ಸಂತಾನ ನೀಡುವ ‘ಲಜ್ಜಾ ಗೌರಿ’ಯರು

7
ನ್ಯೂಯಾರ್ಕ್‌ ಮ್ಯೂಸಿಯಂನಲ್ಲೂ ಇದೆ ‘ಲಜ್ಜಾ ಗೌರಿ’ ಮೂರ್ತಿಗಳು

ಸಂತಾನ ನೀಡುವ ‘ಲಜ್ಜಾ ಗೌರಿ’ಯರು

Published:
Updated:
ಸಂತಾನ ನೀಡುವ ‘ಲಜ್ಜಾ ಗೌರಿ’ಯರು

ಸಂತಾನ ಭಾಗ್ಯ ಸಿಗಲಿದೆ ಎಂದು ಭಕ್ತರು, ಜನಪದರು ನಂಬಿರುವ ‘ಲಜ್ಜಾ ಗೌರಿ’ಯರ ಮೂರ್ತಿಗಳು ಬಾದಾಮಿ ಚಾಲುಕ್ಯರ ಸ್ಮಾರಗಳ ಪರಿಸರದಲ್ಲಿ ಶಿಲ್ಪ ಕಲೆಯ ದೃಷ್ಟಿಯಿಂದಲೂ ಗಮನ ಸೆಳೆಯುತ್ತವೆ.

ಸಂತಾನ ಬಯಸುವ ಮಹಿಳೆಯರು ಈಗಲೂ ಲಜ್ಜಾಗೌರಿ ಮೂರ್ತಿಯನ್ನು ಆರಾಧಿಸುತ್ತಾರೆ. ಮದುವೆಯಾದ ನಂತರ ಲಜ್ಜಾ ಗೌರಿಯರಿಗೆ ಪೂಜೆ ಸಲ್ಲಿಸಿ ನಮಿಸುತ್ತಾರೆ.

  ಲಜ್ಜಾಗೌರಿ ಮೂರ್ತಿಯನ್ನು ಕ್ರಿ.ಪೂ 3ನೇ ಶತಮಾನದಿಂದಲೇ ಪೂಜಿಸುವುದು ಕಾಣಿಸುತ್ತದೆ. ಕ್ರಿ. ಶ. 12ನೇ ಶತಮಾನದ ವರೆಗೆ ದೇಶದ ವಿವಿಧ ಭಾಗಗಳಲ್ಲಿ ಇಂಥ ಮೂರ್ತಿಗಳನ್ನು ಕೆತ್ತಿರುವುದುನ್ನು ಕಾಣಬಹುದು ಎಂದು ಇತಿಹಾಸ ತಜ್ಞರ ಅಭಿಪ್ರಾಯಪಡುತ್ತಾರೆ.

ಹುಲಿಗೆಮ್ಮನಕೊಳ್ಳ, ನಾಗರಾಳ ಗ್ರಾಮದ ಹತ್ತಿರದ ನಾಗನಾಥಕೊಳ್ಳ, ಮಹಾಕೂಟ ಹಾಗೂ ಸಿದ್ದನಕೊಳ್ಳ ಮತ್ತು ಬೆನಕನವಾರಿಯಲ್ಲಿ ಇಂಥ ಮೂರ್ತಿಗಳನ್ನು ಕಾಣುತ್ತೇವೆ.

ಮಹಾಕೂಟ ರಸ್ತೆಯ ನಾಗರಾಳ ಗ್ರಾಮದ ಸಮೀಪದ ನಾಗನಾಥ ದೇವಾಲಯದ ಪರಿಸರದಲ್ಲಿದ್ದ ಲಜ್ಜಾಗೌರಿ ಮೂರ್ತಿಯನ್ನು ಈಗ ಬಾದಾಮಿ ವಸ್ತುಸಂಗ್ರಹಾಲಯದಲ್ಲಿ ವೀಕ್ಷಿಸಬಹುದಾಗಿದೆ. ಇಲ್ಲಿನ ಮೂರ್ತಿಯು ಬಾದಾಮಿ ಶ್ವೇತ ಮರಳು ಶಿಲೆಯಲ್ಲಿ ಸೂಕ್ಷ್ಮ ಕೆತ್ತನೆಗಳನ್ನು ಒಖಗೊಂಡಿದೆ.

ಹೊಸ ಮಹಾಕೂಟದಲ್ಲಿನ ಮರಳು ಶ್ವೇತ ಕಲ್ಲಿನ ಲಜ್ಜಾಗೌರಿ ಮೂರ್ತಿಯನ್ನು ಯಾರೋ ಭಗ್ನಗೊಳಿಸಿದ್ದಾರೆ. ದೇವಾಲಯದ ವಿಷ್ಣು ಹೊಂಡದ ಪೂರ್ವದಿಕ್ಕಿನಲ್ಲಿ ಭಗ್ನಗೊಂಡ ಮೂರ್ತಿಯನ್ನು ಕಾಣುತ್ತೇವೆ.

ಹುಲಿಗೆಮ್ಮನಕೊಳ್ಳದಲ್ಲಿ ಎರಡು ಮೂರ್ತಿಗಳನ್ನು ಕಾಣಬಹುದು. ಒಂದು ದೊಡ್ಡ ಮೂರ್ತಿ ಇನ್ನೊಂದು ಬೆಟ್ಟಕ್ಕೆ ತಾಕಿಕೊಂಡಿ ಚಿಕ್ಕ ಲಜ್ಜಾಗೌರಿಮೂರ್ತಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಹುಲಿಗೆಮ್ಮನಕೊಳ್ಳದ ಅನತಿ ದೂರದಲ್ಲಿರುವ ಪಟ್ಟದಕಲ್ಲು ಸಮೀಪದ ಸಿದ್ದನಕೊಳ್ಳದ ಪರಿಸರದಲ್ಲಿ ಎರಡು ಮೂರ್ತಿಗಳಿವೆ ಸಿದ್ದನಕೊಳ್ಳದ ಗುಹೆಯಲ್ಲಿ ಮತ್ತು ಬೆನಕನವಾರಿ ಬೆಟ್ಟದ ಮೇಲೆ ಒಂದು ಲಜ್ಜಾಗೌರಿ ಮೂರ್ತಿಇದೆ.

ಪ್ರಾಚೀನ ಸಂಸ್ಕೃತಿಗಳಲ್ಲಿ ಮಾನವರು ನಿಸರ್ಗದ ವಿವಿಧ ರೂಪಗಳಾದ ಮರ, ನದಿ, ಸೂರ್ಯ, ಚಂದ್ರನನ್ನು ಪೂಜಿಸುತ್ತಿದ್ದರು.ನಂತರದಲ್ಲಿ ಶಿಲ್ಪಿಗಳು ತಮ್ಮ ಕಲ್ಪನಾ ಶಕ್ತಿಯಿಂದ ದೇವತಾ ಮೂರ್ತಿಗಳಿಗೆ ಅದ್ಭುತವಾದ ರೂಪಗಳನ್ನು ಕೊಟ್ಟರು. ಪುರಾತತ್ವ ಉತ್ಖನನದಲ್ಲಿ 3–4 ನೇ ಶತಮಾನದಲ್ಲಿ ಮಣ್ಣಿನಿಂದ ರೂಪಿಸಿದ ದೇವತಾ ಮೂರ್ತಿಗಳು ಲಭ್ಯವಾಗಿವೆ ಎಂದು ಇತಿಹಾಸದಿಂದ ತಿಳಿಯಬಹುದಾಗಿದೆ.

ಈ ಮಾತೃದೇವತೆಯ ಮೂರ್ತಿಯು ನಗ್ನಾವಸ್ಥೆಯಲ್ಲಿ ಇರುವುದರಿಂದ ಲಜ್ಜೆ ಇಲ್ಲದ ದೇವತೆ ಇಲ್ಲವೇ ‘ಲಜ್ಜಾಗೌರಿ’ ಎಂದು ಕರೆಯುವರು. ಲಜ್ಜಾಗೌರಿ ಮೂರ್ತಿ ಶಿಲ್ಪವು ಪ್ರಸವಭಂಗಿಯಲ್ಲಿ ಕಾಲುಗಳನ್ನು ಅಗಲಿಸಿ ಸುಲಭ ವಾದ ಹೆರಿಗೆಗೆ ಅನುಕೂಲವಾಗುವಂತಹ ಭಂಗಿಯಲ್ಲಿವೆ. ರುಂಡವು ಸಂಪೂರ್ಣವಾಗಿ ಕಮಲದ ಹೂವಿನಾಕಾರವಿದೆ. ಎರಡೂ ಕೈಗಳಲ್ಲಿ ಅರಳಿದ ಕಮಲವಿದೆ. ಕಮಲದ ಹೂವು ಇರುವುದು ಶಿಲ್ಪದ ವಿಶಿಷ್ಟವಾಗಿದೆ.ಅರಳಿದ ಕಮಲದ ಹೂವನ್ನು ಹಿಂದೂ ಪ್ರತಿಮಾಶಾಸ್ತ್ರದ ಪ್ರಕಾರ ಫಲವತ್ತತೆ ಮತ್ತು ಶುಭ ಸಂಕೇತವಾಗಿ ಗುರುತಿಸಲಾಗಿದೆ.

ನೀರು ನಿಸರ್ಗಕ್ಕೆ ಪ್ರಾಣದಾಯಕವಾದರೆ, ಸ್ತ್ರೀಯು ಮಾನವ ಕುಲಕ್ಕೆ ಜೀವದಾಯಿನಿಯಾಗಿರುವಳು. ಲಜ್ಜಾಗೌರಿ ಮೂರ್ತಿಗಳನ್ನು ಕೊಳ್ಳದಲ್ಲಿಯೇ ಪ್ರತಿಷ್ಠಾಪಿಸಲಾಗಿದೆ. ಚಾಲುಕ್ಯರ ಪರಿಸರದ ನಾಗನಾಥ ಕೊಳ್ಳ, ಮಹಾಕೂಟಕೊಳ್ಳ, ಹುಲಿಗೆಮ್ಮನಕೊಳ್ಳ,ಸಿದ್ದನಕೊಳ್ಳಗಳಲ್ಲಿ ಮತ್ತು ಮಹಾರಾಷ್ಟ್ರ,ಆಂಧ್ರಪ್ರದೇಶ , ಮಧ್ಯಪ್ರದೇಶ ರಾಜ್ಯಗಳಲ್ಲಿ ಲಜ್ಜಾಗೌರಿ ಶಿಲಾ ಮೂರ್ತಿಗಳನ್ನು ಕಾಣಬಹುದು.

ಲಜ್ಜಾಗೌರಿ ಮೂರ್ತಿಯನ್ನು ಆಂಧ್ರಪ್ರದೇಶದ ಆಲಂಪುರ ವಸ್ತುಸಂಗ್ರಹಾಲಯ ಮತ್ತು ನ್ಯೂಯಾರ್ಕ್‌ ಮೆಟ್ರೋಪಾಲಿಟಿನ್‌ ಮ್ಯುಜಿಯಂನಲ್ಲಿ ವೀಕ್ಷಿಸಬಹುದಾಗಿದೆ.

ನ್ಯೂಯಾರ್ಕ ಮ್ಯುಜಿಯಂನಲ್ಲಿರುವ ಲಜ್ಜಾಗೌರಿ ಮೂರ್ತಿ ಬಗ್ಗೆ ಸಂಶೋಧನೆ ಅಗತ್ಯವಾಗಿದೆ. ಬಾದಾಮಿ ವಸ್ತುಸಂಗ್ರಹಾಲಯದಲ್ಲಿರುವ ನಾಗನಾಥನಕೊಳ್ಳದಲ್ಲಿ ಲಭ್ಯವಾಗಿರುವ 8 ನೇ ಶತಮಾನದ ಲಜ್ಜಾಗೌರಿ ಮೂರ್ತಿಯನ್ನು  ಅತ್ಯಾಕರ್ಷಕವಾಗಿ ಕಡೆಯಲಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಎಸ್‌.ಐ. ಪತ್ತಾರ ಹೇಳಿದರು.

– ಎಸ್‌.ಎಂ. ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry