7
ಶಿಕ್ಷಣ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಕೆ, ಲಾಟರಿ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ವಿತರಣೆ

ಮೊದಲ ಸುತ್ತಿನಲ್ಲಿ 1,763 ಸೀಟು ಹಂಚಿಕೆ

Published:
Updated:
ಮೊದಲ ಸುತ್ತಿನಲ್ಲಿ 1,763 ಸೀಟು ಹಂಚಿಕೆ

ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯಲು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಸಲ್ಲಿಸಿದ 3,511 ಅರ್ಜಿಗಳ ಪೈಕಿ ಇತ್ತೀಚೆಗೆ ಲಾಟರಿ ಮೂಲಕ ನಡೆದ ಮೊದಲ ಸುತ್ತಿನ ಹಂಚಿಕೆಯಲ್ಲಿ 1,763 ವಿದ್ಯಾರ್ಥಿಗಳಿಗೆ ಆರ್‌ಟಿಇ ಸೀಟು ಹಂಚಿಕೆ ಮಾಡಲಾಗಿದೆ.

ಈ ಬಾರಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ 851, ಪರಿಶಿಷ್ಟ ವರ್ಗದ 185 ಹಾಗೂ ಸಾಮಾನ್ಯ ವರ್ಗದ 1,715 ವಿದ್ಯಾರ್ಥಿಗಳು ಸೇರಿ ಒಟ್ಟು 2,751 ವಿದ್ಯಾರ್ಥಿಗಳಿಗೆ ಆರ್‌ಟಿಇ ಅಡಿ ಪ್ರವೇಶ ದೊರೆಯಬೇಕಾಗಿದೆ. ಈ ಸೀಟುಗಳಿಗಾಗಿ ಆನ್‌ಲೈನ್ ಮೂಲಕ 3,511 ಪೋಷಕರು ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ಸೀಟು ಹಂಚಿಕೆ ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಲಾಟರಿ ಮೂಲಕ ಪರಿಶಿಷ್ಟ ಜಾತಿಯ 361, ಪರಿಶಿಷ್ಟ ಪಂಗಡದ 110 ಮತ್ತು ಸಾಮಾನ್ಯ ವರ್ಗದ 1,289 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಯಿತು. ಜತೆಗೆ 3 ಮಂದಿ ಅನಾಥ, ವಿಶೇಷ ಮಕ್ಕಳಿಗೆ ಸೀಟ್ ಹಂಚಿಕೆ ಮಾಡಲಾಗಿದೆ.

‘ಮೊದಲ ಸುತ್ತಿನಲ್ಲಿ ಆರ್‌ಟಿಐ ಸೀಟು ಪಡೆದವರ ಪೈಕಿ ಈವರೆಗೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು 340, ಪರಿಶಿಷ್ಟ ಪಂಗಡದ 101 ಹಾಗೂ ಸಾಮಾನ್ಯ ವರ್ಗದ 1,187 ವಿದ್ಯಾರ್ಥಿಗಳು ಈಗಾಗಲೇ ವಿವಿಧ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಬಾಕಿ ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌.ಶಿವಣ್ಣರೆಡ್ಡಿ ತಿಳಿಸಿದರು.

‘ಜಿಲ್ಲೆಗೆ ಮಂಜೂರಾಗಿರುವ ಸೀಟುಗಳ ಪೈಕಿ ಇನ್ನೂ 988 ಸೀಟುಗಳ ಹಂಚಿಕೆಗೆ ಬಾಕಿ ಇದೆ. ಆ ಸೀಟುಗಳನ್ನು ಸಹ ಶೀಘ್ರದಲ್ಲಿಯೇ ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆ ನಡೆಸಿ ಹಂಚಿಕೆ ಮಾಡುತ್ತೇವೆ. ಇದೇ ಮೊದಲ ಬಾರಿಗೆ ಅನುದಾನಿತ ಶಾಲೆಗಳನ್ನು ಆರ್‌ಟಿಇ ವ್ಯಾಪ್ತಿಗೆ ತರಲಾಗಿದೆ’ ಎಂದು ಹೇಳಿದರು.

‘ಆರ್‌ಟಿಇ ಪ್ರಕಾರ ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡುತ್ತದೆ. ಸಿ.ಬಿ.ಎಸ್‌.ಇ ಹಾಗೂ ಐ.ಸಿ.ಎಸ್‌.ಇ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಾಲೆಯವರೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಖರೀದಿಸಿ ನೀಡಬೇಕಿದೆ’ ಎಂದು ಶಿವಣ್ಣರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry