ಅಕ್ಕಿ ಗಿರಣಿಗಳಲ್ಲಿ ಕೆಲಸ ಇಲ್ಲ

7
ತವರಿನತ್ತ ಮುಖ ಮಾಡಿದ ಬಿಹಾರ ಕಾರ್ಮಿಕರು

ಅಕ್ಕಿ ಗಿರಣಿಗಳಲ್ಲಿ ಕೆಲಸ ಇಲ್ಲ

Published:
Updated:
ಅಕ್ಕಿ ಗಿರಣಿಗಳಲ್ಲಿ ಕೆಲಸ ಇಲ್ಲ

ಸಿರುಗುಪ್ಪ:ಇಲ್ಲಿನ ಅಕ್ಕಿಗಿರಣಿಗಳಲ್ಲಿದ್ದ ಬಿಹಾರದ 3,000ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸವಿಲ್ಲದೆ ನಗರ ತೊರೆಯಲು ಆರಂಭಿಸಿದ್ದಾರೆ.

ಈ ವರ್ಷದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ರೈತರು ಭತ್ತ ಬೆಳೆದಿಲ್ಲ. ಅಕ್ಕಿಗಿರಣಿಗಳಿಗೆ ಭತ್ತದ ಕೊರತೆ ಉಂಟಾಗಿರುವುದು ಇದಕ್ಕೆ ಕಾರಣ. ನಿತ್ಯ ಇಲ್ಲಿನ ಬಸ್‌ ನಿಲ್ದಾಣಕ್ಕೆ ಬರುತ್ತಿರುವ ಕಾರ್ಮಿಕರು ತಂಡ ತಂಡವಾಗಿ ಸಾಮಗ್ರಿ, ಗಂಟುಮೂಟೆ ಕಟ್ಟಿಕೊಂಡು ಬಳ್ಳಾರಿಗೆ ತೆರಳಿ ಅಲ್ಲಿಂದ ರೈಲು ಮೂಲಕ ಬಿಹಾರಕ್ಕೆ ತೆರಳುತ್ತಿದ್ದಾರೆ.

ನಗರದಲ್ಲಿ ಸುಮಾರು 70ಕ್ಕೂ ಅಧಿಕ ಅಕ್ಕಿ ಗಿರಣಿಗಳಿವೆ. ಪ್ರತಿಯೊಂದರಲ್ಲೂ ಕನಿಷ್ಠ 50 ಕಾರ್ಮಿಕರು ನಿತ್ಯ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.

ಪ್ರತಿಯೊಬ್ಬರಿಗೆ ದಿನಕ್ಕೆ ₹500 ಕೂಲಿ ದರವಿದೆ. ಗಿರಣಿಗಳಲ್ಲಿ ಮಾಲೀಕರು ಹಾಕಿದ ಶೆಡ್‌ಗಳಲ್ಲಿಯೇ ನೆಲೆಸಿ ಕೂಲಿ ಮಾಡುವ ಅವರು ವರ್ಷದ ಎರಡು ಸೀಜನ್‌ಗಳಲ್ಲಿ ದುಡಿದು ಕುಟುಂಬಗಳಿಗೆ ಹಣ ಕಳಿಸುತ್ತಾರೆ.

‘ಈ ಬಾರಿ ಭತ್ತದ ಕೊರತೆಯಿಂದ ಬೇಸಿಗೆಯಲ್ಲಿ ಅಕ್ಕಿಗಿರಣಿಗಳ ಚಟುವಟಿಕೆಗಳು ಕುಸಿದಿವೆ. ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವ ಬದಲು ಊರುಗಳಿಗೆ ತೆರಳಿ ಮತ್ತೆ ದೀಪಾವಳಿಗೆ ಆರಂಭವಾಗುವ ಹಂಗಾಮಿಗೆ ಬರುತ್ತೇವೆ’ ಎಂದು ಕೆಲವು ಕಾರ್ಮಿಕರು ತಿಳಿಸಿದರು.

‘ಇಲ್ಲಿನ ಅಕ್ಕಿಗಿರಣಿಗಳಲ್ಲಿ ಬಿಹಾರಿಗಳು ಹಲವು ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಭತ್ತವನ್ನು ಚೀಲಕ್ಕೆ ತುಂಬುವುದು, ಒಣಗಿಸುವುದು, ಅಕ್ಕಿ ಮಾಡುವ ಕ್ರಿಯೆಯಲ್ಲಿ ನೆರವಾಗುವುದು ನಿತ್ಯದ ಕಾಯಕವಾಗಿದೆ’ ಎಂದು ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್‌.ಜಿ.ಬಸವರಾಜಪ್ಪ ’ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಸ್ಥಳೀಯವಾಗಿ ಹೆಚ್ಚು ಭತ್ತವನ್ನು ಬೆಳೆದಿಲ್ಲ. ಹೊರಗಡೆಯಿಂದ ಭತ್ತ ಖರೀದಿಸಿ ಅಕ್ಕಿ ಮಾಡಬೇಕಾಗಿದೆ. ಇದರಿಂದ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ’ ಎಂದು ಮಾಹಿತಿ ನೀಡಿದರು.

‘ಕೆಲಸ ಇಲ್ಲದೆ ಇದ್ದಾಗ ಕಾರ್ಮಿಕರು ತಮ್ಮ ರಾಜ್ಯಕ್ಕೆ ಹೋಗಿ ಮುಂಗಾರು ಹಂಗಾಮಿಗೆ ಬರುತ್ತಾರೆ’ ಎಂದು ಅವರು ತಿಳಿಸಿದರು.

**

ಸಿರಗುಪ್ಪದ 70 ಅಕ್ಕಿ ಗಿರಣಿಗಳಲ್ಲಿ ಬಿಹಾರ ಮೂಲದ 3,000 ಕಾರ್ಮಿಕರಿದ್ದಾರೆ, ಕೆಲಸವಿಲ್ಲದಾಗ ಊರಿಗೆ ಹೋಗಿ ಬರುವುದು ಸಾಮಾನ್ಯ

ಎನ್‌.ಜಿ.ಬಸವರಾಜಪ್ಪ, ಅಧ್ಯಕ್ಷ, ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘ

–ಎಂ.ಬಸವರಾಜಯ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry