ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬರಲಿ, ಚಳಿ ಇರಲಿ ಕಂದ ನಗುತಿರಲಿ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಶಾಲಾ ಬ್ಯಾಗ್‌ನ ಭಾರ, ಹೋಂವರ್ಕ್‌ನ ಹಂಗು, ಟ್ಯೂಷನ್‌ ತಲೆಬೇನೆ... ಹೀಗೆ ಎಲ್ಲವನ್ನೂ ಮರೆತು ಮಕ್ಕಳು ಆಡುವ ದಿನಗಳು ಬೇಸಿಗೆಯ ರಜೆ ದಿನಗಳು. ಬಿರುಬಿಸಿಲನ್ನೂ ಲೆಕ್ಕಿಸದೇ ಸದಾ ಆಟೋಟದಲ್ಲೇ ಮೈಮರೆಯುವ ಮಕ್ಕಳ ಉತ್ಸಾಹಕ್ಕೆ ತಣ್ಣೀರೆರಚುವಂತೆ ಆಗಾಗ ಬೀಳುವ ಅಕಾಲಿಕ ಮಳೆ ಮಕ್ಕಳ ಜತೆಗೆ ಪೋಷಕರಿಗೂ ಆತಂಕ ತರುತ್ತದೆ.

ನಗರದಲ್ಲಿ ಈಚೆಗೆ ಸುರಿದ ಮಳೆ ಕೆಲ ಮಕ್ಕಳಿಗೆ ಅನಾರೋಗ್ಯ ತಂದಿಟ್ಟಿದೆ. ರಜೆಯಿನ್ನೂ ಮುಗಿದಿಲ್ಲ, ಶಾಲಾ ಆರಂಭಕ್ಕೆ ಬೆರಳೆಣಿಕೆಯ ದಿನಗಳಿರುವಾಗ ಮಕ್ಕಳು ಜ್ವರ, ಶೀತದಿಂದ ಅನಾರೋಗ್ಯಕ್ಕೀಡಾಗುವುದು ಹೆತ್ತವರಲ್ಲಿ ಆತಂಕ ಮೂಡಿಸುವುದು ಸಹಜ.

ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಬದಲಾಗುವ ಬೆಂಗಳೂರು ಹವಾಮಾನ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಮೂಲ ಎನ್ನುತ್ತಾರೆ ವೈದ್ಯರು. ಬೇಸಿಗೆಯಲ್ಲಿ ಬರುವ ಮಳೆ ಮೇಲ್ಮಟ್ಟದಲ್ಲಿರುವ ದೂಳಿನ ಕಣಗಳನ್ನು ಕೆಳಗೆ ತರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಆಸ್ತಮಾ, ಅಲರ್ಜಿ, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಸೇರಿದಂತೆ ಜ್ವರ, ಶೀತ ಕಾಣಿಸಿಕೊಳ್ಳುತ್ತವೆ.  ಈ ರೀತಿ ಆರೋಗ್ಯದ ಸಮಸ್ಯೆ ಎದುರಿಸುವವ ಶೇ 17ರಷ್ಟರಲ್ಲಿ ಶೇ 13ರಷ್ಟು ಮಕ್ಕಳೇ ಆಗಿರುತ್ತಾರೆ ಎನ್ನುತ್ತಾರೆ ನಗರದ ವೈದ್ಯರು.

ಬೇಸಿಗೆ ರಜೆಯಲ್ಲಿ ಮಕ್ಕಳು ಮನೆಗಿಂತ ಹೊರಗೆ ಆಡುವುದೇ ಹೆಚ್ಚು. ಆಗ ಸಹಜವಾಗಿಯೇ ಹೊರಗಿನ ತಿಂಡಿಗೆ ಆಕರ್ಷಿತರಾಗುತ್ತಾರೆ. ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಸ್ನೇಹತರೊಂದಿಗೆ ತಂಪು ಪಾನೀಯ, ಜ್ಯೂಸ್, ಐಸ್‌ಕ್ರೀಂನ ಮೊರೆ ಹೋಗುತ್ತಾರೆ. ಈ ಕಾಲದಲ್ಲಿ ಸಿಗುವ ಮಾವಿನಹಣ್ಣು, ಹಲಸಿನ ಹಣ್ಣು, ಪಪ್ಪಾಯ, ಕಲ್ಲಂಗಡಿ ಹಣ್ಣುಗಳನ್ನು ತಿನ್ನುವಾಗ ಶುಚಿತ್ವದ ಕಡೆಗೆ ಗಮನ ಕೊಡದಿರುವುದು ಅನಾರೋಗ್ಯಕ್ಕೆ ಮುನ್ನುಡಿ ಬರೆಯುತ್ತದೆ.

ಇಂಥ ಸಮಯದಲ್ಲೇ ಇದ್ದಕ್ಕಿದ್ದಂತೆ ಬಿಸಿಲಿನ ವಾತಾವರಣ ಮರೆಯಾಗಿ ಮಳೆ ಸುರಿಯಲಾರಂಭಿಸಿದರೆ ಮಕ್ಕಳಲ್ಲಿ ಶೀತ, ಜ್ವರ ಗ್ಯಾರಂಟಿ. ಇದರ ಜತೆಗೆ ಮಳೆ ನೀರು ನಿಂತ ಜಾಗಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಗಿ, ವೈರಲ್ ಜ್ವರ, ಚಿಕುನ್ ಗುನ್ಯಾದಂಥ ಕಾಯಿಲೆಗಳು ಕಾಡಬಹುದು. ಆದರೆ, ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಇವುಗಳಿಂದ ಕೂಸು–ಕಂದಮ್ಮಗಳನ್ನು ರಕ್ಷಿಸಬಹುದು ಎನ್ನುತ್ತಾರೆ ವೈದ್ಯರು.

ಪರಿಹಾರಗಳು: ಜ್ವರ, ಕೆಮ್ಮು, ಶೀತ ಆರಂಭವಾದ ತಕ್ಷಣ ಆಸ್ಪತ್ರೆಗೆ ಹೋಗದೆ ಒಂದು ದಿನ ಕಾದು ನೋಡುವುದು ಒಳ್ಳೆಯದು. ವೈದ್ಯರ ಸಲಹೆ ಇಲ್ಲದೇ ಔಷಧಿ ನೀಡಬಾರದು. ಹೊರಗೆ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ಉಸಿರಾಟದ ತೊಂದರೆ ಇದ್ದರೆ ಹೆಚ್ಚು ಜನದಟ್ಟಣೆ, ಹೊಗೆ, ದೂಳಿನಿಂದ ದೂರ ಇರಬೇಕು.

ಕೆಲ ತಾಯಂದಿರು ಮಳೆ ಶುರುವಾದ ತಕ್ಷಣ ಮಕ್ಕಳಿಗೆ ಸ್ವೆಟರ್‌, ಸಾಕ್ಸ್ ಎಲ್ಲವನ್ನೂ ಹಾಕಿಬಿಡುತ್ತಾರೆ. ಆದರೆ, ಅದು ಮಗುವಿಗೆ ಹಿತವಾಗಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದಿಲ್ಲ. ನೆನಪಿಡಿ, ನಮಗೆ ಚಳಿಯಾದರೆ ಮಕ್ಕಳಿಗೂ ಚಳಿಯಾಗುತ್ತದೆ. ನಮಗೆ ಉಂಟಾಗುವ ಅನುಭೂತಿಯೇ ಮಕ್ಕಳಿಗೂ ಆಗುತ್ತಿರುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

‘ಕಾಲ ಕಾಲಕ್ಕೆ ನಿಗದಿತ ವ್ಯಾಕ್ಸಿನೇಷನ್‌ ಅನ್ನು ಮಕ್ಕಳಿಗೆ ಕೊಡಿಸುವುದರಿಂದ ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಆದರೆ ನಾವು ಎಲ್ಲಾ ಹಂತದಲ್ಲಿಯೂ ಎಚ್ಚರಿಕೆಯಿಂದ ಇರಬೇಕು. ಸಣ್ಣ ಮಕ್ಕಳಿಗೆ ಈ ರೀತಿ ತೊಂದರೆ ಬಂದರೆ ಬೇಗ ಕಡಿಮೆ ಆಗುವುದಿಲ್ಲ. ಅಲರ್ಜಿ ರೀತಿಯ ಸಮಸ್ಯೆಗಳಿಗೆ ಮನೆಯಲ್ಲಿಯೇ ತಯಾರಿಸುವ ಶುಚಿ, ರುಚಿ ಆಹಾರವೇ ಪರಿಹಾರ’ ಎನ್ನುತ್ತಾರೆ ಫೋರ್ಟಿಸ್‌ ಲಾ ಫೆಮೆ ಆರೋಗ್ಯ ಸಂಸ್ಥೆಯ ಮಕ್ಕಳ ತಜ್ಞ ಡಾ.ಚಂದ್ರಶೇಖರ ಚಂಗಪ್ಪ.

‘ಮಳೆಯಲ್ಲಿ ಆಟವಾಡುವುದು ಮಕ್ಕಳಿಗೆ ಖಷಿಕೊಡುತ್ತದೆ. ಜೊತೆಗೆ ಅವರು ಮನೆಯಿಂದ ಹೊರಗೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ. ಬಿಸಿಲು ಸರಿದು ಮಳೆ ಆರಂಭವಾದಾಗ ವೈರಸ್‌ಗಳ ಬೆಳವಣಿಗೆ ಹೆಚ್ಚಿರುತ್ತದೆ. ಮೊದಲಿಗೆ ಮಕ್ಕಳು ಇದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಹೆಪಟೈಟಿಸ್‌ ‘ಎ’ ನಿಂದಾಗಿ ಜಾಂಡೀಸ್‌ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಸ್ಯೆ ಇರುವ ಮಕ್ಕಳಿಗೆ ಆರಂಭದಲ್ಲಿಯೇ ಆ್ಯಂಟಿಬಯೋಟಿಕ್ ಕೊಡಬಾರದು. ಜ್ವರ ಬಂದರೆ ಜ್ವರಕ್ಕೆ, ಕೆಮ್ಮು ಬಂದರೆ ಕೆಮ್ಮಿಗೆ ಮಾತ್ರ ಔಷಧಿ ಕೊಡಬೇಕು. ಆದರೂ ಕಡಿಮೆ ಆಗದಿದ್ದರೆ ರಕ್ತ ಪರೀಕ್ಷೆ ಮಾಡಿ ನಂತರ ಬೇರೆ ಔಷಧಿಗಳ ಮೊರೆ ಹೋಗಬೇಕು’ ಎಂಬುದು ಮಣಿಪಾಲ್‌ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಚಂದ್ರಶೇಖರ್ ಶೆಣೈ ಅವರ ಮಾತು.

*
‘ನಾವು ಇತ್ತೀಚೆಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದೆವು. ಆ ಸಂದರ್ಭದಲ್ಲಿ ನಮ್ಮ ಮಗನ ಹೊಟ್ಟೆಯ ಮೇಲೆ ಸಣ್ಣಸಣ್ಣ ಗುಳ್ಳೆಗಳು ಆಗಿದ್ದವು. ವೈದ್ಯರಿಗೂ ಇದರ ಗುರುತು ಸಿಗಲಿಲ್ಲ. ಒಂದೆರಡು ದಿನ ಆದ ಬಳಿಕ ರಕ್ತ ಪರೀಕ್ಷೆ ಮಾಡಿಸಲು ಹೇಳಿದ್ದಾರೆ. ಅಲ್ಲಿ ಇದ್ದ ಚಳಿ ಹಾಗೂ ಮಳೆಯ ವಾತಾವರಣದಿಂದಾಗಿ ಈ ರೀತಿ ಆಗಿರಬೇಕು ಎಂದಿದ್ದಾರೆ’
–ಪವನ್‌ ಕುಮಾರ್‌, ಬೆಂಗಳೂರು ನಿವಾಸಿ

*
‘ಮಳೆ ಬಂದಿದ್ದರಿಂದ ಮಗಳಿಗೆ ಒಣಕೆಮ್ಮು ಶುರುವಾಗಿತ್ತು. ಆಲಿಕಲ್ಲು ತಿಂದಿದ್ದರಿಂದ ಗಂಟಲಲ್ಲಿ ಸೋಂಕು ಆಗಿತ್ತು. ನೀರು ನಿಂತಿರುವ ಕಡೆ ಮಣ್ಣಲ್ಲಿ ಹೆಚ್ಚು ಆಡುತ್ತಾಳೆ. ಇದರಿಂದ ಚರ್ಮದ ತೊಂದರೆ ಕೂಡ ಕಾಣಿಸಿಕೊಂಡಿತ್ತು. ಮಳೆಯಿಂದಾಗಿ ನಮ್ಮ ಶಾಲೆಯಲ್ಲಿ ಸುಮಾರು 10 ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡಿದೆ’.
-ಶ್ರುತಿ, ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT