ್ಲಿ ವರ್ತಕರು ಮಾಡಿಕೊಂಡಿರುವ ಅನಧಿಕೃತ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಲೋಕೋಪಯೋಗಿ, ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು.

ಈ ರಸ್ತೆಗಳ ಒತ್ತುವರಿದಾರರ ಪಟ್ಟಿ ನೀಡುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಅವರು, ವಿಸ್ತರಣೆಗೆ ಒಳಗಾಗುವ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್, ಬಿಎಸ್‌ಎನ್‌ಎಲ್ ಇಲಾಖೆ ಕಂಬಗಳು, ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಬೆಸ್ಕಾಂ, ಬಿ.ಎಸ್‌.ಎನ್‌.ಎಲ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಗರಸಭೆ ವ್ಯಾಪ್ತಿಯ ಕೆಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕರಿಂದ ಪ್ರಸ್ತಾವ ಬರುತ್ತಿದ್ದಂತೆಯೇ ಪ್ರಮುಖ ರಸ್ತೆಗಳ ವರ್ತಕರ ವಲಯದಲ್ಲಿ ಸಂಚಲನ ಕಾಣಿಸಿಕೊಂಡಿತ್ತು. ವಿಸ್ತರಣೆಗೆ ಒಂದಿಷ್ಟು ಮಂದಿ ಪರವಾಗಿಯೂ, ಮತ್ತೊಂದಿಷ್ಟು ಮಂದಿ ವಿರೋಧಿಸಿಯೂ ಧ್ವನಿ ಎತ್ತಿದ್ದರು. ವರ್ತಕರ ಪ್ರತಿರೋಧಗಳ ನಡುವೆ ಕೆಲಸ ಮಾಡುವುದು ಕಷ್ಟ. ಈಗ ಅವೆಲ್ಲವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಅಷ್ಟಕ್ಕೆ ಸುಮ್ಮನಾಗದೆ ಕೆಲವರು ಇಡೀ ಪ್ರಕ್ರಿಯೆಯನ್ನು ತಡೆಯುವುದಕ್ಕೆ ಲೆಕ್ಕಾಚಾರ ಹಾಕಿ ಇಂತಿಷ್ಟು ಅಡಿ ಮಾತ್ರ ರಸ್ತೆ ವಿಸ್ತರಣೆ ಆಗಬೇಕು. ಇಲ್ಲದಿದ್ದರೆ ಅವಕಾಶವೇ ನೀಡಬಾರದು ಎಂದು ಸಹಿ ಸಂಗ್ರಹ ಮಾಡಿ, ನ್ಯಾಯಾಲಯದ ಮೊರೆ ಹೋದರು.

ದೇವರ ಕಲ್ಲುಗಳಿಗೆ ಪುನರ್ಜನ್ಮ

ರಸ್ತೆ ವಿಸ್ತರಣೆ ತಡೆಯಲು ಕೆಲವರು ಅನಾಥವಾಗಿ ಬಿದ್ದ ಚಿಕ್ಕಪುಟ್ಟ ದೇವರ ಕಲ್ಲುಗಳಿಗೆ ಪುನರ್ಜನ್ಮ ಕೊಟ್ಟು ರಸ್ತೆ ಒಡೆಯುವ ಕೆಲಸಕ್ಕೆ ತಡೆ ಒಡ್ಡುವ ಹೊಸ ‘ಅಸ್ತ್ರ’ ಕಂಡು ಹಿಡಿದರು.

ಆದರೂ ಅಧಿಕಾರಿಗಳು ನಗರದ ಬಿ.ಬಿ.ರಸ್ತೆಯಲ್ಲಿನ ಬಲಮುರಿ ಗಣಪತಿ ದೇಗುಲ, ಬಜಾರ್‌ ರಸ್ತೆಯಲ್ಲಿನ ಬೃಹತ್‌ ನಾಗರಕಟ್ಟೆ ಸೇರಿದಂತೆ ಇತರೆ ಸ್ಥಳಗಳಲ್ಲಿನ ನಾಗರಕಟ್ಟೆ ಮತ್ತು ಮೂರ್ತಿಗಳನ್ನು ತೆರವುಗೊಳಿಸಿದ್ದರು.

ಅಷ್ಟರೊಳಗೆ ವರ್ತಕರು ರಸ್ತೆ ವಿಸ್ತರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಪರಿಣಾಮ ಮೂರು ವರ್ಷಗಳು ಕಳೆದರೂ ಯಾವುದೇ ಜನಪ್ರತಿನಿಧಿಗಳು ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಬದಲು ವರ್ತಕ ಸಮೂಹದ ‘ರಹಸ್ಯ ಸಭೆ’ಗಳನ್ನು ನಡೆಸಿ ನನ್ನ ಅವಧಿಯಲ್ಲಿ ರಸ್ತೆ ವಿಸ್ತರಣೆಗೆ ಕೈ ಹಾಕುವುದಿಲ್ಲ ಎಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಗೋಳು ಕೇಳುವವರಿಲ್ಲದಂತಾಗಿದೆ ಎನ್ನುವುದು ಪ್ರಜ್ಞಾವಂತರ ಆರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry