527 ನಿವೇಶನಗಳ ಖಾತೆ ರದ್ದು!

7
10.35 ಎಕರೆ ಜಮೀನು ವಶಕ್ಕೆ ಆದೇಶ

527 ನಿವೇಶನಗಳ ಖಾತೆ ರದ್ದು!

Published:
Updated:

ಬೀದರ್: ಸರ್ಕಾರಿ ಹಾಗೂ ಕೃಷಿ ಜಮೀನುಗಳಲ್ಲಿ ಅನಧಿಕೃತವಾಗಿ ಲೇಔಟ್‌ಗಳನ್ನು ಮಾಡಿ ಕಾನೂನು ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆಯು ನಗರ ವ್ಯಾಪ್ತಿಯಲ್ಲಿ 527 ಅಕ್ರಮ ನಿವೇಶನಗಳನ್ನು ಪತ್ತೆ ಮಾಡಿ ಅವುಗಳ ಖಾತೆ ರದ್ದು ಮಾಡುವಂತೆ ಜಿಲ್ಲಾ ಆಡಳಿತಕ್ಕೆ ಶಿಫಾರಸು ಮಾಡಿದೆ.

ನಗರದಲ್ಲಿ  ದಿಗಂಬರ ಲೇಔಟ್, ಗೌಳಿ ಲೇಔಟ್‌ ಸೇರಿದಂತೆ ಬೇರೆ ಬೇರೆ ಲೇಔಟ್‌ ಹೆಸರಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ನಗರಸಭೆ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿಲ್ಲ. ನಗರಸಭೆಗೆ ಅಭಿವೃದ್ಧಿ ಶುಲ್ಕ ಪಾವತಿಸದೆ ವಂಚನೆ ಮಾಡಲಾಗಿದೆ.

ಕೆಲ ಲೇಔಟ್‌ನಲ್ಲಿ ಅಗತ್ಯವಿರುವಷ್ಟು ರಸ್ತೆಗೆ ಜಾಗ ಬಿಟ್ಟಿಲ್ಲ. ನೀರು ಹರಿದು ಹೋಗಲು ಗಟಾರ ನಿರ್ಮಿಸಿಲ್ಲ. ಇದರಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಕೆಲ ಕಡೆ ರಸ್ತೆಯ ಜಾಗದಲ್ಲೇ ಮನೆಗಳನ್ನು ಕಟ್ಟಲಾಗಿದ್ದು, ನಗರ ಯೋಜನೆಗೆ ಮಾರಕವಾಗಿ ಪರಿಣಮಿಸಿದೆ. ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರು ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಿದೇ ನಿವೇಶನ ಮಾರಾಟ ಮಾಡಿರುವ ಕಾರಣ ನಿವೇಶನ ಖರೀದಿಸಿದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಉದ್ಯಮಿಯೊಬ್ಬರು ಶಿವನಗರದಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಅನುಮತಿ ಪಡೆದು ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಲು ವಸತಿ ಸಮುಚ್ಛಯ ನಿರ್ಮಾಣದ ಸಂದರ್ಭದಲ್ಲಿ ಪಡೆದ ನಿರಪೇಕ್ಷಣಾ ಪತ್ರವನ್ನು ಬಳಸಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನೂ ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

101 ಮನೆಗಳ ತೆರವಿಗೆ ಆದೇಶ:

ಬೀದರ್‌: ಶಿವನಗರದ ಸರ್ವೆ ನಂ.58ರಲ್ಲಿರುವ ಎಲ್ಲ ಮನೆಗಳನ್ನು ತೆರವುಗೊಳಿಸಲು ಜಿಲ್ಲಾ ಆಡಳಿತ ಆದೇಶ ಹೊರಡಿಸಿದೆ.

ಇನಾಮಿ ಭೂಮಿಯಲ್ಲಿ ಸಂಬಂಧ ಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳದೇ ಕಾನೂನು ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿರುವ ಕಾರಣ ಶಿವನಗರದ 10.35 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾ ನ್ಯಾಯಿಕ ದಂಡಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ನಗರಸಭೆ ಆಯುಕ್ತ ಮನೋಹರ ತಿಳಿಸಿದ್ದಾರೆ.

ಬೀದರ್ ತಾಲ್ಲೂಕಿನ ಅಲಿಯಾಬಾದ್‌ ಗ್ರಾಮದ ಸರ್ವೆ ಸಂಖ್ಯೆ 58ರಲ್ಲಿ ಇನಾಮಿ ಜಮೀನು ಇದೆ. ಭೂನ್ಯಾಯ ಮಂಡಳಿಯಲ್ಲಿ ಗೇಣಿದಾರರ ಮಾಲೀಕತ್ವಕ್ಕೆ ಸಂಬಂಧಪಟ್ಟ ಪ್ರಕರಣ ಇತ್ಯರ್ಥಗೊಳ್ಳುವ ಮೊದಲೇ ಅನಧಿಕೃತ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲಾಗಿದೆ. ಈ ಕುರಿತು 2018ರ ಜನವರಿ 11 ರಂದು ತಹಶೀಲ್ದಾರ್ ಹಾಗೂ ನಂತರ ಬೀದರ್‌ ಉಪ ವಿಭಾಗಾಧಿಕಾರಿ ಜಿಲ್ಲಾಧಿಕಾರಿಗೆ ವರದಿ ಕೊಟ್ಟಿದ್ದಾರೆ.

ಸರ್ವೆ ನಂ.58 ಹಾಗೂ 59ರ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿ ಕರ್ನಾಟಕ ಭೂಕಂದಾಯ ಕಾಯ್ದೆಯ ಉಲ್ಲಂಘನೆ ಮಾಡಲಾಗಿದೆ. ಕಾನೂನು ಬಾಹಿರವಾಗಿ ವಹಿವಾಟು ಮಾಡಿರುವುದರಿಂದ ಕರ್ನಾಟಕ ಭೂಸುಧಾರಣೆ ಕಾಯ್ದೆ 1966ರ ಕಲಂ 83ರಡಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ

ಬೀದರ್‌: ನಗರಸಭೆಯ ಮೊಹರು ಬಳಸಿಕೊಂಡು ನಕಲಿ ಸಹಿ ಮಾಡಿ ಕೈಬರಹದಲ್ಲಿ ಮೂರು ಜಮೀನು ಖಾತೆಗಳನ್ನು ಮಾಡಿದ ಅಧಿಕಾರಿಯ ವಿರುದ್ಧ ನಗರಸಭೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.

ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಂಡು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ನಗರಸಭೆ ಆಯುಕ್ತರು ಬೀದರ್‌ನ ಉಪ ನೋಂದಣಿ ಅಧಿಕಾರಿಗೆ ಲಿಖಿತ ಪತ್ರ ಕೊಟ್ಟಿದ್ದರು. ಆದರೆ, ಇದಾವುದನ್ನು ಲೆಕ್ಕಿಸದೇ ಕೈಬರಹದ ದಾಖಲೆಗೆ ಪ್ರಾಮುಖ್ಯ ನೀಡಿ ನೋಂದಣಿ ಮಾಡಿರುವುದನ್ನು ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಆದೇಶ ನೀಡಲಾಗಿದ್ದು, 5 ರಿಂದ 10 ವರ್ಷಗಳ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ನಗರಸಭೆಯ ಹಿಂದಿನ ಕಂದಾಯ ಅಧಿಕಾರಿ, ಸಿಬ್ಬಂದಿ ಹಾಗೂ ನೋಂದಣಿ ಇಲಾಖೆಯ ಅಧಿಕಾರಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

**

ನಗರದಲ್ಲಿ ಕಾನೂನು ಬಾಹಿರವಾಗಿ 500ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ. ವಿಚಾರಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

ಮನೋಹರ, ನಗರಸಭೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry