ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ನೆಪ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಸದ್ಯ ಕರ್ನಾಟಕದ ರಾಜಕೀಯ ಒಂದು ಹಂತಕ್ಕೆ ತಲುಪಿದೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿರುವುದು ಬೇರೆಬೇರೆ ರೀತಿಯ ವಿಶ್ಲೇಷಣೆಗೆ ಅವಕಾಶ ಒದಗಿಸಿದೆ. ಈ ಮೈತ್ರಿಕೂಟ ‘ಅನೈತಿಕ’ ಎಂದೋ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದೋ ಬಿಜೆಪಿ ಹಾಗೂ ಅದರ ಬೆಂಬಲಿಗರು ಟೀಕೆ ಮಾಡಿದ್ದಾರೆ.

ಮೈತ್ರಿ ಪರವಾಗಿರುವವರು, ಪ್ರಜಾಪ್ರಭುತ್ವದ ‘ಘನತೆ’ ಎತ್ತಿ ಹಿಡಿದಂತಾಯಿತೆಂದೋ ಸಂವಿಧಾನದ ಆಶಯಕ್ಕೆ ತಕ್ಕುದಾಗಿದೆ ಎಂದೋ ಸಮರ್ಥನೆ ಮಾಡುತ್ತಿದ್ದಾರೆ. ಆರೋಪ- ಪ್ರತ್ಯಾರೋಪ ಏನೇ ಇರಲಿ. ವಾಸ್ತವದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆಯೇ?

ಪೂರ್ವಗ್ರಹರಹಿತವಾಗಿ, ಸಾಮಾನ್ಯ ಪ್ರಜ್ಞೆ ಮತ್ತು ಕನಿಷ್ಠ ವಿವೇಕದಿಂದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನಿರಾಶೆ ಆವರಿಸಿಕೊಳ್ಳುತ್ತದೆ. ಸಂವಿಧಾನದ ಚೌಕಟ್ಟಿನಲ್ಲಿ ನಡೆದ ಚುನಾವಣೆ ಹಾಗೂ ಅದರ ಫಲಿತಾಂಶವು ಪ್ರಜಾಪ್ರಭುತ್ವದ ನೈಜ ಆಶಯವನ್ನು ಸ್ಥಾಪಿಸುತ್ತಿಲ್ಲವೆಂದು ಕಳವಳವಾಗುತ್ತೆ.

ಕರಾವಳಿ ಕರ್ನಾಟಕದಲ್ಲಿಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿರುವುದರಿಂದ ಅಲ್ಲಿ ಉಗ್ರ ಹಿಂದುತ್ವ ಪ್ರಬಲವಾಗಿ ಬೇರುಬಿಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಲಿಂಗಾಯತರಲ್ಲಿ ಬಹುತೇಕರು ಹಿಂದುತ್ವಕ್ಕೆ ಬಹಿರಂಗ ಸಮ್ಮತಿ ಹೊಂದಿದ್ದಾರೆ. ಇದೀಗ ತಳವರ್ಗದವರಲ್ಲೂ ಧಾರ್ಮಿಕ ಅಂಧತ್ವ ಹಬ್ಬುತ್ತಿದೆ. ಇದು ನಿಜಕ್ಕೂ ಅಪಾಯಕಾರಿ.

ಮೈಸೂರು ಭಾಗ, ಅರ್ಥಾತ್ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಕ್ಕಲಿಗರ ಒಗ್ಗೂಡುವಿಕೆಯಿಂದ ಜೆಡಿಎಸ್ ಅಧಿಕಾರದ ಕುರ್ಚಿಯಲ್ಲಿ ಕೂರುತ್ತಿದೆ. ಧರ್ಮ, ಜಾತಿಗಳೇ ಮತ್ತೆ ಮತ್ತೆ ವಿಭಜಕ ಶಕ್ತಿಗಳಾಗಿ ಹೆಪ್ಪುಗಟ್ಟಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿವೆ. ಇದೆಲ್ಲಾ ‘ಚುನಾವಣೆ’ ಎಂಬ ಸಂವಿಧಾನಾತ್ಮಕ ವೇದಿಕೆಯಲ್ಲಿ ನಡೆಯುತ್ತಿದೆ.

ನಗರ ಪ್ರದೇಶದಲ್ಲಿ ಹಾಗೂ ಸುಶಿಕ್ಷಿತರಲ್ಲಿ ಹೆಪ್ಪುಗಟ್ಟುತ್ತಿರುವ ಈ ಧರ್ಮ- ಜಾತಿ ಭಾವನೆಗಳು ಸಂವಿಧಾನದ ಆಶಯದ ಬೆನ್ನುಮೂಳೆ ಮುರಿಯುತ್ತಿವೆ. ಅವೈಚಾರಿಕತೆ ಮತ್ತು ಬೌದ್ಧಿಕ ದಾರಿದ್ರ್ಯದಿಂದ ಬಳಲುತ್ತಿರುವ ಯುವ ಸಮುದಾಯದ ಸಂಖ್ಯೆ ಕಂಗೆಡಿಸುವಷ್ಟಿದೆ. ಪ್ರಬುದ್ಧತೆ ಬರದೆ ಪ್ರಜಾಪ್ರಭುತ್ವ ನಿಜವಾಗಿಯೂ ಬರದು ಮತ್ತು ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT